SUDDIKSHANA KANNADA NEWS/ DAVANAGERE/ DATE:18-02-2025
ದಾವಣಗೆರೆ: ಕುಸುಮ್ ಬಿ ಯೋಜನೆಯಡಿ ರೈತರ ಪಂಪ್ಸೆಟ್ಗಳಿಗೆ ಸೋಲಾರ್ ವಿದ್ಯುತ್ ಸಂಪರ್ಕ ಕಲ್ಪಿಸುವುದಾಗಿದೆ. 7.5 ಹೆಚ್ಪಿ ವರೆಗೆ ಅವಕಾಶ ಇದ್ದು ರೈತರು ಶೇ 20 ರಷ್ಟು ವಂತಿಗೆಯನ್ನು ಕಟ್ಟಬೇಕು.
ಕೇಂದ್ರ ಶೇ 30 ಹಾಗೂ ರಾಜ್ಯ ಶೇ 50 ರಷ್ಟು ಸಹಾಯಧನ ಘಟಕ ವೆಚ್ಚಕ್ಕೆ ನೀಡಲಿದೆ. ಮತ್ತು ಕುಸುಮ್-ಸಿ ಯೋಜನೆಯಡಿ ಖಾಸಗಿ ಹಾಗೂ ಸರ್ಕಾರಿ ಜಮೀನುಗಳಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆ ಮಾಡುವ ಮೂಲಕ ಗ್ರಿಡ್ಗೆ ಪೂರೈಕೆ ಮಾಡುವುದಾಗಿದೆ. ರೈತರು ಸೋಲಾರ್ ಪಂಪ್ಸೆಟ್ ಅಳವಡಿಕೆಗೆ ಮುಂದೆ ಬಂದಲ್ಲಿ ಹೆಚ್ಚು ಅನುಕೂಲವಾಗಲಿದೆ.
ಇಂಧನ ಸಚಿವ ಕೆ. ಜೆ. ಜಾರ್ಜ್ ಅವರು ಈ ಕುರಿತಂತೆ ದಾವಣಗೆರೆಯಲ್ಲಿ ಮಾಹಿತಿ ನೀಡಿದರು.
ಪಂಪ್ಸೆಟ್ಗಳಿಗೆ ಶೀಘ್ರ ಸಂಪರ್ಕಕ್ಕೆ ಕ್ರಮ:
ರೈತರ ಕೃಷಿ ಪಂಪ್ಸೆಟ್ಗಳಿಗೆ 2004 ರಿಂದಲೂ ಅಕ್ರಮ-ಸಕ್ರಮ ಎಂಬ ಕಾರ್ಯಕ್ರಮದಡಿ ಅನಧಿಕೃತ ಸಂಪರ್ಕವನ್ನು ಸಕ್ರಮ ಮಾಡುತ್ತಾ ಬರಲಾಗಿದೆ. ಇದರಡಿ ಮೂಲಭೂತ ಸೌಕರ್ಯದಡಿ ಮಾರ್ಗ, ಟಿಸಿ ಅಳವಡಿಕೆ ಮಾಡಲಾಗಿದೆ. ಬಾಕಿ ಇರುವ 4946 ಪಂಪ್ಸೆಟ್ಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಟೆಂಡರ್ ಕರೆಯಲಾಗಿದೆ. ರೈತರು ಸ್ವಂತವಾಗಿ ಮೂಲಭೂತ ಸೌಕರ್ಯ ಮಾಡಿಕೊಂಡು ಕೃಷಿ ಪಂಪ್ಸೆಟ್ಗಳಿಗೆ ತಕ್ಷಣವೇ ಸಂಪರ್ಕ ಪಡೆಯಲು ಹಾಗೂ ಇಲಾಖೆಯಿಂದ ಮೂಲಭೂತ ಸೌಕರ್ಯಕ್ಕಾಗಿ ಸರತಿಯಲ್ಲಿ ಕಾಯುವ ಎರಡು ಅವಕಾಶಗಳನ್ನು ಮಾಡಿಕೊಟ್ಟಲ್ಲಿ ಸ್ವಂತವಾಗಿ ಮಾಡಿಕೊಳ್ಳುವ ರೈತರಿಗೆ ಅನುಕೂಲವಾಗುತ್ತದೆ ಎಂಬ ಚಿಂತನೆ ಮಾಡಲಾಗಿದೆ ಎಂದು ಹೇಳಿದರು.
ಈ ವೇಳೆ ಶಾಸಕ ಕೆ.ಎಸ್.ಬಸವಂತಪ್ಪ, ಲತಾ ಮಲ್ಲಿಕಾರ್ಜುನ್, ಬಿ.ದೇವೇಂದ್ರಪ್ಪ, ಕೆಪಿಟಿಸಿಎಲ್ ಎಂಡಿ ಪಂಕಜ್ಕುಮಾರ್ ಪಾಂಡೆ, ಬೆಸ್ಕಾಂ ಎಂಡಿ ಡಾ; ಶಿವಶಂಕರ್ ಎನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಬೆಸ್ಕಾಂ ಅಧೀಕ್ಷಕ ಇಂಜಿನಿಯರ್ ಪಾಟೀಲ್ ಹಾಗೂ ಬೆಸ್ಕಾಂ, ಕೆಪಿಟಿಸಿಎಲ್ ಅಧಿಕಾರಿಗಳು ಉಪಸ್ಥಿತರಿದ್ದರು.