SUDDIKSHANA KANNADA NEWS/ DAVANAGERE/ DATE:02-12-2024
ಬೆಂಗಳೂರು: ಆರ್ ಟಿ ನಗರದ ತರಳಬಾಳು ಕೇಂದ್ರದಲ್ಲಿ ತರಳಬಾಳು ಸಮಿತಿ ಆಯೋಜಿಸಿದ್ದ ಹಾಸ್ಯ ಸಂಜೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ಬೆಂಗಳೂರಿನ ಒತ್ತಡ ಮತ್ತು ಜಂಜಾಟದಲ್ಲಿರುವ ನಮ್ಮ ಶಿಷ್ಯರುಗಳಿಗೆ ಅವರ ಮನಸ್ಸನ್ನು ತಿಳಿಗೊಳಿಸುವ ಉದ್ದೇಶದಿಂದ ಈ ಹಾಸ್ಯ ಸಂಜೆ ಕಾರ್ಯಕ್ರಮವನ್ನು ಆಯೋಜಿಸಿದ್ದು, ಎಲ್ಲರೂ ಸಂತೋಷ ಪಟ್ಟಿರುವುದು ತೃಪ್ತಿ ತಂದಿದೆ ಎಂದರು.
ನಗುವುದು ಮಾನವನ ಸಹಜವಾದ ಧರ್ಮ. ನಗಿಸುವುದು ನಾವು ಆಚರಿಸಬಹುದಾದ, ಪರಧರ್ಮ. ಮತ್ತೊಬ್ಬರ ನಗುವನ್ನು ಕೇಳುತ್ತಾ, ನಾವು ನಗುವುದು ಅತಿಶಯದ ಧರ್ಮ. ನಾವು ನಗುವ, ನಗಿಸುವ, ಮತ್ತೊಬ್ಬರನ್ನು ನಗಿಸುವಾಗ ನಾವೂ ನಗುವಂತಹ ಭಾವವನ್ನು ಎಲ್ಲರೂ ಮೈಗೂಡಿಸಿಕೊಳ್ಳುವಂತೆ ಮಾರ್ಗದರ್ಶನ ನೀಡಿದರು.
ತಮ್ಮ ಅನುಭವದ ಮೂರ್ನಾಲ್ಕು ಹಾಸ್ಯ ಪ್ರಸಂಗಗಳನ್ನು ಹಂಚಿಕೊಂಡ ಶ್ರೀ ಜಗದ್ಗುರುಗಳವರ ಆಶೀರ್ವಚನವು ಮತ್ತೊಮ್ಮೆ ಎಲ್ಲರನ್ನೂ ನಗೆಗಡಲಲ್ಲಿ ಮಿಂದೇಳುವಂತೆ ಮಾಡಿತು. 2025ರ ಜನವರಿ -11 ರಂದು ಇದೇ ವೇದಿಕೆಯಲ್ಲಿ ತರಳಬಾಳು ಕೇಂದ್ರದ ಸಮಿತಿಯವರು ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ತರಳಬಾಳು ಕೇಂದ್ರದ ಕಾರ್ಯಕ್ರಮಗಳಿಗೆ ತಮ್ಮ ಬಂಧು ಮಿತ್ರರಿಗೆ, ಮಕ್ಕಳನ್ನು ಕರೆದುಕೊಂಡು ಬರುವಂತೆ ಶ್ರೀ ಜಗದ್ಗುರುಗಳವರು ಸೂಚಿಸಿದರು.
ವಿಶ್ರಾಂತ ನ್ಯಾಯಮೂರ್ತಿಗಳಾದ ಶರಣ ಜಸ್ಟೀಸ್ ಶಿವರಾಜ್ ಪಾಟೀಲ್ ರವರು, IPS ಅಧಿಕಾರಿ ಶ್ರೀ ಯತೀಶ್ ಚಂದ್ರ, ವಿಶ್ರಾಂತ ಪೋಲೀಸ್ ವರಿಷ್ಠಾಧಿಕಾರಿ ಶ್ರೀ ಶಿವಕುಮಾರ್, ನೀರಾವರಿ ನಿಗಮದ ವಿಶ್ರಾಂತ ಎಂ.ಡಿ ಶ್ರೀ ಮಲ್ಲಿಕಾರ್ಜುನ ಗುಂಗೆ, ಹಿರಿಯರಾದ ಶ್ರೀ ಶಿವಾನಂದ್, ತರಳಬಾಳು ಕೇಂದ್ರದ ಕಾರ್ಯದರ್ಶಿ ಶ್ರೀ ವಿಶ್ವನಾಥ್ ಬಾತಿ, ಸೇರಿದಂತೆ ತರಳಬಾಳು ಕೇಂದ್ರದ ಪದಾಧಿಕಾರಿಗಳು, ಉಪಸ್ಥಿತರಿದ್ದರು. ತರಳಬಾಳು ಕೇಂದ್ರದ ಸಮಿತಿಯ ಅಧ್ಯಕ್ಷರಾದ ಶರಣ ಚಂದ್ರಪ್ಪ ನವರು ಸ್ವಾಗತಿಸಿ, ಕೇಂದ್ರದ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ ನೀಡಿದರು.
ತರಳಬಾಳು ಕೇಂದ್ರದ ಸಿಬ್ಬಂದಿಯವರ ಪ್ರೀತಿ ಸೌಜನ್ಯದ ದಾಸೋಹ ವ್ಯವಸ್ಥೆಯು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.