Home ದಾವಣಗೆರೆ “ರಾಜಕಾರಣದಿಂದ ಪ್ರಾಮಾಣಿಕರು ದೂರವಾಗುತ್ತಿರುವುದೇಕೆ? ಚುನಾವಣಾ ವ್ಯವಸ್ಥೆಯ ಕಟು ಸತ್ಯ ನುಡಿದ ಮಾಜಿ ಸಿಎಂ ಸಿದ್ದರಾಮಯ್ಯ!”
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

“ರಾಜಕಾರಣದಿಂದ ಪ್ರಾಮಾಣಿಕರು ದೂರವಾಗುತ್ತಿರುವುದೇಕೆ? ಚುನಾವಣಾ ವ್ಯವಸ್ಥೆಯ ಕಟು ಸತ್ಯ ನುಡಿದ ಮಾಜಿ ಸಿಎಂ ಸಿದ್ದರಾಮಯ್ಯ!”

Share
ಸಿದ್ದರಾಮಯ್ಯ
Share

ಬೆಂಗಳೂರು: 2006ರ ಚಾಮುಂಡೇಶ್ವರಿ ಉಪಚುನಾವಣೆಯ ವೇಳೆಗೆ ಪರಿಸ್ಥಿತಿ ಬಹಳಷ್ಟು ಬದಲಾಗಿತ್ತು. ಎದುರಾಳಿ ಅಭ್ಯರ್ಥಿಯ ಪರವಾಗಿ ದೊಡ್ಡ ಪ್ರಮಾಣದಲ್ಲಿ ಹಣ ಖರ್ಚು ಮಾಡಲಾಗುತ್ತಿತ್ತು. ಅದಕ್ಕೆ ಪ್ರತಿಯಾಗಿ ನಾನೂ ಹಣ ಖರ್ಚು ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಯಿತು. ಅಲ್ಲಿಂದೀಚೆಗೆ ಚುನಾವಣೆಯಲ್ಲಿ ಹಣದ ಪ್ರಭಾವ ಮತ್ತಷ್ಟು ಹೆಚ್ಚಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದರು.

ಜೆ. ಹೆಚ್. ಪಟೇಲ್ ಅವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಸ್ಮರಣೋತ್ಸವ ಮತ್ತು ಚುನಾವಣೆ ಸುಧಾರಣೆಯಿಂದ ಸಮಾಜದ ಸುಧಾರಣೆ” ಕುರಿತಾದ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಪಟೇಲರೊಂದಿಗಿನ ನನ್ನ ಒಡನಾಟ, ಅವರ ಅನನ್ಯ ವ್ಯಕ್ತಿತ್ವವನ್ನು ಸ್ಮರಿಸಿ, ಚುನಾವಣಾ ಸುಧಾರಣೆಯ ಅಗತ್ಯತೆಯ ಕುರಿತು ಮಾತನಾಡಿದರು.

ಇಂದು ಹಣವಿಲ್ಲದೆ, ಮದ್ಯ ಹಂಚದೆ ಮತ್ತು ಜಾತಿಯ ಲೆಕ್ಕಾಚಾರ ಮಾಡದೆ ಚುನಾವಣೆ ಗೆಲ್ಲುವುದು ಕಷ್ಟ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ವ್ಯವಸ್ಥೆಯಿಂದ ಸಮಾಜದಲ್ಲಿರುವ ಪ್ರಾಮಾಣಿಕರು, ಬಡವರು, ಬುದ್ಧಿವಂತರು ಮತ್ತು ಸಮಾಜ ಸೇವೆ ಮಾಡಬೇಕೆಂಬ ಉದ್ದೇಶ ಹೊಂದಿರುವವರು ಚುನಾವಣಾ ರಾಜಕಾರಣದಿಂದ ದೂರ ಉಳಿಯುವಂತಾಗಿದೆ
ಎಂದು ತಿಳಿಸಿದರು.

ಚುನಾವಣಾ ವ್ಯವಸ್ಥೆಯ ಸುಧಾರಣೆಗೆ ಈ ಹಿಂದೆಯೂ ಹಲವು ಪ್ರಯತ್ನಗಳು ನಡೆದಿವೆ. ವಿ.ಪಿ. ಸಿಂಗ್ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ದಿನೇಶ್ ಗೋಸ್ವಾಮಿ ಸಮಿತಿ, ಪಿ.ವಿ. ನರಸಿಂಹರಾವ್ ಅವರ ಅವಧಿಯಲ್ಲಿ ಎನ್.ಎನ್. ವೋಹ್ರಾ ಸಮಿತಿ ಹಾಗೂ ಅಟಲ್ ಬಿಹಾರಿ ವಾಜಪೇಯಿ ಅವರ ಅವಧಿಯಲ್ಲಿ ಇಂದ್ರಜಿತ್ ಗುಪ್ತಾ ಸಮಿತಿ ರಚಿಸಲಾಗಿತ್ತು. ಈ ಸಮಿತಿಗಳ ಶಿಫಾರಸುಗಳನ್ನು ಸಮಗ್ರವಾಗಿ ಜಾರಿಗೆ ತಂದಿದ್ದರೆ ಚುನಾವಣಾ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆ ತರಬಹುದಾಗಿತ್ತು. ಆದರೆ ಶಿಫಾರಸುಗಳು ಪೂರ್ಣ ಪ್ರಮಾಣದಲ್ಲಿ ಜಾರಿಯಾಗಲಿಲ್ಲ ಎಂದರು.

ಇಂದ್ರಜಿತ್ ಗುಪ್ತಾ ಸಮಿತಿ ಪ್ರಸ್ತಾಪಿಸಿದ್ದ ಮಾದರಿಯಲ್ಲಿ ಚುನಾವಣಾ ವೆಚ್ಚವನ್ನು ಸರ್ಕಾರವೇ ಭರಿಸುವ ವ್ಯವಸ್ಥೆ ಜಾರಿಗೆ ತರುವ ಕುರಿತು ಗಂಭೀರವಾಗಿ ಚಿಂತಿಸಬೇಕು. ಅಭ್ಯರ್ಥಿಗಳಿಗೆ ಸಮಾನ ಅವಕಾಶ ಕಲ್ಪಿಸುವುದರ ಜೊತೆಗೆ ರಾಜಕೀಯ ಪಕ್ಷಗಳ ನೀತಿ, ಸಿದ್ಧಾಂತ ಮತ್ತು ಕಾರ್ಯಕ್ರಮಗಳನ್ನು ಮಾಧ್ಯಮಗಳ ಮೂಲಕ ಮತದಾರರಿಗೆ ತಲುಪಿಸುವ ವ್ಯವಸ್ಥೆ ರೂಪಿಸಬೇಕು. ಇದರಿಂದ ಚುನಾವಣೆಯಲ್ಲಿ ಹಣದ ದುರ್ಬಳಕೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಚುನಾವಣೆಗಳು ಸ್ವತಂತ್ರವಾಗಿ, ನಿಷ್ಪಕ್ಷಪಾತವಾಗಿ ಮತ್ತು ಪಾರದರ್ಶಕವಾಗಿ ನಡೆಯಬೇಕು. ಅದಕ್ಕಾಗಿ ಕೇವಲ ಕಾನೂನು ಅಥವಾ ಚುನಾವಣಾ ಆಯೋಗದ ಮಟ್ಟದಲ್ಲಿ ಬದಲಾವಣೆ ಮಾಡಿದರೆ ಸಾಲದು. ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಹಾಗೂ ಮತದಾರರ ಮನೋಭಾವದಲ್ಲಿಯೂ ಬದಲಾವಣೆ ಆಗಬೇಕು ಎಂದು ಪ್ರತಿಪಾದಿಸಿದರು.

ರಾಜಕಾರಣಿಗಳು ಅಧಿಕಾರದಲ್ಲಿದ್ದಾಗ ಹಣ ಮಾಡುತ್ತಾರೆ ಎಂದು ಆರೋಪಿಸುವವರೇ ಚುನಾವಣೆಯ ಸಂದರ್ಭದಲ್ಲಿ ಅಭ್ಯರ್ಥಿಗಳು ನೀಡುವ ಹಣವನ್ನು ಸ್ವೀಕರಿಸುವ ಮನೋಭಾವ ಹೊಂದಿರುವುದು ಸರಿಯಲ್ಲ. ಹಣ ಕೊಟ್ಟರೆ ತೆಗೆದುಕೊಳ್ಳೋಣ ಎಂಬ ಮತದಾರರ ಮನೋಭಾವವೂ ಬದಲಾಗಬೇಕು. ಚುನಾವಣಾ ವ್ಯವಸ್ಥೆಯ ಸುಧಾರಣೆಯ ಜೊತೆಗೆ ಮತದಾರರಲ್ಲಿಯೂ ಪ್ರಜಾಸತ್ತಾತ್ಮಕ ಜಾಗೃತಿ ಮತ್ತು ವೈಚಾರಿಕತೆ ಬೆಳೆಯಬೇಕು ಎಂದು ಹೇಳಿದರು.

ಶಿಕ್ಷಣದ ಪ್ರಮಾಣ ಹೆಚ್ಚಾಗಿದ್ದರೂ ಸಮಾಜದಲ್ಲಿ ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವ ಅದೇ ಪ್ರಮಾಣದಲ್ಲಿ ಬೆಳೆದಿಲ್ಲ. ಓದಿಕೊಂಡವರಲ್ಲಿಯೂ ಜಾತಿ ಆಧಾರಿತ ಚಿಂತನೆ ಮುಂದುವರಿದಿದೆ. ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಯ ಅರ್ಹತೆ, ನೀತಿ ಮತ್ತು ಕಾರ್ಯಕ್ರಮಗಳಿಗಿಂತ ಜಾತಿ ಯಾವುದು ಎಂಬ ಪ್ರಶ್ನೆಗೆ ಆದ್ಯತೆ ಸಿಗುತ್ತಿರುವುದು ಬದಲಾಗಬೇಕು. ಶಿಕ್ಷಣ ವ್ಯವಸ್ಥೆಯೂ ವೈಚಾರಿಕ ಮತ್ತು ವೈಜ್ಞಾನಿಕ ಮನೋಭಾವ ಬೆಳೆಸುವಂತಿರಬೇಕು ಎಂದು ಹೇಳಿದರು.

ರಾಜಕೀಯ ಪ್ರಜಾಪ್ರಭುತ್ವದ ಜೊತೆಗೆ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯೂ ಮುಖ್ಯ. ಸಮಾಜದಲ್ಲಿ ಅಸಮಾನತೆ, ಜಾತೀಯತೆ ಮತ್ತು ಅಸ್ಪೃಶ್ಯತೆ ಮುಂದುವರಿದಿರುವಾಗ ಪ್ರಜಾಪ್ರಭುತ್ವದ ಆಶಯ ಸಂಪೂರ್ಣವಾಗಿ ಸಾಕಾರಗೊಂಡಿದೆ ಎಂದು ಹೇಳಲು ಸಾಧ್ಯವಿಲ್ಲ. ಚುನಾವಣಾ ವ್ಯವಸ್ಥೆಯಲ್ಲಿನ ಲೋಪಗಳನ್ನು ಸರಿಪಡಿಸುವುದೂ ಸಾಮಾಜಿಕ ಬದಲಾವಣೆಯ ಪ್ರಮುಖ ಭಾಗವಾಗಿದೆ. ಎಲ್ಲ ರಾಜಕೀಯ ಪಕ್ಷಗಳ ಸಿದ್ಧಾಂತ, ನೀತಿ ಮತ್ತು ಕಾರ್ಯಕ್ರಮಗಳು ಬೇರೆ ಬೇರೆಯಾಗಿರಬಹುದು. ಆದರೆ ಚುನಾವಣಾ ವ್ಯವಸ್ಥೆಯ ಸುಧಾರಣೆಯ ವಿಚಾರದಲ್ಲಿ ಎಲ್ಲರೂ ಮುಕ್ತ ಮನಸ್ಸಿನಿಂದ ಹಾಗೂ ಪ್ರಾಮಾಣಿಕವಾಗಿ ಚರ್ಚಿಸಬೇಕು. ಕೆಲವರು ಮಾತ್ರ ಧ್ವನಿ ಎತ್ತುವುದರಿಂದ ಸಮಗ್ರ ಬದಲಾವಣೆ ಸಾಧ್ಯವಿಲ್ಲ. ಸಾರ್ವಜನಿಕ ವಲಯದಲ್ಲಿ ನಿರಂತರ ಚರ್ಚೆ ನಡೆದು, ಅದರಿಂದ ಸುಧಾರಣೆಯ ಸ್ಪಷ್ಟ ಕ್ರಮಗಳು ಹೊರಬರಬೇಕು ಎಂದು ತಿಳಿಸಿದರು.

ಜೆ.ಹೆಚ್. ಪಟೇಲ್ ಅವರ ಸ್ಮರಣೆ

ಇದೇ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಜೆ.ಹೆಚ್. ಪಟೇಲರನ್ನು ಸ್ಮರಿಸಿದೆ. ಪಟೇಲರು ಸರಳ, ಧೈರ್ಯಶಾಲಿ, ನೇರ ನಡೆ-ನುಡಿಯ ಹಾಗೂ ಉತ್ತಮ ಸಂಸದೀಯ ಪಟುವಾಗಿದ್ದರು. ಬೇರೆಯವರ ಏಳಿಗೆಯನ್ನು ಕಂಡು ಅಸೂಯೆ ಪಡದೆ ಪ್ರೋತ್ಸಾಹಿಸುತ್ತಿದ್ದರು. ನನ್ನ ರಾಜಕೀಯ ಜೀವನದ ಆರಂಭಿಕ ದಿನಗಳಲ್ಲಿಯೂ ಪಟೇಲರು ನನಗೆ ಪ್ರೋತ್ಸಾಹ ನೀಡಿದ್ದರು. ಜೆ.ಹೆಚ್. ಪಟೇಲರಂತಹ ಓದಿಕೊಂಡ, ಚಳವಳಿಯ ಹಿನ್ನೆಲೆ ಹೊಂದಿದ ಹಾಗೂ ವಿಧಾನಮಂಡಲದಲ್ಲಿ ಗಂಭೀರ ಚರ್ಚೆ ನಡೆಸಬಲ್ಲ ರಾಜಕಾರಣಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಸಂಸತ್ತು, ವಿಧಾನಸಭೆ ಮತ್ತು ವಿಧಾನಪರಿಷತ್ತಿನಲ್ಲಿ ಗುಣಮಟ್ಟದ ಚರ್ಚೆಗಳು ಹೆಚ್ಚಾಗಬೇಕು. ಪಟೇಲರು ತೋರಿದ ಆದರ್ಶಗಳು ಮತ್ತು ಸಾರ್ವಜನಿಕ ಬದುಕಿನ ಮೌಲ್ಯಗಳು ಮುಂದಿನ ಪೀಳಿಗೆಗೆ ದಾರಿದೀಪವಾಗಬೇಕು. ಚುನಾವಣಾ ವ್ಯವಸ್ಥೆಯ ಸುಧಾರಣೆ ಕೇವಲ ರಾಜಕಾರಣದ ಸುಧಾರಣೆಯಲ್ಲ. ಅದು ಸಮಾಜದ ಸುಧಾರಣೆಗೂ ಅಗತ್ಯವಾಗಿದೆ ಎಂದರು.

ಹಣ, ಜಾತಿ ಮತ್ತು ಇತರ ಆಮಿಷಗಳ ಪ್ರಭಾವದಿಂದ ಚುನಾವಣೆಯನ್ನು ಮುಕ್ತಗೊಳಿಸಿ, ಪ್ರಾಮಾಣಿಕರು ಹಾಗೂ ಜನಪರ ಕಾಳಜಿ ಹೊಂದಿರುವವರು ರಾಜಕೀಯಕ್ಕೆ ಬರುವಂತಹ ವ್ಯವಸ್ಥೆ ನಿರ್ಮಾಣವಾಗಬೇಕು. ಅದಕ್ಕಾಗಿ ರಾಜಕೀಯ ಪಕ್ಷಗಳು ಮತ್ತು ಸಾರ್ವಜನಿಕರು ಒಟ್ಟಾಗಿ ಚರ್ಚಿಸಿ ಸುಧಾರಣೆಯ ದಿಕ್ಕಿನಲ್ಲಿ ಸಾಗಬೇಕು ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

Share

Leave a comment

Leave a Reply

Your email address will not be published. Required fields are marked *

Related Articles