ಬೆಂಗಳೂರು: ಇಂದು ಚುನಾವಣೆಯಲ್ಲಿ ಹಣ, ಜಾತಿ ಮತ್ತು ಮದ್ಯದ ಪ್ರಭಾವ ಹೆಚ್ಚಾಗಿದ್ದು, ಪ್ರಾಮಾಣಿಕರು, ಬಡವರು, ಬುದ್ಧಿವಂತರು ಹಾಗೂ ಸಮಾಜ ಸೇವೆಯ ಆಶಯ ಹೊಂದಿರುವವರು ರಾಜಕೀಯ ಪ್ರವೇಶಿಸುವುದೇ ಕಷ್ಟವಾಗುತ್ತಿದೆ. ಇದು ನಮ್ಮ ಪ್ರಜಾಪ್ರಭುತ್ವದ ಭವಿಷ್ಯದ ದೃಷ್ಟಿಯಿಂದ ಗಂಭೀರವಾಗಿ ಚರ್ಚಿಸಬೇಕಾದ ವಿಚಾರ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಜೆ. ಹೆಚ್. ಪಟೇಲ್ ಅವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಸ್ಮರಣೋತ್ಸವ ಮತ್ತು ಚುನಾವಣೆ ಸುಧಾರಣೆಯಿಂದ ಸಮಾಜದ ಸುಧಾರಣೆ” ಕುರಿತಾದ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಪಟೇಲರೊಂದಿಗಿನ ನನ್ನ ಒಡನಾಟ, ಅವರ ಅನನ್ಯ ವ್ಯಕ್ತಿತ್ವವನ್ನು ಸ್ಮರಿಸಿ, ಚುನಾವಣಾ ಸುಧಾರಣೆಯ ಅಗತ್ಯತೆಯ ಕುರಿತು ಮಾತನಾಡಿದರು.
ಚುನಾವಣಾ ಸುಧಾರಣೆ ಯಾವುದೇ ಒಂದು ಪಕ್ಷ ಅಥವಾ ವ್ಯಕ್ತಿಗೆ ಸಂಬಂಧಿಸಿದ ವಿಚಾರವಲ್ಲ. ಇದು ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಸಂಬಂಧಿಸಿದ ಪ್ರಶ್ನೆ. ಆದ್ದರಿಂದ ಎಲ್ಲ ರಾಜಕೀಯ ಪಕ್ಷಗಳು, ಸಾರ್ವಜನಿಕರು, ಹೋರಾಟಗಾರರು ಹಾಗೂ ಸಾಮಾಜಿಕ ಕಾರ್ಯಕರ್ತರು ಮುಕ್ತ ಮನಸ್ಸಿನಿಂದ ಈ ಕುರಿತು ಚರ್ಚೆ ನಡೆಸಬೇಕು ಎಂದರು.
ಇಂದಿನ ಚುನಾವಣಾ ವ್ಯವಸ್ಥೆ ರಾಜಕಾರಣಿಗಳನ್ನೇ ಅನಿವಾರ್ಯವಾಗಿ ಭ್ರಷ್ಟರಾಗುವಂತಹ ಪರಿಸ್ಥಿತಿಗೆ ತಳ್ಳುತ್ತಿದೆ. ಚುನಾವಣಾ ಆಯೋಗ ನಿಗದಿಪಡಿಸಿರುವ ವೆಚ್ಚದ ಮಿತಿಯೊಳಗೆ ಮಾತ್ರ ಖರ್ಚು ಮಾಡಿ ಚುನಾವಣೆ ಎದುರಿಸುತ್ತೇವೆ ಎಂದು ರಾಜಕಾರಣಿಗಳು ಹೇಳಿದರೆ ಅದನ್ನು ಜನರು ನಂಬುವ ಸ್ಥಿತಿಯೂ ಇಲ್ಲ. ವಾಸ್ತವದಲ್ಲಿ ಚುನಾವಣೆ ನಡೆಸಲು ನಿಗದಿತ ಮಿತಿಗಿಂತ ಹೆಚ್ಚಿನ ಹಣ ಖರ್ಚಾಗುತ್ತಿದೆ ಎಂದು ತಿಳಿಸಿದರು.
ನಾನು 1983ರಲ್ಲಿ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದಾಗ ಜಾರ್ಜ್ ಫರ್ನಾಂಡಿಸ್ ಅವರು 10 ಸಾವಿರ ರೂಪಾಯಿ ನೀಡಿದ್ದರು. ಹಳ್ಳಿಗಳಿಗೆ ಹೋದಾಗ ಜನರೇ 200, 500 ರೂಪಾಯಿಯಂತೆ ಚುನಾವಣೆಗೆ ಹಣ ನೀಡುತ್ತಿದ್ದರು. ಸುಮಾರು 63 ಸಾವಿರ ರೂಪಾಯಿಯಲ್ಲಿ ಆ ಚುನಾವಣೆಯನ್ನು ಮುಗಿಸಿದ್ದೆ. ಆಗ ನಾನು ಪಕ್ಷೇತರ ಅಭ್ಯರ್ಥಿಯಾಗಿದ್ದೆ. 1980ರಲ್ಲಿ ಲೋಕದಳದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ ಸಂದರ್ಭದಲ್ಲಿಯೂ ಹೆಚ್ಚಿನ ಹಣ ಇರಲಿಲ್ಲ. ಚೌಧರಿ ಚರಣ್ ಸಿಂಗ್ ಅವರು ಒಂದು ಲಕ್ಷ ರೂಪಾಯಿ ಕಳುಹಿಸಿದ್ದರು. ಆ ಹಣ ಮುಗಿದ ನಂತರ ಜನರಿಗೆ ಟೀ ಕೊಡಿಸಲೂ ಹಣವಿಲ್ಲದಂತಹ ಪರಿಸ್ಥಿತಿ ಇತ್ತು. ಆದರೂ ಚುನಾವಣೆ ನಡೆಸಲು ಸಾಧ್ಯವಾಗುತ್ತಿತ್ತು. ಆದರೆ ನಂತರದ ವರ್ಷಗಳಲ್ಲಿ ಚುನಾವಣಾ ವ್ಯವಸ್ಥೆಯೇ ಸಂಪೂರ್ಣ ಬದಲಾಗಿದೆ ಎಂದು ತಿಳಿಸಿದರು.





Leave a comment