
ದಾವಣಗೆರೆ / ಹೊನ್ನಾಳಿ: ಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶದ ರೈತರಿಗೆ ಯಾವುದೇ ಪೂರ್ವಭಾವಿ ಐಸಿಸಿ ಸಭೆ ನಡೆಸದೆ ಏಕಪಕ್ಷೀಯವಾಗಿ ಭದ್ರಾ ಡ್ಯಾಂನಿಂದ ನೀರು ಹರಿಸಿದ್ದ ಆದೇಶದ ವಿರುದ್ಧ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕಿನ ಶಾಸಕ ಡಿ.ಜಿ. ಶಾಂತನಗೌಡರು ನಡೆಸಿದ ತೀವ್ರ ಹೋರಾಟ ಹಾಗೂ ರಾಜೀನಾಮೆ ಎಚ್ಚರಿಕೆಯ ಫಲವಾಗಿ ಸರ್ಕಾರ ಮಣಿದಿದ್ದು, ವಿವಾದಾತ್ಮಕ ಆದೇಶವನ್ನು ತಿದ್ದುಪಡಿ ಮಾಡಿದೆ.
ನವೆಂಬರ್ 15 ಹಾಗೂ 16ರಂದು ಹೊರಡಿಸಲಾಗಿದ್ದ ಅಸಮರ್ಪಕ ಆದೇಶದಿಂದ ಹೊನ್ನಾಳಿ, ಹರಿಹರ, ಚನ್ನಗಿರಿ ಮತ್ತು ದಾವಣಗೆರೆ ತಾಲೂಕುಗಳ ರೈತರಿಗೆ ಆಗುತ್ತಿದ್ದ ಅನ್ಯಾಯವನ್ನು ತಪ್ಪಿಸುವಲ್ಲಿ ಶಾಸಕರು ಯಶಸ್ವಿಯಾಗಿದ್ದಾರೆ.
ಭದ್ರಾ ಜಲಾಶಯದಿಂದ ನೀರು ಬಿಡುಗಡೆ ವಿಚಾರದಲ್ಲಿನ ಲೋಪಗಳನ್ನು ಖಂಡಿಸಿ ಶಾಸಕ ಡಿ.ಜಿ. ಶಾಂತನಗೌಡರು, “ತಕ್ಷಣವೇ ನೀರು ನಿಲ್ಲಿಸಬೇಕು ಅಥವಾ ದಾವಣಗೆರೆ ಜಿಲ್ಲೆಯ ಅಚ್ಚುಕಟ್ಟು ವ್ಯಾಪ್ತಿಯ ರೈತರಿಗೂ ಸಮರ್ಪಕವಾಗಿ ನೀರು ಸಿಗುವಂತೆ 3000 ಕ್ಯೂಸೆಕ್ಸ್ ನೀರು ಬಿಡಬೇಕು, ಇಲ್ಲದಿದ್ದರೆ ನಾನು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ” ಎಂದು ಖಡಕ್ ಎಚ್ಚರಿಕೆ ನೀಡಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದರು. ಅಲ್ಲದೆ, ನೇರವಾಗಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ವಾಸ್ತವ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟಿದ್ದರು.
ಅವರ ಈ ಗಂಭೀರ ಹೋರಾಟಕ್ಕೆ ಸ್ಪಂದಿಸಿದ ಸಿಎಂ ಹಾಗೂ ಸಚಿವ ಚಲುವರಾಯ ಸ್ವಾಮಿ, ಇಂದು ದಾವಣಗೆರೆ ಜಿಲ್ಲೆಯ ಸಚಿವರು ಮತ್ತು ಶಾಸಕರ ಸಮ್ಮುಖದಲ್ಲಿ ತುರ್ತು ಸಭೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ ಇಂದು ನಡೆದ ಮಹತ್ವದ ಸಭೆಯಲ್ಲಿ ಬಲದಂಡೆ ಕಾಲುವೆಗೆ ನೀರು ಹರಿಸುವುದನ್ನು ತಕ್ಷಣದಿಂದ ನಿಲ್ಲಿಸಲಾಗಿದೆ.
ಅಲ್ಲದೆ, ಮುಂಬರುವ ದಿನಗಳಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ಕರೆದು, ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ದೀರ್ಘಾವಧಿ ಬೆಳೆಗಳಿಗೆ ಹಾಗೂ ಬೇಸಿಗೆ ಹಂಗಾಮಿಗೆ ಸಮರ್ಪಕವಾಗಿ ನೀರು ಹರಿಸುವ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಶಾಸಕ ಡಿ.ಜಿ. ಶಾಂತನಗೌಡರು ಮತ್ತು ಶಿವಗಂಗಾ ಬಸವರಾಜು ಅವರು ಸ್ಪಷ್ಟಪಡಿಸಿದ್ದಾರೆ.
ಶಾಸಕರ ರಾಜೀನಾಮೆ ಎಚ್ಚರಿಕೆ ಫಲಕಾರಿ: ರೈತರ ಹಿತಾಸಕ್ತಿ ಕಾಪಾಡಲು ಶಾಸಕ ಡಿ.ಜಿ. ಶಾಂತನಗೌಡರು ನೀಡಿದ ದಿಟ್ಟ ರಾಜೀನಾಮೆ ಎಚ್ಚರಿಕೆಯಿಂದ ಸರ್ಕಾರ ಎಚ್ಚೆತ್ತುಕೊಂಡು ತಕ್ಷಣದ ಕ್ರಮ ಕೈಗೊಂಡಿದೆ.
ಬಲದಂಡೆ ಕಾಲುವೆ ನೀರು ಸ್ಥಗಿತ: ಯಾವುದೇ ಪೂರ್ವಯೋಜನೆ ಇಲ್ಲದೆ ಏಕಪಕ್ಷೀಯವಾಗಿ ಹರಿಸುತ್ತಿದ್ದ ನೀರನ್ನು ತಕ್ಷಣದಿಂದಲೇ ನಿಲ್ಲಿಸಲಾಗಿದೆ.
ಐಸಿಸಿ (ICC) ಸಭೆಗೆ ನಿರ್ಧಾರ: ಜಲಾಶಯದಲ್ಲಿ ಲಭ್ಯವಿರುವ ನೀರಿನ ಲಭ್ಯತೆ ಮತ್ತು ರೈತರ ಬೇಡಿಕೆಗಳನ್ನು ಪರಿಗಣಿಸಿ ಮುಂದಿನ ವಾರದಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ನಡೆಸಲು ತೀರ್ಮಾನಿಸಲಾಗಿದೆ.
ಅವಳಿ ತಾಲೂಕು ರೈತರಿಗೆ ನಿರಾಳ: ಹೊನ್ನಾಳಿ, ನ್ಯಾಮತಿ, ಚನ್ನಗಿರಿ ಹಾಗೂ ದಾವಣಗೆರೆ ತಾಲೂಕುಗಳ ರೈತರಿಗೆ ಆಗಲಿದ್ದ ದೊಡ್ಡ ಅನ್ಯಾಯ ತಪ್ಪಿದಂತಾಗಿದ್ದು, ರೈತರು ಶಾಸಕರ ಹೋರಾಟವನ್ನು ಸ್ವಾಗತಿಸಿದ್ದಾರೆ.




