ಬೆಂಗಳೂರು: ನಾಡು ಕಂಡ ಸುದೀರ್ಘ ಅವಧಿಯ ಮುಖ್ಯಮಂತ್ರಿ ಎಂದು ಇತಿಹಾಸದಲ್ಲಿ ದಾಖಲಾಗುವುದಕ್ಕಿಂತ ಹೆಚ್ಚಾಗಿ ನಾಡಿನ ಅಭಿವೃದ್ಧಿಗೆ, ನಾಡಿನ ಜನತೆಯ ಏಳಿಗೆಗೆ ಕಾರಣವಾಗುವಂತಹ ಮಹತ್ವದ ಯೋಜನೆಗಳನ್ನು ನೀಡಿದ ಮುಖ್ಯಮಂತ್ರಿ ನಾನಾಗಬೇಕು ಎನ್ನುವ ಹಂಬಲದಿಂದ ಇಲ್ಲಿಯವರೆಗೆ ಶ್ರದ್ಧೆಯಿಂದ ಕೆಲಸ ಮಾಡಿದ್ದೇನೆ ಎಂದು ನಿರ್ಗಮಿತ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ಜನತೆ, ವಿಶೇಷವಾಗಿ ನಾಡಿನ ಮೂಲೆಮೂಲೆಗಳಲ್ಲಿರುವ ದೀನದಲಿತರು, ದಮನಿತರು, ದನಿಯಿಲ್ಲದವರು, ಅಶಕ್ತರು, ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದವರು ನನ್ನನ್ನು ತಮ್ಮ
ದನಿಯಾಗಿಸಿಕೊಂಡಿದ್ದಕ್ಕೆ ನಾನು ಚಿರಋಣಿಯಾಗಿರುತ್ತೇನೆ. ಅವರು ನನ್ನಲ್ಲಿ ತುಂಬಿದ ಶಕ್ತಿಯಿಂದಾಗಿಯೇ ನಾನು ನಾಡಿನ ಜನತೆಯ ಸೇವೆಯನ್ನು ಇಷ್ಟು ದೀರ್ಘಕಾಲ ಮಾಡಲು ಸಾಧ್ಯವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನನ್ನನ್ನು ನಾಯಕನನ್ನಾಗಿ ಸ್ವೀಕರಿಸಿ ಬೆಂಬಲ ನೀಡಿದ ನನ್ನ ಎಲ್ಲ ಶಾಸಕ ಮಿತ್ರರಿಗೆ, ಸರ್ಕಾರದ ಯಂತ್ರವನ್ನು ಸುಗಮವಾಗಿ ನಡೆಸಿಕೊಂಡು ಹೋಗಲು ಸಹಕಾರ ನೀಡಿದ ಅಧಿಕಾರಿವರ್ಗಕ್ಕೆ ನಾನು ವಿಶೇಷವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ
ಎಂದು ಹೇಳಿದರು.
ರಾಜಕಾರಣಿಗಳಿಗೆ ನಿವೃತ್ತಿ ಇಲ್ಲ, ನಾನು ಚುನಾವಣಾ ರಾಜಕಾರಣದಿಂದ ದೂರ ಸರಿಯಬಹುದು, ಆದರೆ ರಾಜಕೀಯ ಕ್ಷೇತ್ರದಲ್ಲಿರುತ್ತೇನೆ. ಮುಂಬರುವ ದಿನಗಳಲ್ಲಿ ರಾಜ್ಯದ ಜನತೆ ಇಲ್ಲವೆ ಪಕ್ಷ ನೀಡುವ ಕರೆಗೆ ಓಗೊಟ್ಟು ಸಹಕಾರ ನೀಡುತ್ತೇನೆ ಎಂದು ಘೋಷಿಸಿದರು.





Leave a comment