Home ದಾವಣಗೆರೆ ಸಿದ್ದರಾಮಯ್ಯರಿಂದ ರಾಜೀನಾಮೆ ಪಡೆದು ಅಪಮಾನಿಸಿದ ಕಾಂಗ್ರೆಸ್ ಗೆ ತಕ್ಕ ಪಾಠ ಗ್ಯಾರಂಟಿ: ರಾಜನಹಳ್ಳಿ ಶಿವಕುಮಾರ್ ಆಕ್ರೋಶ
ದಾವಣಗೆರೆನವದೆಹಲಿಬೆಂಗಳೂರು

ಸಿದ್ದರಾಮಯ್ಯರಿಂದ ರಾಜೀನಾಮೆ ಪಡೆದು ಅಪಮಾನಿಸಿದ ಕಾಂಗ್ರೆಸ್ ಗೆ ತಕ್ಕ ಪಾಠ ಗ್ಯಾರಂಟಿ: ರಾಜನಹಳ್ಳಿ ಶಿವಕುಮಾರ್ ಆಕ್ರೋಶ

Share
ಸಿದ್ದರಾಮಯ್ಯ
Share

ದಾವಣಗೆರೆ: 2023ರ ವಿಧಾನಸಭೆ ಚುನಾವಣೆಯಲ್ಲಿ ಅಹಿಂದ ನಾಯಕ ಸಿದ್ದರಾಮಯ್ಯರ ಜನಪ್ರಿಯತೆ ಬಳಸಿಕೊಂಡು ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್ ಈ ಹಿಂದೆ ಅಹಿಂದ ನಾಯಕರನ್ನು ಮುಗಿಸಿದಂತೆ ಈಗಲೂ ನಡೆದುಕೊಂಡಿದೆ. ಸಿದ್ದರಾಮಯ್ಯರಿಂದ ಮುಖ್ಯಮಂತ್ರಿ ಸ್ಥಾನಕ್ಕೆ ಬಲವಂತವಾಗಿ ರಾಜೀನಾಮೆ ಕೊಡಿಸಿ ಅಹಿಂದ ನಾಯಕನಿಗೆ ಅಪಮಾನ ಎಸಗಿರುವ ಕಾಂಗ್ರೆಸ್ ಪಕ್ಷಕ್ಕೆ ಮುಂಬರುವ ದಿನಗಳಲ್ಲಿ ಅಹಿಂದ ವರ್ಗವೂ ಸೇರಿದಂತೆ ರಾಜ್ಯದ ಜನರು ತಕ್ಕ ಪಾಠ ಕಲಿಸುವುದು ಗ್ಯಾರಂಟಿ ಎಂದು ದೂಡಾ ಮಾಜಿ ಅಧ್ಯಕ್ಷರು ಹಾಗೂ ಬಿಜೆಪಿ ಯುವ ನಾಯಕ ರಾಜನಹಳ್ಳಿ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಇತಿಹಾಸ ನೋಡಿದರೆ ಎಸ್. ಬಂಗಾರಪ್ಪ, ದೇವರಾಜ ಅರಸು, ಎಸ್. ಆರ್. ಬೊಮ್ಮಾಯಿ ಸೇರಿದಂತೆ ಹಲವು ನಾಯಕರ ಜನಪ್ರಿಯತೆ ಸಹಿಸದೇ ಕಾಂಗ್ರೆಸ್ ತನ್ನ ಕುತಂತ್ರ ಬುದ್ದಿ ತೋರಿಸಿತ್ತು. ಈಗ ಸಿದ್ದರಾಮಯ್ಯರನ್ನು ಅಧಿಕಾರದಿಂದ ಇಳಿಸಿ ಅಹಿಂದ ವರ್ಗದ ಕೆಂಗಣ್ಣಿಗೆ ಗುರಿಯಾಗಿದೆ. ಇದಕ್ಕೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ತಕ್ಕ ಬೆಲೆ ತೆರಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಸಿದ್ದರಾಮಯ್ಯರು 2023ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ಮುಖ್ಯಮಂತ್ರಿ ಬದಲಾವಣೆ ವಿಚಾರವೇ ಹೆಚ್ಚು ಚರ್ಚೆಯಾಗಿದೆ. ಕಾಂಗ್ರೆಸ್ ಪಕ್ಷದ ಸ್ವಾರ್ಥ ರಾಜಕೀಯ ಹಾಗೂ ಕುರ್ಚಿ ಕಾದಾಟಕ್ಕೆ ಇಡೀ ಕರ್ನಾಟಕದ ಅಭಿವೃದ್ಧಿಯೇ ಇಲ್ಲವಾಗಿದ್ದು, ಆಡಳಿತ ಸಂಪೂರ್ಣ ಕುಸಿದು ಹೋಗಿದೆ. ಗ್ಯಾರಂಟಿಗಳ ನೆಪದಲ್ಲಿ ಮೂಲಸೌಕರ್ಯಕ್ಕೆ ಮೀಸಲಿದ್ದ ಹಣವನ್ನು ಕಸಿದುಕೊಂಡು, ಇಡೀ ರಾಜ್ಯವನ್ನು ಲಕ್ಷ ಕೋಟಿ ಸಾಲದ ಸುಳಿಗೆ ಸಿಲುಕಿಸಿದ್ದು ಸಾಲದೇ ಭೀಕರ ವಿತ್ತೀಯ ಕೊರತೆಗೆ ದೂಡಿರುವ ಈ ಸರ್ಕಾರ, ಬೊಕ್ಕಸವನ್ನು ಸಂಪೂರ್ಣ ದಿವಾಳಿ ಮಾಡಿದೆ ಎಂದು ಆರೋಪಿಸಿದ್ದಾರೆ.

ಗುತ್ತಿಗೆದಾರರ ₹34,000 ಕೋಟಿಗೂ ಅಧಿಕ ಬಿಲ್ ಬಾಕಿ ಉಳಿಸಿಕೊಂಡು 3,140ಕ್ಕೂ ಹೆಚ್ಚು ಕಾಮಗಾರಿಗಳ ನಿಲ್ಲಿಸಿರುವ ಕಾಂಗ್ರೆಸ್ಸಿಗರಿಗೆ ಜನರ ಹಿತಕ್ಕಿಂತ ತಮ್ಮ ಅಧಿಕಾರದ ದರ್ಪವೇ ಮೇಲಾಗಿದೆ. ಅಭಿವೃದ್ಧಿ ಶೂನ್ಯವಾಗಿರುವ ಈ ಆಡಳಿತ ವೈಫಲ್ಯದ ಕರಾಳ ಯುಗ ಆದಷ್ಟು ಬೇಗ ಅಂತ್ಯಗೊಳ್ಳಲಿ ಎಂದು ಕನ್ನಡಿಗರು ನಿತ್ಯವೂ ಪ್ರಾರ್ಥಿಸುತ್ತಿದ್ದಾರೆ. 10 ಕೆ.ಜಿ. ಅಕ್ಕಿ ನೀಡುತ್ತೇವೆ ಎಂದು ಪೊಳ್ಳು ಭರವಸೆ ನೀಡಿ, ಅಧಿಕಾರಕ್ಕೆ ಬಂದ ಬಳಿಕ ಅಕ್ಕಿಯನ್ನೂ ಕೊಡದೆ, ಹಣವನ್ನೂ ನೀಡದೆ ನಯವಂಚಕತನ ಮೆರೆದ ಕಾಂಗ್ರೆಸ್ ಪಕ್ಷದ ಅವನತಿ ಶುರುವಾಗಿದೆ.  ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯದಿಂದಾಗಿ ರಾಜ್ಯದ ವಿವಿಧೆಡೆ ಸರ್ವರ್ ಸಮಸ್ಯೆ ಉಂಟಾಗಿದ್ದು, ಕೋಟ್ಯಂತರ ಬಡ ಕುಟುಂಬಗಳಿಗೆ ಈ ಬಾರಿ ಮೋದಿ ಸರ್ಕಾರ ನೀಡುವ ಅಕ್ಕಿಯು ತಿಂಗಳಾಂತ್ಯವಾದರೂ ಅವರ ಮನೆ ತಲುಪಿಲ್ಲ.ರಾಜ್ಯದಲ್ಲಿ ಇರುವ ಪಡಿತರ ಕಾರ್ಡ್‌‌‌ದಾರರಿಗೆ ಅಕ್ಕಿ ನೀಡಲು ಯೋಗ್ಯತೆ ಇಲ್ಲದ ಕಾಂಗ್ರೆಸ್ ಸರ್ಕಾರ ತೊಲಗಿದರಷ್ಟೇ ಒಳಿತಾಗಲಿದೆ ಎಂದು ರಾಜನಹಳ್ಳಿ ಶಿವಕುಮಾರ್ ಅವರು ಪತ್ರಿಕಾ ಹೇಳಿಕೆಯಲ್ಲಿ ದೂರಿದ್ದಾರೆ. 

Share

Leave a comment

Leave a Reply

Your email address will not be published. Required fields are marked *