SUDDIKSHANA KANNADA NEWS/ DAVANAGERE/ DATE-27-06-2025
ಬೆಂಗಳೂರು: ದ್ವೇಷ ಭಾಷಣ ಮಾಡುವವರ ವಿರುದ್ಧ, ಜನರ-ರಾಜ್ಯದ ನೆಮ್ಮದಿ ಕೆಡಿಸುವವರ ವಿರುದ್ಧ ಸ್ವಯಂಪ್ರೇರಿತ ಕ್ರಮ ಏಕೆ ತೆಗೆದುಕೊಳ್ಳುತ್ತಿಲ್ಲ, ನೀವು ಕ್ರಮ ತೆಗೆದುಕೊಳ್ಳದಿದ್ದರೆ ನಾವು ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ಯದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅಧಿಕಾರಿಗಳಿಗೆ ಖಾರವಾಗಿ ಪ್ರಶ್ನಿಸಿದರು.
ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಮತ್ತು ಪೊಲೀಸ್ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ ಈ ಸೂಚನೆಗಳನ್ನು ನೀಡಿದರು.

ಕೋಮು ಘರ್ಷಣೆ ಮತ್ತು ಕೊಲೆಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಹೆಚ್ಚಾಗಿ ಆಗುತ್ತಿದೆ. ಇತರೆ ಜಿಲ್ಲೆಗಳಲ್ಲಿ ಯಾಕೆ ಆಗುತ್ತಿಲ್ಲ ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು ದಕ್ಷಿಣ ಕನ್ನಡ ಜಿಲ್ಲೆಯ ನೆಮ್ಮದಿ ಕೆಡಿಸುವವರನ್ನು ಮೂಲದಿಂದಲೇ ಪತ್ತೆ ಹಚ್ಚಿ ಅವನು ಯಾರೇ ಇದ್ದರೂ ಕಠಿಣ ಕಾನೂನು ಕ್ರಮ ಕೈಗೊಳ್ಳಿ ಎಂದು ಸ್ಪಷ್ಟ ಸೂಚನೆ ನೀಡಿದರು.
ನಾವು ವ್ಯವಸ್ಥೆಯನ್ನು ದೂಷಿಸಿಕೊಂಡು ಕೈ ಕಟ್ಟಿಕೊಂಡು ಕೂರೋದಲ್ಲ. ಪೊಲೀಸ್ ಠಾಣೆಗಳು ಜನಸ್ನೇಹಿ ಆಗುವ ಜೊತೆಗೆ ಅಪರಾಧ ಮನಸ್ಥಿತಿಯವರಿಗೆ ಕಾನೂನಿನ ಬಗ್ಗೆ ಭಯ ಇರುವ ವಾತಾವರಣ ಸೃಷ್ಟಿಸಬೇಕು ಎಂದು ಕರೆ ನೀಡಿದರು.