ಉತ್ತರ ಪ್ರದೇಶ: ಮದುವೆಯ ಸಂಭ್ರಮ, ಬಂಧು-ಮಿತ್ರರ ನಗು ಮತ್ತು ಹೊಸ ಜೀವನದ ಕನಸುಗಳೊಂದಿಗೆ ಕಳೆಗಟ್ಟಿದ್ದ ಮನೆಯಲ್ಲಿ ಮೊದಲ ರಾತ್ರಿಯಂದೇ ನಡೆದಿದ್ದ ನಿಗೂಢ ಘಟನೆಯ ರಹಸ್ಯ ಕೊನೆಗೂ ಹೊರಬಿದ್ದಿದೆ. ಶೋಭನದ ರಾತ್ರಿ ಪತ್ನಿ “ಲೈಟ್ ಆಫ್ ಮಾಡಿ” (ಅಥವಾ ಡಿಮ್ ಲೈಟ್ ಹಾಕಿ) ಎಂದಿದ್ದಕ್ಕೆ ಕೊಠಡಿಯಿಂದ ಹೊರಹೋದ ವರ ಮೊಹ್ಸಿನ್ (26), ಮರಳಿ ಬಾರದೆ ನಾಪತ್ತೆಯಾಗಿದ್ದು ಇಡೀ ಪ್ರದೇಶದಲ್ಲಿ ತೀವ್ರ ಆತಂಕ ಸೃಷ್ಟಿಸಿತ್ತು.
ಸುಮಾರು 4-5 ದಿನಗಳ ಸುದೀರ್ಘ ಹುಡುಕಾಟದ ನಂತರ ಪೊಲೀಸರು ಆತನನ್ನು ಹರಿದ್ವಾರದಲ್ಲಿ ಸುರಕ್ಷಿತವಾಗಿ ಪತ್ತೆಹಚ್ಚಿದ್ದಾರೆ.
ನಡೆದಿದ್ದೇನು?
ಉತ್ತರ ಪ್ರದೇಶದ ಮೀರತ್ ಮೂಲದ ಮೊಹ್ಸಿನ್ ಎಂಬ ಯುವಕನಿಗೆ ಇತ್ತೀಚೆಗೆ ಮುಜಾಫರ್‌ನಗರದ ಯುವತಿಯೊಂದಿಗೆ ಅದ್ಧೂರಿಯಾಗಿ ವಿವಾಹ ನಡೆದಿತ್ತು. ಮದುವೆ ಶಾಸ್ತ್ರಗಳೆಲ್ಲ ಮುಗಿದ ಬಳಿಕ ನವದಂಪತಿ ಶೋಭನದ ಕೊಠಡಿಗೆ ತೆರಳಿದ್ದರು. ಕೋಣೆಯಲ್ಲಿ ಬೆಳಕು ಹೆಚ್ಚಾಗಿದ್ದರಿಂದ ವಧು “ಡಿಮ್ ಲೈಟ್ ಅಥವಾ ಸಣ್ಣ ಬಲ್ಬ್ ಹಾಕಿ” ಎಂದು ವಿನಂತಿಸಿದ್ದಳು. ಪತ್ನಿಯ ಮಾತಿನಂತೆ ಹೊರಹೋದ ಮೊಹ್ಸಿನ್ ರಾತ್ರಿಯಿಡೀ ಮರಳಲೇ ಇಲ್ಲ.
ಮಾರನೇ ದಿನವೇ ಮೊಹ್ಸಿನ್‌ನ ಇಬ್ಬರು ಸಹೋದರಿಯರ ಮದುವೆಯೂ ನಿಗದಿಯಾಗಿದ್ದು, ಒಂದೇ ಮನೆಯಲ್ಲಿ ಮೂರು ವಿವಾಹಗಳ ಸಂಭ್ರಮವಿತ್ತು. ಆದರೆ ವರನ ನಾಪತ್ತೆಯಿಂದಾಗಿ ಇಡೀ ಕುಟುಂಬ ಕಣ್ಣೀರಿನಲ್ಲಿ ಮುಳುಗುವಂತಾಯಿತು.
ಗಂಗಾ ಕಾಲುವೆ ಬಳಿ ಸಿಸಿಟಿವಿ ದೃಶ್ಯ:
ಪೊಲೀಸರು ತನಿಖೆ ಆರಂಭಿಸಿದಾಗ, ಮನೆಯ ಬಳಿಯ ಗಂಗಾ ಕಾಲುವೆಯ ಹತ್ತಿರ ಮೊಹ್ಸಿನ್ ನಡೆದುಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಆತ ಕಾಲುವೆಗೆ ಬಿದ್ದಿರಬಹುದು ಎಂಬ ಶಂಕೆಯಿಂದ ಮುಳುಗುತಜ್ಞರನ್ನು ಕರೆಸಿ ಶೋಧ ಕಾರ್ಯ ನಡೆಸಲಾಗಿತ್ತು.
ಹರಿದ್ವಾರದಲ್ಲಿ ಪತ್ತೆ, ನಿಜಾಂಶ ಇಲ್ಲಿದೆ:
ಐದನೇ ದಿನ ಮೊಹ್ಸಿನ್ ಹರಿದ್ವಾರ ತಲುಪಿ, ಅಲ್ಲಿನ ಹಾದಿಹೋಕರೊಬ್ಬರ ಫೋನ್ ಬಳಸಿ ತನ್ನ ತಂದೆಗೆ ಕರೆ ಮಾಡಿದ್ದಾನೆ. ತಕ್ಷಣವೇ ಪೊಲೀಸರು ಹಾಗೂ ಕುಟುಂಬಸ್ಥರು ಹರಿದ್ವಾರಕ್ಕೆ ತೆರಳಿ ಆತನನ್ನು ವಶಕ್ಕೆ ಪಡೆದಿದ್ದಾರೆ.
ವಿಚಾರಣೆ ವೇಳೆ ಮೊಹ್ಸಿನ್ ನೀಡಿದ ಹೇಳಿಕೆ ಪೊಲೀಸರನ್ನೇ ಬೆರಗುಗೊಳಿಸಿದೆ. ಮೊದಲ ರಾತ್ರಿಯ ಭಯ ಹಾಗೂ ತೀವ್ರ ಮಾನಸಿಕ ಒತ್ತಡದಿಂದ ತನಗೆ ಗೊಂದಲವಾಗಿ, ಯಾರಿಗೂ ಹೇಳದೆ ಕಾಲಿನಡಿಗೆ ಸಿಕ್ಕ ಹಾದಿಯಲ್ಲಿ ನಡೆಯುತ್ತಾ ಬಸ್ ಹತ್ತಿ ಹರಿದ್ವಾರ ತಲುಪಿದ್ದಾಗಿ ತಿಳಿಸಿದ್ದಾನೆ. ಪ್ರಸ್ತುತ ಯುವಕನನ್ನು ಕುಟುಂಬಸ್ಥರಿಗೆ ಒಪ್ಪಿಸಲಾಗಿದ್ದು, ಎರಡೂ ಕುಟುಂಬಗಳು ನಿಟ್ಟುಸಿರು ಬಿಟ್ಟಿವೆ.





Leave a comment