ಶಿವಮೊಗ್ಗ: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ನಾಟಿ ಮಾಡಿದ ಭತ್ತದ ಬೆಳೆಯು ಸದ್ಯ ಹಾಲು ತುಂಬುವ ಮತ್ತು ಕಾಳು ಕಟ್ಟುವ ಹಂತದಲ್ಲಿದೆ. ಈ ಹಂತದಲ್ಲಿ ಬೆಳೆಗೆ ಕೆಲವು ಕೀಟ ಮತ್ತು ರೋಗಗಳ ಬಾಧೆ ಕಾಣಿಸಿಕೊಂಡಿದ್ದು, ರೈತರು ತಕ್ಷಣವೇ ಸೂಕ್ತ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ಸಲಹೆ ನೀಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪ್ರಮುಖವಾಗಿ ಕಾಣಿಸಿಕೊಳ್ಳುವ ಕೀಟ ಮತ್ತು ರೋಗಗಳ ವಿವರ ಹಾಗೂ ಅವುಗಳ ಹತೋಟಿ ಕ್ರಮಗಳನ್ನು ಈ ಕೆಳಗಿನಂತೆ ತಿಳಿಸಿದ್ದಾರೆ.
ತೆನೆ ತಿಗಣೆ ಬಾಧೆ:
ಭತ್ತದ ತೆನೆಗೆ ಹಾಲು ತುಂಬುವ ಸಮಯದಲ್ಲಿ ಈ ಕೀಟಗಳು ಕಾಳಿನಿಂದ ರಸ ಹೀರುತ್ತವೆ. ಇದರಿಂದ ಕಾಳುಗಳು ಜೋಳ್ಳಾಗುತ್ತವೆ.
ಹತೋಟಿ ಕ್ರಮ:
ಪ್ರತಿ ಲೀಟರ್ ನೀರಿಗೆ 2 ಎಂ.ಎಲ್. ಮಾಲಾಥಿಯಾನ್ 50 ಇಸಿ ಬೆರೆಸಿ, ಕಾಳು ತುಂಬುವ ಹಂತದಲ್ಲಿರುವ ತೆನೆಗಳಿಗೆ ಸಿಂಪಡಿಸಬೇಕು. ಅಥವಾ, ಒಂದು ಎಕರೆಗೆ 8 ಕೆ.ಜಿ. ಮಾಲಾಥಿಯಾನ್ ಶೇ. 5 ಡಿ ಪುಡಿಯನ್ನು ತೆನೆಗಳ ಮೇಲೆ ಧೂಳೀಕರಿಸಬೇಕು.
ಕಂದು ಜಿಗಿಹುಳು ಬಾಧೆ:
ವಾತಾವರಣದಲ್ಲಿನ ಉಷ್ಣಾಂಶ ಮತ್ತು ಆರ್ದ್ರತೆಯ ಬದಲಾವಣೆಯಿಂದ ಈ ಹುಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ರೈತರು ಗದ್ದೆಗಳ ಒಳಗೆ ಹೋಗಿ ಬೆಳೆಯ ಬುಡ ಭಾಗವನ್ನು ಪರೀಕ್ಷಿಸಬೇಕು.
ಹತೋಟಿ ಕ್ರಮ:
ಕೀಟ ಬಾಧೆ ಕಂಡುಬಂದ ಕೂಡಲೇ ಗದ್ದೆಯಿಂದ ನೀರನ್ನು ಬಸಿದು ತೆಗೆಯಬೇಕು. ಗದ್ದೆಯಲ್ಲಿ ಯಾವಾಗಲೂ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಪ್ರತಿ 5 ರಿಂದ 6 ದಿನಗಳಿಗೊಮ್ಮೆ ಗದ್ದೆಯ ನೀರನ್ನು ಸಂಪೂರ್ಣವಾಗಿ ಬಸಿದು ಮತ್ತೆ ಹಾಯಿಸಬೇಕು.
ಪ್ರತಿ 8-10 ಸಾಲುಗಳ ನಡುವೆ ಗಾಳಿ ಮತ್ತು ಬೆಳಕು ಆಡುವಂತೆ ಪಾತ ಮಾಡುವುದು (ದಾರಿ ಬಿಡುವುದು) ಸೂಕ್ತ.
ಕೀಟ ಬಾಧೆ ಹೆಚ್ಚಾಗಿದ್ದರೆ, ಪ್ರತಿ ಲೀಟರ್ ನೀರಿಗೆ 0.5 ಎಂ.ಎಲ್. ಇಮಿಡಾಕ್ಲೋಪ್ರಿಡ್ 200 ಎಸ್‌ಎಲ್ (Imidacloprid 200 SL) ಬೆರೆಸಿ ಬೆಳೆಯ ಬುಡ ಭಾಗಕ್ಕೆ ಸಿಂಪಡಿಸಬೇಕು. ಅಥವಾ, ಒಂದು ಎಕರೆಗೆ 8 ಕೆ.ಜಿ. ಕಾರ್ಬೋಫ್ಯುರಾನ್ 3 ಜಿ (Carbofuran 3 G) ಅಥವಾ 5 ಕೆ.ಜಿ. ಫೋರೇಟ್ 10 ಜಿ (Phorate 10 G) ಹರಳು ರೂಪದ ಕೀಟನಾಶಕವನ್ನು ಬಳಸಬಹುದು.
ರೋಗಗಳ ನಿರ್ವಹಣೆ:
ಗದ್ದೆಯಲ್ಲಿ ಅಲ್ಲಲ್ಲಿ ತೆನೆ ಕವಚದ ಮೇಲೆ ಕಂದು ಅಥವಾ ಕಪ್ಪು ಕಲೆಗಳು ಕಾಣಿಸಿಕೊಳ್ಳುತ್ತಿದ್ದರೆ, ಅದು ಶಿಲೀಂಧ್ರದಿಂದ ಹರಡುವ ‘ಎಲೆ ಕವಚದ ಕೊಳೆ ರೋಗ’ ಆಗಿರುತ್ತದೆ. ಈ ರೋಗ ತಗುಲಿದರೆ ಕಾಳುಗಳು ಕಪ್ಪಾಗಿ ಜೋಳ್ಳಾಗುತ್ತವೆ.
ಹತೋಟಿ ಕ್ರಮ:
ರೋಗದ ಲಕ್ಷಣ ಕಂಡಲ್ಲಿ, ಪ್ರತಿ ಲೀಟರ್ ನೀರಿಗೆ 2 ಎಂ.ಎಲ್. ಹೆಕ್ಸಾ ಕೊನಾಜೋಲ್ ಅಥವಾ 1 ಎಂ.ಎಲ್. ಪ್ರೊಪಿಕೋನಾಜೋಲ್ ಶಿಲೀಂಧ್ರ ನಾಶಕ ಬೆರೆಸಿ ಸಿಂಪಡಿಸಬೇಕು. ಇದರೊಂದಿಗೆ, ‘ಕುತ್ತಿಗೆ ಬೆಂಕಿ ರೋಗ’ ನಿಯಂತ್ರಣಕ್ಕೆ ಪ್ರತಿ ಲೀಟರ್ ನೀರಿಗೆ 0.6 ಗ್ರಾಂ ಟ್ರೈಸೈಕ್ಲಾಜೋಲ್ 75 ಡಬ್ಲ್ಯೂಪಿ (Tricyclazole 75 WP) ಬೆರೆಸಿ ಸಿಂಪಡಿಸಬೇಕು. ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.





Leave a comment