ದಾವಣಗೆರೆ: ನೀವು ಮಾತ್ರವಲ್ಲ, ನಮ್ಮನ್ನೂ ಕಲ್ಯಾಣ ಕರ್ನಾಟಕಕ್ಕೆ ಹೋಗಿ. ಅಲ್ಲಿಯಾದರೂ ಐದು ಸಾವಿರ ಕೋಟಿ ರೂಪಾಯಿ ಅನುದಾನ ಮೀಸಲಿರುತ್ತದೆಯೆಂದು ನಾನು ಜಗಳೂರು ಶಾಸಕ ದೇವೇಂದ್ರಪ್ಪರ ಜೊತೆ ಮಾತನಾಡುವಾಗ ಹೇಳಿದ್ದೇನೆ ಎಂದು ಚನ್ನಗಿರಿ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್ ತಿಳಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬರಪೀಡಿತ ತಾಲೂಕು ಪಟ್ಟಿಯಲ್ಲಿ ಜಗಳೂರು ಕೈ ತಪ್ಪಿದ್ದು, ಶಾಸಕ ದೇವೇಂದ್ರಪ್ಪರು ಮಾತನಾಡಿದ್ದನ್ನು ನಾನು ನೋಡಿದ್ದೇನೆ. ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರಿಗೂ ಕರೆ ಮಾಡಿ ಮಾತನಾಡಿದೆ. ಬಳಿಕ ದೇವೇಂದ್ರಪ್ಪರಿಂದ ಸಿಎಂಗೆ ಕರೆ ಮಾಡಿಸಿ ಮಾತನಾಡಿಸಿದ್ದೇನೆ. ಎರಡನೇ ಪಟ್ಟಿಯಲ್ಲಿ ಜಗಳೂರು ಕ್ಷೇತ್ರ ಸೇರ್ಪಡೆಯಾಗಲಿದೆ ಎಂದು ಹೇಳಿದರು.
ನನಗೂ ನೋವಾದಾಗ ಮಾತನಾಡಿದ್ದೇನೆ. ಸಹಜವಾಗಿಯೇ ಹೇಳಿದ್ದಾರೆ. ಬರಗಾಲಪೀಡಿತ ಪ್ರದೇಶದಿಂದ ಜಗಳೂರು ಕ್ಷೇತ್ರ ಕೈಬಿಟ್ಟಿರುವುದರಿಂದ ನೋವಾಗಿದೆ. ಇದರಲ್ಲಿ ವಿಶೇಷತೆ ಏನಿಲ್ಲ. ಸ್ವಾಭಾವಿಕವಾಗಿ ನೋವಾದಾಗ ಮಾತನಾಡುತ್ತಾರೆ. ನನಗೂ ನೋವಾಗಿದೆ. ಮುಖ್ಯಮಂತ್ರಿಗಳಿಂದ ಕರೆ ಮಾಡಿಸಿ ಎರಡನೇ ಹಂತದಲ್ಲಿ ಸೇರ್ಪಡೆ ಮಾಡುವುದಾಗಿ ಭರವಸೆ ನೀಡಲಾಗಿದೆ ಎಂದರು.
ಉದ್ದೇಶಪೂರ್ವಕವಾಗಿ ಯಾರೂ ಕ್ಷೇತ್ರ ಕೈಬಿಡುವುದಿಲ್ಲ. ಅದಕ್ಕೊಂದು ಮಾನದಂಡ ಇರುತ್ತದೆ. ಮಳೆ ಎಷ್ಟು ಪ್ರಮಾಣದಲ್ಲಿ ಆಗಿದೆ ಎಂಬುದೂ ಸೇರಿದಂತೆ ಎಲ್ಲಾ ವಿಚಾರಗಳನ್ನು ಪರಿಗಣಿಸಲಾಗುತ್ತದೆ. ಜಗಳೂರಿಗಿಂತ ಪಾವಗಡ ಹೆಚ್ಚಿನ ಬರಗಾಲ ಪ್ರದೇಶ ಎಂಬುದು ಎಲ್ಲರಿಗೂ ಗೊತ್ತು. ಪ್ರಾದೇಶಿಕವಾರು ಸಿಎಂ ಸಭೆ ನಡೆಸಿದರು. ಅತಿ ಹೆಚ್ಚು ಮಳೆಯಾಗಿದೆ ಎಂದು ಪಾವಗಡ ಕೈಬಿಡಲಾಗಿದೆ. ಅಲ್ಲಿನ ಶಾಸಕರು ಈ ವೇಳೆ ಮಾತನಾಡಿದ್ದಾರೆ. ಶಾಸಕ ವೆಂಕಟೇಶ ಪಾವಗಡ ಅವರು ನಮ್ಮಲ್ಲಿ ಮಳೆಯಾಗಿಲ್ಲ ಎಂದರು. ಬರಗಾಲ ಘೋಷಣೆ ಮಾಡಲು ಮಳೆಗಾಲ ಇನ್ನೂ ಇದೆ. ಎರಡನೇ ಹಂತದಲ್ಲಿ ಸೇರ್ಪಡೆ ಆಗುತ್ತದೆ ಎಂದು ಹೇಳಿದರು.





Leave a comment