SUDDIKSHANA KANNADA NEWS/ DAVANAGERE/ DATE:01-02-2025
ದಾವಣಗೆರೆ: ಖಾಸಗಿ ಶಾಲೆಯ ಬಸ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಆನಗೋಡು ಸಮೀಪ ಶನಿವಾರ ಬೆಳಗ್ಗೆ ನಡೆದಿದೆ.
ತಾಲೂಕಿನ ಕೆರ್ನಹಳ್ಳಿ ಗ್ರಾಮದ ಆರ್ಚನಾ (12), ಕಂದನಕೋವಿ ಗ್ರಾಮದ ಇಂದುಮತಿ (12) ಗಂಭೀರವಾಗಿ ಗಾಯಗೊಂಡ ಮಕ್ಕಳು. ಇಬ್ಬರು ನಗರದ ಎಸ್.ಎಸ್.ಹೈಟೆಕ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಹಲವು ಮಕ್ಕಳಿಗೆ ಸಣ್ಣಪುಟ್ಟ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಶನಿವಾರ ಬೆಳಗಿನ ಶಾಲೆ ಆಗಿದ್ದರಿಂದ ಆನಗೋಡು ಸಮೀಪದ ಹಳ್ಳಿಗಳಿಂದ ನಗರದ ಖಾಸಗಿ ಶಾಲೆಗೆ ಕರೆದುಕೊಂಡು ಬರುವ ಸಮಯದಲ್ಲಿ ಆನಗೋಡು ಮತ್ತು ಶಿವಪುರ ನಡುವೆಯ ರಸ್ತೆಯ ತಿರುವಿನಲ್ಲಿ ಬಸ್ ಮರಕ್ಕೆ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ. ಬಸ್ ನಲ್ಲಿ ಸುಮಾರು 35 ಮಕ್ಕಳಿದ್ದರು. ಈ ರೂಟ್ ಗೆ ಪ್ರತಿನಿತ್ಯ ಬರುತ್ತಿದ್ದ ಚಾಲಕನ ಬದಲಾಗಿ ಹೊಸ ಬಸ್ ಚಾಲಕ ಬಂದಿದ್ದರಿಂದ ರಸ್ತೆಯ ಸ್ಥಿತಿಗತಿ ತಿಳಿಯದೇ ಈ ಅಪಘಾತ ನಡೆದಿದೆ ಎಂದು ಹೇಳಲಾಗಿದೆ. ನಂತರ ಘಟನಾ ಸ್ಥಳಕ್ಕೆ ಶಾಸಕ ಕೆ.ಎಸ್.ಬಸವಂತಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.