SUDDIKSHANA KANNADA NEWS/ DAVANAGERE/ DATE:31-03-2025
ದಾವಣಗೆರೆ: ಜಿಲ್ಲೆಯ ನ್ಯಾಮತಿ ಪಟ್ಟಣದ ಎಸ್ ಬಿ ಐ ಬ್ಯಾಂಕ್ ಕಳ್ಳತನ ಮಾಡಿದ್ದ ಆರೋಪಿಗಳು ಸ್ಫೋಟಕ ಮಾಹಿತಿ ಹೊರ ಹಾಕಿದ್ದಾರೆ. ಯುಟ್ಯೂಬ್ ಸೇರಿದಂತೆ ಆನ್ ಲೈನ್ ನಲ್ಲಿ ವಿಡಿಯೋಗಳನ್ನು ವೀಕ್ಷಿಸಿ ಆರು ತಿಂಗಳ ಹಿಂದೆಯೇ ಪ್ಲ್ಯಾನ್ ಮಾಡಿದ್ದು ಬೆಳಕಿಗೆ ಬಂದಿದೆ. ಮಾತ್ರವಲ್ಲ, ಹಲವು ಕುತೂಹಲಕಾರಿ ಅಂಶಗಳು ಹೊರ ಬಿದ್ದಿವೆ.
ಪ್ರಕರಣದ ಮೊದಲನೇ ಆರೋಪಿ ವಿಜಯ್‌ಕುಮಾರ್ ಮತ್ತು 2 ನೇ ಆರೋಪಿ ಅಜಯ್ ಅಣ್ಣತಮ್ಮಂದಿರು. ಆರನೇ ಆರೋಪಿಯಾದ ಪರಮಾನಂದ ತಂಗಿಯ ಗಂಡ. ಇನ್ನುಳಿದ ಅಭಿ, ಮಂಜು, ಚಂದ್ರು, ನ್ಯಾಮತಿಯ ಬಳಿ ಸುರಹೊನ್ನೆಯವರು.
ವಿಜಯಕುಮಾರ್‌ನು ನ್ಯಾಮತಿ ಪಟ್ಟಣದಲ್ಲಿ ವಿಐಪಿ ಸ್ನಾಕ್ಸ್ ಹೆಸರಿನ ಬೇಕರಿ ಮತ್ತು ಸ್ವೀಟ್ಸ್ ಅಂಗಡಿಯನ್ನು ಅವನ ತಂದೆಯೊಂದಿಗೆ ಸುಮಾರು 25ರಿಂದ 30 ವರ್ಷಗಳಿಂದ ನಡೆಸಿಕೊಂಡು ಬಂದಿದ್ದು, ಅದರಲ್ಲಿ ಹೆಚ್ಚು ಲಾಭಗಳನ್ನು ಗಳಿಸಲು ಸಾಧ್ಯವಾಗಲಿಲ್ಲ.
ಹಾಗಾಗಿ ಅವನು ವ್ಯಾಪಾರದಲ್ಲಿ ಅಭಿವೃದ್ದಿ ಪಡಿಸಲು ಸುಮಾರು 15 ಲಕ್ಷ ರೂಪಾಯಿಗಳ ಸಾಲಕ್ಕಾಗಿ 2023ರ ಮಾರ್ಚ್ ತಿಂಗಳಿನಲ್ಲಿ ನ್ಯಾಮತಿಯ ಎಸ್‌ಬಿಐ ಬ್ಯಾಂಕ್‌ಗೆ ಅರ್ಜಿ ಸಲ್ಲಿಸಿದ್ದ. ಕ್ರೆಡಿಟ್ ಸ್ಕೋರ್ ಸರಿಯಾಗಿ ಇಲ್ಲದಿದ್ದರಿಂದ ಅವನ ಅರ್ಜಿ ತಿರಸ್ಕೃತಗೊಂಡಿತ್ತು.
ನಂತರ ವಿಜಯ್ ಕುಮಾರ್ ತಮ್ಮ ಸಂಬಂಧಿಕರ ಹೆಸರಿನಲ್ಲಿ ಸಾಲಕ್ಕಾಗಿ ಮತ್ತೆ ಅದೇ ಎಸ್ ಬಿ ಐ ನ್ಯಾಮತಿ ಬ್ರಾಂಚ್‌ನಲ್ಲಿ ಅರ್ಜಿ ಸಲ್ಲಿಸಿದ್ದಾನೆ. ಆಗಲೂ ಸದರಿ ಅರ್ಜಿಗಳು ತಿರಸ್ಕೃತಗೊಂಡಿವೆ. ಆರೋಪಿ ವಿಜಯ್ ಹೇಳಿಕೆಯಂತೆ ಬ್ಯಾಂಕ್ ನವರು ಸರಿಯಾಗಿ ಸ್ಪಂದಿಸುತ್ತಿಲ್ಲ, ಸರಿಯಾದ ರೀತಿಯಲ್ಲಿ ನಡೆದುಕೊಳ್ಳುತ್ತಿರಲಿಲ್ಲ. ತಿರಸ್ಕಾರ ಭಾವನೆಯಿಂದ ನೋಡುತ್ತಿದ್ದು ಇದರ ಬಗ್ಗೆ ವಿಜಯಕುಮಾರ್‌ಗೆ ಸಿಟ್ಟು ಬಂದಿತ್ತು. ಬ್ಯಾಂಕ್ ನ ಬಗ್ಗೆ ಬಹಳ ದ್ವೇಷದ ಭಾವನೆ ಬೆಳೆದಿತ್ತು.
ಯೂಟ್ಯೂಬ್‌ನಲ್ಲಿ ಹಾಗೂ ವಿವಿಧ ಓಟಿಪಿ ಆನ್ಲೈನ್ ಪ್ಲಾಟ್ ಫಾರ್ಮ್ ಗಳಲ್ಲಿ ಬ್ಯಾಂಕ್ ದರೋಡೆ, ಬ್ಯಾಂಕ್ ರಾಬರಿ ಹಾಗೂ ಬ್ಯಾಂಕ್ ಕಳ್ಳತನಕ್ಕೆ ಸಂಬಂಧಿಸಿದಂತೆ ವಿಡಿಯೋಗಳನ್ನು ನೋಡಿದ್ದ. ಅನೇಕ ಸರಣಿ ವಿಡಿಯೋಗಳನ್ನು ಸುಮಾರು ಆರು ತಿಂಗಳು ಕಾಲ ನೋಡಿದ್ದ.
ತಾನು ಒಂದು ಬ್ಯಾಂಕ್ ಕಳ್ಳತನ ಮಾಡಲು ಬೇಕಾಗುವಂತಹ ಎಲ್ಲಾ ಮಾಹಿತಿಗಳನ್ನು ಹಾಗೂ ಕೌಶಲ್ಯಗಳನ್ನು ಪದೇ ಪದೇ ಆ ವಿಡಿಯೋಗಳನ್ನು ನೋಡಿ ಸಂಗ್ರಹಿಸಿ ಬ್ಯಾಂಕ್ ಕಳ್ಳತನ ಹೇಗೆ ಎಂದು ಮಾಡಬಹುದೆಂಬುವ ಬಗ್ಗೆ ಕರಗತ
ಮಾಡಿಕೊಂಡಿದ್ದಾಗಿ ತಿಳಿಸಿದ್ದಾನೆ.
ಕೃತ್ಯ ಎಸಗುವ ಸಂಬಂಧ ಸುಮಾರು ಆರು ತಿಂಗಳಿಂದ ಅದಕ್ಕೆ ಬೇಕಾಗುವ ಎಲ್ಲಾ ವಿವಿಧ ಸಲಕರಣೆಗಳನ್ನು ಶಿವಮೊಗ್ಗದಿಂದ ಹಾಗೂ ನ್ಯಾಮತಿ ಪಟ್ಟಣದಿಂದ ತಂದು ಸಂಗ್ರಹಿಸಿಕೊಂಡಿದ್ದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.
ಪ್ರಕರಣ ಎಸಗುವ ಮೂರು ತಿಂಗಳ ಹಿಂದೆ ವಿಜಯಕುಮಾರ್, ತನ್ನ ತಮ್ಮ (ಅಜಯ್), ಭಾಮೈದ ಹಾಗೂ ಮೂರು ಜನ ಸ್ನೇಹಿತರನ್ನು ಕರೆದು ಸುರಹೊನ್ನೆ ಶಾಲೆಯ ಬಳಿ ಕೃತ್ಯಕ್ಕೆ ಸಂಬಂಧಿಸಿದ ರೂಪುರೇಷಗಳ ಬಗ್ಗೆ ಪ್ಲಾನ್ ತಯಾರು
ಮಾಡಿದ್ದನ್ನು ಚರ್ಚಿಸಿದ್ದ.
ನಮ್ಮೆಲ್ಲರಿಗೂ ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಸಿಗಬೇಕು, ಒಳ್ಳೆಯ ಐಷಾರಾಮ ಜೀವನ ಮಾಡಲು ಹಣದ ಅವಶ್ಯಕತೆ ಬಹಳ ಇರುವುದರಿಂದ ತಾನೊಂದು ಪ್ಲಾನ್ ಮಾಡಿದ್ದು, ಅದರಂತೆ ಬ್ಯಾಂಕ್ ದರೋಡೆ ಮಾಡಿದರೆ ಬೇಗ ಶ್ರೀಮಂತರಾಗಬಹುದೆಂದು ಅವರಿಗೆ ಮನವರಿಕೆ ಮಾಡಿಕೊಟ್ಟು ತನ್ನ ಪ್ಲಾನ್ ಬಗ್ಗೆ ತಿಳಿಸಿದ್ದ.
ಇನ್ನುಳಿದ ಕೆಲವರು ಉಳಿದ ಅವಶ್ಯಕ ವಸ್ತುಗಳಾದ ಮಂಕಿ ಕ್ಯಾಪ್, ಗ್ಲೌಸ್, ಬ್ಲಾಕ್ ಶರ್ಟ್ ಮತ್ತು ಪ್ಯಾಂಟ್ ಗಳನ್ನು ಮಾರ್ಕೆಟ್‌ನಿಂದ ಖರೀದಿಸಿ ತಂದಿದ್ದರು. 15 ದಿನಗಳ ಹಿಂದೆಯೇ ವಿಜಯನು ಅಭಿಷೇಕನೊಂದಿಗೆ ಬ್ಯಾಂಕ್ ಕಳ್ಳತನ ಮಾಡುವ ಬಗ್ಗೆ ನ್ಯಾಮತಿ ಎಸ್ ಬಿ ಐ ಬ್ಯಾಂಕ್ ಸುತ್ತ ಹೋಗಿ ಬ್ಯಾಂಕ್ ಕಳ್ಳತನ ಮಾಡಬೇಕು ಎಂದು ಅಭ್ಯಾಸ ಮಾಡಿದ್ದ. ಒಂದೊಂದು ಸಣ್ಣ ವಿಷಯಕ್ಕೂ ತುಂಬಾ ಅಚ್ಚುಕಟ್ಟಾಗಿ ತಯಾರಾಗಿದ್ದರು. ರಾತ್ರಿ ವೇಳೆಯಲ್ಲಿಯೂ ಬಂದು ಎಲ್ಲಾ ರೀತಿಯ ವೀಕ್ಷಣೆ ಮಾಡಿದ್ದರು.