SUDDIKSHANA KANNADA NEWS/ DAVANAGERE/ DATE:27-01-2025
ದಾವಣಗೆರೆ: ಚನ್ನಗಿರಿ ತಾಲೂಕಿನ ಸೂಳೆಕೆರೆ ಗುಡ್ಡಕ್ಕೆ ಬೆಂಕಿ ಬಿದ್ದಿತ್ತು. ಮೂರ್ನಾಲ್ಕು ದಿನಗಳ ಕಾಲ ಹೊತ್ತಿ ಉರಿದಿತ್ತು. ಆದ್ರೆ, ಇದೀಗ ಹರಿಹರ ತಾಲೂಕಿನ ಸಾರಥಿ ಗ್ರಾಮದಲ್ಲಿಯೂ ಗುಡ್ಡಕ್ಕೆ ಬೆಂಕಿ ಬಿದ್ದಿದೆ. ಇದರಿಂದಾಗಿ ಬಣವೆ ಭಸ್ಮವಾಗಿದೆ. ಬೆಳೆಯೂ ಸುಟ್ಟುಕರಕಲಾಗಿದೆ. ರೈತರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹರಿಹರ ತಾಲೂಕಿನ ಸಾರಥಿ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದ ಗುಡ್ಡಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಸುಮಾರು 30 ಎಕರೆ ಪ್ರದೇಶದಲ್ಲಿನ ಬೆಳೆ ಹಾಗೂ 30ಕ್ಕೂ ಹೆಚ್ಚು ಅಧಿಕ ಹುಲ್ಲಿನ ಬಣವೆಗಳು ಸುಟ್ಟುಕರಕಲಾಗಿವೆ.
ಭಾನುವಾರ ಮಧ್ಯಾಹ್ನ 12.30ರ ಸುಮಾರಿಗೆ ಗ್ರಾಮಸ್ಥರಿಗೆ ಗುಡ್ಡದ ಮೇಲ್ಭಾಗದಲ್ಲಿ ಬೆಂಕಿ ಹೊತ್ತಿಕೊಂಡಿರುವುದು ಗೊತ್ತಾಗಿದೆ. ಆದ್ರೆ, ಬೆಂಕಿಯು ಬೆಳಿಗ್ಗೆಯೇ ಬಿದ್ದಿತ್ತು. ಅಗ್ನಿಶಾಮಕ ದಳ, ಪೊಲೀಸರು ಹಾಗೂ ಸ್ಥಳೀಯರ ಸಹಕಾರದಿಂದಾಗಿ
ಸಂಜೆ 4.30ರ ಸುಮಾರಿಗೆ ಬೆಂಕಿ ನಂದಿಸಲಾಯಿತು.
ಸುಮಾರು 10 ಎಕರೆಯಲ್ಲಿ ಬೆಳೆದಿದ್ದ ತೊಗರಿ, 4 ಎಕರೆಯಲ್ಲಿ ಬೆಳೆದಿದ್ದ ಅಲಸಂದೆ, 15 ಎಕರೆ ಜೋಳ, ಜಾನುವರುಗಳಿಗಾಗಿ ಸಂಗ್ರಹಿಸಿಟ್ಟಿದ್ದ 30ಕ್ಕೂ ಹೆಚ್ಚು ಹುಲ್ಲಿನ ಬಣವೆಗಳು ಭಸ್ಮವಾಗಿದ್ದು, ಘನತ್ಯಾಜ್ಯ ಘಟಕಕ್ಕೂ ಬೆಂಕಿ ತಾಗಿದ್ದು, ಹಸಿಕಸ
ಹಾಗೂ ಒಣಕಸ ಸಂಪೂರ್ಣ ಸುಟ್ಟು ಸುಮಾರು 50 ಸಾವಿರ ರೂಪಾಯಿಯಷ್ಟು ಹಾನಿ ಆಗಿದೆ. ನರೇಗಾ ಯೋಜನೆಯಡಿ ದೀಟೂರಿನಿಂದ ಸಾರಥಿ ಆಂಜನೇಯ ದೇವಸ್ಥಾನದವರೆಗೆ 900 ಅರಳಿ, ಗೋಣಿ, ಬಸರಿಗಿಡ ನೆಡಲಾಗಿತ್ತು. ಇವುಗಳಲ್ಲಿ ಹಲವು ಗಿಡಗಳು ಬೆಂಕಿಗೆ ಆಹುತಿಯಾಗಿವೆ.
ಗೋಮಾಳ ಜಮೀನುಗಳನ್ನು ಹೊಂದಿರುವ ಸುತ್ತಮುತ್ತಲಿನ ಗುಡ್ಡಗಳು ಒಣಗಿದ ಹುಲ್ಲು ಮತ್ತು ಕುರುಚಲು ಗಿಡಗಳಿಂದ ತುಂಬಿದ್ದು, ಸಣ್ಣ ಬೆಂಕಿಯ ಕಿಡಿ ಇಷ್ಟೊಂದು ಅನಾಹುತ ಸೃಷ್ಟಿಸಿದೆ. ರೈತರು ಹೊಲದ ಕಳೆ ತೆಗೆಯಲು ಬೆಂಕಿ ಹಚ್ಚಬಾರದು ಎಂದು ಅರಣ್ಯ ಇಲಾಖೆಯ ಅಧಿಕಾರಿ ಧನ್ಯಕುಮಾರ್ ಮನವಿ ಮಾಡಿದ್ದಾರೆ.