
ಅಮೃತಸರ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಇಟಲಿಯಲ್ಲಿ ಹುಟ್ಟಿ ಬೆಳೆದ ಜನ್ಮಸ್ಥಳವನ್ನು ಮ್ಯೂಸಿಯಂ ಆಗಿ ಪರಿವರ್ತಿಸಲು ಇಟಲಿ ಮೂಲದ ಸಿಖ್ ಉದ್ಯಮಿ ಸುಖದೇವ್ ಸಿಂಗ್ ಕಾಂಗ್ ಮುಂದಾಗಿದ್ದಾರೆ. 2020ರಲ್ಲಿ ಸೋನಿಯಾ ಗಾಂಧಿ ಅವರ ಪೂರ್ವಿಕರ ಈ ಮನೆಯನ್ನು ತಮ್ಮ ಪತ್ನಿ ಹಾಗೂ ಮಗಳ ಹೆಸರಿನಲ್ಲಿ ಖರೀದಿಸಿರುವ ಸುಖದೇವ್ ಸಿಂಗ್, ಆರು ಕೊಠಡಿಗಳ ಈ ಆಸ್ತಿಯನ್ನು ಸೋನಿಯಾ ಗಾಂಧಿ ಅವರ ಬಾಲ್ಯದ ನೆನಪುಗಳನ್ನು ಬಿಂಬಿಸುವ ಮ್ಯೂಸಿಯಂ ಆಗಿ ರೂಪಿಸಲು ಇಚ್ಛಿಸಿದ್ದಾರೆ.
ಪಂಜಾಬ್ನ ಹೊಶಿಯಾರ್ಪುರ ಮೂಲದವರಾದ 52 ವರ್ಷದ ಸುಖದೇವ್ ಸಿಂಗ್ ಕಾಂಗ್ ಅವರು 1992ರಲ್ಲಿ ಇಟಲಿಗೆ ತೆರಳಿದ್ದರು. ಪ್ರಸ್ತುತ ಇಟಲಿಯ ಬ್ರೇಷಿಯಾದಲ್ಲಿ ನೆಲೆಸಿರುವ ಅವರು, ವಿಸೆಂಜಾ ಪ್ರಾಂತ್ಯದ ಲುಸಿಯಾನಾದಲ್ಲಿರುವ ಸೋನಿಯಾ ಗಾಂಧಿ ಅವರ ಜನ್ಮಸ್ಥಳವನ್ನು ಖರೀದಿಸಿದ್ದಾರೆ.
ಈ ಮನೆಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲಾಗಿದ್ದು, ಸೋನಿಯಾ ಗಾಂಧಿ ಜನಿಸಿದ ಸ್ಥಳ ಎಂದು ಫಲಕವನ್ನೂ ಹಾಕಲಾಗಿದೆ. ಮ್ಯೂಸಿಯಂ ಆರಂಭಿಸಲು ಗಾಂಧಿ ಕುಟುಂಬದವರನ್ನು ಭೇಟಿ ಮಾಡಿ ವೈಯಕ್ತಿಕ ವಸ್ತುಗಳು, ಫೋಟೋಗಳು ಹಾಗೂ ದಾಖಲೆಗಳನ್ನು ಸಂಗ್ರಹಿಸುವ ಇಂಗಿತವನ್ನು ಅವರು ವ್ಯಕ್ತಪಡಿಸಿದ್ದಾರೆ.
ಮ್ಯೂಸಿಯಂ ನಿರ್ಮಾಣದ ಯೋಜನೆ: ಸೋನಿಯಾ ಗಾಂಧಿ ಅವರ 6 ಕೊಠಡಿಗಳ ಬಾಲ್ಯದ ಮನೆಯನ್ನು ಅತ್ಯಾಧುನಿಕ ಮ್ಯೂಸಿಯಂ ಆಗಿ ಪರಿವರ್ತಿಸಿ, ಪ್ರವಾಸಿಗರಿಗೆ ಮುಕ್ತಗೊಳಿಸಲು ಸುಖದೇವ್ ಸಿಂಗ್ ಮತ್ತು ಅವರ ಕುಟುಂಬ ನಿರ್ಧರಿಸಿದೆ.
ಖರೀದಿಯ ಹಿನ್ನೆಲೆ: 2020ರಲ್ಲಿ ಈ ಮನೆಯನ್ನು ಖರೀದಿಸಲಾಗಿದ್ದು, ಭಾರತೀಯರು ಮತ್ತು ಸಿಖ್ ಕುಟುಂಬವೊಂದಕ್ಕೆ ಈ ಆಸ್ತಿ ಸಿಗಬೇಕೆಂಬ ಸ್ಥಳೀಯರ ಆಸೆಯಂತೆ ಇದನ್ನು ತಮ್ಮ ಕುಟುಂಬದ ಹೆಸರಿಗೆ ನೋಂದಾಯಿಸಿಕೊಂಡಿರುವುದಾಗಿ ಸುಖದೇವ್ ತಿಳಿಸಿದ್ದಾರೆ.
ಗಾಂಧಿ ಕುಟುಂಬದ ಭೇಟಿಗೆ ಅಪೇಕ್ಷೆ: ಮ್ಯೂಸಿಯಂನಲ್ಲಿ ಪ್ರದರ್ಶಿಸಲು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿಯಾಗಿ ಅವರ ಬಾಲ್ಯದ ವಸ್ತುಗಳು ಹಾಗೂ ಸ್ಮರಣಿಕೆಗಳನ್ನು ಪಡೆಯಲು ಕಾಂಗ್ ಎದುರು ನೋಡುತ್ತಿದ್ದಾರೆ.
ಸ್ಥಳೀಯ ಆರ್ಥಿಕತೆಗೆ ಕೊಡುಗೆ: ಒಮ್ಮೆ ಮ್ಯೂಸಿಯಂ ಪೂರ್ಣಗೊಂಡರೆ ನೂರಾರು ಭಾರತೀಯ ಪ್ರವಾಸಿಗರು ಭೇಟಿ ನೀಡಲಿದ್ದು, ಇದು ಸ್ಥಳೀಯ ಗ್ರಾಮದ ಆರ್ಥಿಕತೆಗೂ ಸಹಕಾರಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.




