SUDDIKSHANA KANNADA NEWS/ DAVANAGERE/ DATE:19-11-2024
ಬೆಂಗಳೂರು: ಪತ್ರಕರ್ತ ಸಮುದಾಯಕ್ಕೆ ಮತ್ತು ಪತ್ರಕರ್ತರ ಕುಟುಂಬಗಳಿಗೆ ಆರೋಗ್ಯ ಸಂಜೀವಿನಿ ಸೌಲಭ್ಯವನ್ನು ಆದಷ್ಟು ಬೇಗ ಒದಗಿಸಿಕೊಡುವ ಬಗ್ಗೆ ಪ್ರಾಮಾಣಿಕ ಪ್ರಯತ್ನ ಆರಂಭಿಸಿದ್ದೇನೆ ಎಂದು ಸಿಎಂ ಮಾಧ್ಯಮ ಸಲಹೆಗಾರ ಕೆ. ವಿ. ಪ್ರಭಾಕರ್ ತಿಳಿಸಿದರು.
ರಾಜ್ಯೋತ್ಸವ ಮತ್ತು ಸುವರ್ಣ ಸಂಭ್ರಮ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಿಗೆ ಸಮ್ಮಾನಿಸಿ, ಗೌರವಿಸಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ನಮ್ಮ ಈ ಬೇಡಿಕೆಗೆ ಸ್ಪಂದಿಸುತ್ತಾರೆ ಎನ್ನುವ ಭರವಸೆ ಎಂದು
ಆಶಯ ವ್ಯಕ್ತಪಡಿಸಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಲ್ವರೂ ಹಿರಿಯ ಪತ್ರಕರ್ತರು ನನ್ನ ಮತ್ತು ಪತ್ರಿಕಾ ವೃತ್ತಿಯ ಸಾಕ್ಷಿ ಪ್ರಜ್ಞೆ ಆಗಿದ್ದಾರೆ ಎಂದು ತಿಳಿಸಿದರು.
ರಾಜ್ಯೋತ್ಸವ ಪುಸ್ಕೃತರಾಗಿರುವ ಸನತ್ ಕುಮಾರ್ ಬೆಳಗಲಿ, ಎನ್.ಎಸ್.ಶಂಕರ್, ಕಾರಟಗಿ, ರಾಮಕೃಷ್ಣ ಅವರೆಲ್ಲರೂ ನನಗೆ ವೈಯುಕ್ತಿಕವಾಗಿ ಸಾಕ್ಷಿಪ್ರಜ್ಞೆ ಆಗಿದ್ದಾರೆ ಜೊತೆಗೆ ಪತ್ರಿಕಾ ವೃತ್ತಿಯ ಸಾಕ್ಷಿಪ್ರಜ್ಞೆ ಕೂಡ ಆಗಿದ್ದಾರೆ ಎಂದರಲ್ಲದೇ,
ಸನತ್ ಕುಮಾರ್ ಬೆಳಗಲಿ ಮತ್ತು ಎನ್.ಎಸ್.ಶಂಕರ್ ಅವರಿಗೆ ಯಾವತ್ತೋ ರಾಜ್ಯೋತ್ಸವ ಪ್ರಶಸ್ತಿ ಬರಬೇಕಿತ್ತು. ಆದರೆ ನಮ್ಮ ಅವಧಿಯಲ್ಲಿ ಸಿಕ್ಕಿರುವುದು ನಮ್ಮ ಸೌಭಾಗ್ಯ ಎಂದು ಹೇಳಿದರು.
ಸುವರ್ಣ ಸಂಭ್ರಮ ಪ್ರಶಸ್ತಿ ಪುರಸ್ಕೃತರು ನನ್ನ ಸಹದ್ಯೋಗಿಗಳು, ಸಮಕಾಲೀನರೂ ಇದ್ದಾರೆ. ನಾವೆಲ್ಲಾ ಒಟ್ಟೊಟ್ಟಿಗೇ ಒಡನಾಡಿಕೊಂಡು ಪತ್ರಿಕೋದ್ಯಮದ ಭಾಗ ಆಗಿದ್ದವರು. ಎಲ್ಲರಿಗೂ ಶುಭಾಶಯಗಳನ್ನು ಕೋರುತ್ತೇನೆ
ಎಂದು ತಿಳಿಸಿದರು.
ಬೇರೆ ಬೇರೆ ಸಾಮಾಜಿಕ ಹಿನ್ನೆಲೆಯಿಂದ ಬಂದು ಪತ್ರಿಕಾ ವೃತ್ತಿಯನ್ನು ಅರ್ಥಪೂರ್ಣಗೊಳಿಸಿದ್ದಾರೆ, ಪತ್ರಿಕಾ ವೃತ್ತಿಯ ವಿಶ್ವಾಸಾರ್ಹತೆಯನ್ನು ಕಾಪಾಡಲು ಇಷ್ಟೂ ಮಂದಿ ತಮ್ಮ ಪಾಲನ್ನು ಒದಗಿಸಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.
ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೆಷಾ ಖಾನುಂ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಪ್ರೆಸ್ ಕ್ಲಬ್ ಅಧ್ಯಕ್ಷ ಶ್ರೀಧರ್ ಸೇರಿ ಇತರೆ ಪದಾಧಿಕಾರಿಗಳು ಉಪಸ್ಥಿತರಿದ್ದರು.