ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತೇನೆ. ತಾತ ಶಾಮನೂರು ಶಿವಶಂಕರಪ್ಪರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತೇನೆ. ನನ್ನ ಮನೆಯ ಬಾಗಿಲು ಮತ್ತು ಮನಸ್ಸು ಯಾವಾಗಲೂ ತೆರೆದಿರುತ್ತದೆ. ಜನಸೇವೆಯೇ ನನ್ನ ಗುರಿ ಎಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಸಮರ್ಥ್ ಶಾಮನೂರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ತಂದೆ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರು. ತಾಯಿ ಸಂಸದೆ. ಎಸ್. ಎಸ್. ಮಲ್ಲಿಕಾರ್ಜುನ್ ಹಾಗೂ ಪ್ರಭಾ ಮಲ್ಲಿಕಾರ್ಜುನ್ ಅವರು ಪ್ರಭಾವಶಾಲಿ ರಾಜಕಾರಣಿಗಳು. ಅವರ ಪುತ್ರನಾದ ನಾನೂ ಸಹ ಪ್ರಭಾವಶಾಲಿಯೆಂದೇ ಜನರು ಪರಿಗಣಿಸುತ್ತಾರೆ. ನಾನು ಜನರ ಸೇವೆಗೆ ಹೆಚ್ಚಿನ ಆದ್ಯತೆ ನೀಡುತ್ತೇನೆ. ಶಾಮನೂರು ಶಿವಶಂಕರಪ್ಪ ಅವರು ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮಗಳು, ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಉಳಿದ ಕೆಲಸಗಳನ್ನು ಮುಗಿಸುತ್ತೇನೆ. ಜನರು ಇಷ್ಟಪಡುವ ರೀತಿಯಲ್ಲಿ ಕೆಲಸ ಮಾಡಿ ತೋರಿಸುತ್ತೇನೆ ಎಂದು ಹೇಳಿದರು.
ದಾವಣಗೆರೆ ದಕ್ಷಿಣ ಅಭ್ಯರ್ಥಿಯಾಗಿ ಸ್ಪರ್ಧಿಸಿದ ನನಗೆ ಮತ ನೀಡಲು ಹಗಲಿರುಳು ಶ್ರಮಿಸಿ ಜಯಶೀಲರನ್ನಾಗಿ ಮಾಡಲು ಸಹಕರಿಸಿದ ಎಲ್ಲಾ ಮತದಾರ ಬಂಧುಗಳು, ಕಾರ್ಯಕರ್ತರು, ಎಲ್ಲಾ ಘಟಕಗಳು ಮತ್ತು ವಿಭಾಗಗಳ ಅಧ್ಯಕ್ಷರು, ಪದಾಧಿಕಾರಿಗಳಿಗೂ, ಪಕ್ಷದ ಎಲ್ಲಾ ಹಿರಿಯ, ಕಿರಿಯ ಮುಖಂಡರುಗಳಿಗೂ, ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸಹಕರಿಸಿದ ಎಲ್ಲಾ ಸಮಾಜ ಬಾಂಧವರಿಗೂ ಹೃತ್ತೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
ರಾಜಕೀಯದಲ್ಲಿ ಸೋಲು, ಗೆಲುವು ಸಹಜವಾಗಿದ್ದು, ದಾವಣಗೆರೆಯ ಜಿಲ್ಲಾ ಪಕ್ಷಗಳ ಸದಸ್ಯರು ಯಾವುದೇ ಸಮಸ್ಯೆಗಳಿಗೂ ನಮ್ಮನ್ನು ನೇರವಾಗಿ ಸಂಪರ್ಕಿಸಬಹುದು ಎಂದು ತಿಳಿಸಲು ಇಚ್ಛಿಸುತ್ತೇನೆ ಎಂದರು.
ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯರು, ಡಿಸಿಎಂ ಡಿ. ಕೆ. ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ಸೇರಿದಂತೆ ಸಚಿವರು, ಮುಖಂಡರು, ಕಾರ್ಯಕರ್ತರು
ಶ್ರಮಿಸಿದ್ದಾರೆ. ನನ್ನ ಪರವಾಗಿ ಮತಯಾಚಿಸಿ ಗೆಲ್ಲುವಂತೆ ಮಾಡಿದ್ದಾರೆ. ಎಐಸಿಸಿ, ಕೆಪಿಸಿಸಿ, ಪದಾಧಿಕಾರಿಗಳು, ಸದಸ್ಯರು, ಕಾಂಗ್ರೆಸ್ ಪಕ್ಷದ ಶಾಸಕರಿಗೂ, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ನಗರ ಮತ್ತು ಗ್ರಾಮಾಂತರ ಪ್ರದೇಶದ ಎಲ್ಲಾ
ಮುಖಂಡರುಗಳಿಗೂ ಕಾರ್ಯಕರ್ತರಿಗೂ, ಸ್ನೇಹಿತರಿಗೂ, ಬಂಧುಗಳಿಗೂ, ಅಭಿಮಾನಿಗಳಿಗೂ ಹೃದಯ ಪೂರ್ವಕ ಕೃತಜ್ಞತೆಗಳು ಎಂದು ಹೇಳಿದರು.
ಗೋಷ್ಠಿಯಲ್ಲಿ ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ದಾವಣಗೆರೆ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್, ನಾಗರಾಜ್, ಅನಿತಾ ಬಾಯಿ ಮತ್ತಿತರರು ಹಾಜರಿದ್ದರು.





Leave a comment