SUDDIKSHANA KANNADA NEWS/ DAVANAGERE/ DATE:15-08-2024
ದಾವಣಗೆರೆ: ತುಂಗಾಭದ್ರಾ ನದಿ ಮೂಲದಿಂದ ಏತ ನೀರಾವರಿ ಯೋಜನೆಗಳ ಮೂಲಕ ಮಳೆಗಾಲದಲ್ಲಿ ಕೆರೆಗಳನ್ನು ತುಂಬಿಸುವ ಮೂಲಕ ಅಂತರ್ಜಲ ಮಟ್ಟ ಹೆಚ್ಚಳ ಮತ್ತು ರೈತರ ಬದುಕನ್ನು ಹಸನುಗೊಳಿಸಲು ಕಾರ್ಯಕ್ರಮ ರೂಪಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ತಿಳಿಸಿದರು.
ಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 78 ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಹರಿಹರ ತಾಲ್ಲೂಕಿನ ದೀಟೂರು ಗ್ರಾಮದಿಂದ ಏತ ನೀರಾವರಿ ಮೂಲಕ ಜಗಳೂರು ತಾಲ್ಲೂಕಿನ 51 ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಈಗಾಗಲೇ 31 ಕೆರೆಗಳಿಗೆ ನೀರು ಹರಿಸಿದ್ದು, ಯೋಜನೆಯಿಂದ 65 ಗ್ರಾಮಗಳಿಗೆ ಪ್ರಯೋಜನವಾಗಲಿದೆ ಎಂದು ಮಾಹಿತಿ ನೀಡಿದರು.
ಹೊನ್ನಾಳಿ ತಾಲ್ಲೂಕಿನ 23 ಹಾಗೂ ಹರಿಹರ ತಾಲ್ಲೂಕಿನ ಒಂದು ಕೆರೆಗೆ ನೀರು ತುಂಬಿಸಲು ರೂ. 52 ಕೋಟಿ ವೆಚ್ಚದ ಯೋಜನೆ ಇದಾಗಿದ್ದು, ಕಾಮಗಾರಿ ಅಂತಿಮ ಹಂತದಲ್ಲಿದೆ. ಹೊನ್ನಾಳಿ ಹಾಗೂ ನ್ಯಾಮತಿ ತಾಲ್ಲೂಕಿನ 26 ಕೆರೆಗಳಿಗೆ ನೀರು ತುಂಬಿಸಲು ರೂ. 100 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಂಡು ಚಾಲನೆಯಾಗಿದೆ.ಈ ಯೋಜನೆಯಡಿ ಜಿಲ್ಲೆಯ ಚನ್ನಗಿರಿ, ಹೊನ್ನಾಳಿ ಹಾಗೂ ದಾವಣಗೆರೆ ತಾಲ್ಲೂಕುಗಳಲ್ಲಿನ ಒಟ್ಟು 96 ಗ್ರಾಮಗಳ 102 ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಕಾಮಗಾರಿ ಬಹುತೇಕ ಮುಕ್ತಾಯದ ಹಂತಕ್ಕೆ ತಲುಪಿದ್ದು, ಕೆಲವೇ ದಿನಗಳಲ್ಲಿ ಚಾಲನೆಗೊಳ್ಳಲಿದೆ ಎಂದು ಹೇಳಿದರು.
ಈ ಯೋಜನಾ ವೆಚ್ಚ ರೂ. 432 ಕೋಟಿ ರೂಪಾಯಿಯಾಗಿದೆ. ಹೀಗೆ ನುಡಿದಂತೆ ನಡೆಯುತ್ತಿರುವ ನಮ್ಮ ರಾಜ್ಯ ಸರ್ಕಾರವು ಜನಪರ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಶ್ರಮಿಸುತ್ತಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನಾವೂ ಸಹ ಕಂಕಣಬದ್ಧರಾಗಿದ್ದು, ಜನತೆಯ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸದಾ ಜನಪರವಾಗಿ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.