SUDDIKSHANA KANNADA NEWS/ DAVANAGERE/ DATE-19-06-2025
ಬೆಂಗಳೂರು: ಸರ್ಕಾರಿ ಇಲಾಖೆಗಳಲ್ಲಿ ಗುತ್ತಿಗೆ, ಹೊರಗುತ್ತಿಗೆ ಮತ್ತು ಗೌರವಧನದ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಸುಮಾರು 3 ಲಕ್ಷ ಸಿಬ್ಬಂದಿಗಳು ಮತ್ತು ಅವರ ಅವಲಂಬಿತರಿಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ವಾರ್ಷಿಕವಾಗಿ ರೂ. 5 ಲಕ್ಷಗಳವರೆಗೆ ನಗದು ರಹಿತ ಆರೋಗ್ಯ ಯೋಜನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.
ಸಿಬ್ಬಂದಿಗಳಿಂದ ಮಾಸಿಕ 100 ರೂ.ಗಳ ವಂತಿಗೆ ಮತ್ತು ಸರ್ಕಾರದಿಂದ ಉಳಿಕೆ ಹಣವನ್ನು ಭರಿಸಲು ನಿರ್ಧರಿಸಿದೆ.
ಎ.ಆರ್.ಎಸ್ : ನಾಮನಿರ್ದೇಶನ ಮಾಡುವ ಅಧಿಕಾರದಲ್ಲಿನ ಬದಲಾವಣೆ:
ಕರ್ನಾಟಕ ನೋಂದಣಿ ಸಂಘಗಳ ಕಾಯ್ದೆ 1960ರ ಪ್ರಕಾರ ಸಂಘಗಳಾಗಿ ನೋಂದಾಯಿಸಲಾದ ಆರೋಗ್ಯ ರಕ್ಷಾ ಸಮಿತಿಗಳು (ಎ.ಆರ್.ಎಸ್) ಆಡಳಿತ/ ಸಾಮಾನ್ಯ ಸಭೆಯ ಸದಸ್ಯರನ್ನು ನಾಮನಿರ್ದೇಶನ ಮಾಡುವ ಅಧಿಕಾರದಲ್ಲಿನ ಬದಲಾವಣೆ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಸ್ಪೋಕ್ ಯೋಜನೆಯ 12.87 ಕೋಟಿಗಳ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ:
ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಪಾಶ್ವವಾಯು ಮತ್ತು ತಲೆಗೆ ತೀವ್ರ ಪೆಟ್ಟಾದ ರೋಗಿಗಳ ಆರೈಕೆಗಾಗಿ ಹಬ್ ಮತ್ತು ಸ್ಪೋಕ್ ಮಾದರಿಯಲ್ಲಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮೊದಲ ಹಂತದಲ್ಲಿ ಸ್ಪೋಕ್ ಆಗಿ ಕಾರ್ಯನಿರ್ವಹಿಸುವ ಯೋಜನೆಯ 12.87 ಕೋಟಿಗಳ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಮರುನಾಮಕರಣ:
ಕಂದಾಯ ಇಲಾಖೆಯಡಿ ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನ ಬಸಾಪೂರ ಗ್ರಾಮದ ಹೆಸರನ್ನು ಗೇರುಗುಟ್ಟ ಬಸಾಪೂರ ಎಂದು ಮರುನಾಮಕರಣ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಆನರು ಮೊದಲಿನಿಂದ ಗೇರುಗುಡ್ಡ ಬಸಾಪೂರ ಎಂದು ಕರೆಯುತ್ತಿದ್ದ ಹಿನ್ನೆಲೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಸಚಿವ ಹೆಚ್. ಕೆ.ಪಾಟೀಲ್ ತಿಳಿಸಿದರು.
ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ:
ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಅನುಭವ ಮಂಟಪ ನಿರ್ಮಾಣ ಕಾಮಗಾರಿಯ 742 ಕೋಟಿಗಳ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆಯನ್ನು ನೀಡಿದೆ. 612 ಕೋಟಿ ರೂ.ಗಳ ವೆಚ್ಚವಿತ್ತು. ಒಂದು ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸಲು ಪ್ರಯತ್ನ ಮಾಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
23.51 ಕೋಟಿಗಳ ಅಂದಾಜು ಮೊತ್ತದ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ:
ರಾಜ್ಯ ವಿಪತ್ತು ಉಪಶಪನ ನಿಧಿಯಡಿ ಅನುಮೋದಿಸಿರುವ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲ್ಲೂಕಿನ ಶಿಲಹಳ್ಳಿ ಗ್ರಾಮದ ಬಳಿ ಕೃಷ್ಣಾ ನದಿಯ ಉಪನದಿಗೆ ಅಡ್ಡಲಾಗಿ ಹೈಲೆವೆಲ್ ಮೈನರ್ ಸೇತುವೆ ನಿರ್ಮಾಣ ಹಾಗೂ ಹುಬ್ಬಳ್ಳಿ ನಗರದ ರಾಜನಾಲಾಗೆ ತಡೆಗೋಡೆ ನಿರ್ಮಾಣ ಮಾಡುವ ಒಟ್ಟು 23.51 ಕೋಟಿಗಳ ಅಂದಾಜು ಮೊತ್ತದ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಗ್ರಂಥಾಲಯ ನಿರ್ಮಿಸಲು ರಿಯಾಯಿತಿ ದರದಲ್ಲಿ ನಿವೇಶನ:
ನಗರಾಭಿವೃದ್ಧಿ ಇಲಾಖೆಯಡಿ ರಾಯಚೂರು ಜಿಲ್ಲಾ ಕುರುಬರ ಸಂಘಕ್ಕೆ ಕನಕದಾಸ ಸಾರ್ವಜನಿಕ ಗ್ರಂಥಾಲಯ ನಿರ್ಮಿಸಲು ರಾಯಚೂರು ನಗರದ ಸಿಯತಲಾಬ್ ಬಡಲಾವಣೆಯಲ್ಲಿ ರಾಯಚೂರು ಮಹಾನಗರ ಪಾಲಿಕೆಗೆ ಸೇರಿದ 1200 ಚದರ ಅಡಿ ಅಳತೆಯ ಖಾಲಿ ನಿವೇಶನವನ್ನು ಶೇ 50 ರಷ್ಟು ರಿಯಾಯಿತಿ ದರದಲ್ಲಿ ಮಂಜೂರು ಮಾಡುವ ಬಗ್ಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಕನಕನಾಲಾ ಆಧುನೀಕರಣ ಯೋಜನೆಗೆ ಆಡಳಿತಾತ್ಮಕ ಅನುಮೋದನೆ:
ಜಲಸಂಪನ್ಮೂಲ ಇಲಾಖೆಯಡಿ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲ್ಲೂಕಿನ ಆರ್ಯಭೋಗಪುರ ಗ್ರಾಮದ ಬಳಿ ಮಸ್ಕಿನಾಲಾದಿಂದ ಕನಕನಾಲಾ ಕಣಿವೆಗೆ ಪ್ರವಾಹದ ನೀರನ್ನು ತಿರುಗಿಸಲು ಮಸ್ಕಿನಾಲೆಯ ಮೇಲ್ಭಾಗದಲ್ಲಿ ಬ್ರಿಡ್ಜ್ –ಕಂ ಬ್ಯಾರೇಜ್ ನಿರ್ಮಿಸಲು ಮತ್ತು ಕನಕನಾಲಾ ಆಧುನೀಕರಣ ಯೋಜನೆಯ 134.56 ಕೋಟಿಗಳ ಅಂದಾಜು ಮೊತ್ತದ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಹಿನ್ನೀರಿನ ಮೇಲ್ಭಾಗದಲ್ಲಿರುವ ಬಾಧಿತ ಅಚ್ಚುಕಟ್ಟು ಪ್ರದೇಶಗಳಾದ ಆರ್ಯಭೋಗಾಪುರ, ಮುದಲಗುಂಡಿ, ವನರಳ್ಳಿ, ಕಿಲನೂರು, ಕಲ್ಮಳ್ಳಿ, ಅಮರಾಪುರ ತಾಂಡಾಗಳು ಕಿಲ್ಲರಹಟ್ಟಿ ಗ್ರಾಮಗಳಿಗೆ ಅನುಕೂಲ ಕಲಗಪಿಸುವ ಉದ್ದೇಶದಿಂದ ಈ ಯೋಜನೆಯನ್ನು ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.
ವಿಯರ್ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ:
ರಾಯಚೂರು ತಾಲ್ಲೂಕಿನ ಸಿಂಧನೂರು ತಾಲ್ಲೂಕಿನ ಚನ್ನಬಸವೇಶ್ವರ (ಒಳಬಳ್ಳಾರಿ) ಏತ ನೀರಾವರಿ ಯೋಜನೆಯ ಜಾಕ್ ವೆಲ್ ಹತ್ತಿರ ತುಂಗಭದ್ರಾ ನದಿಗೆ ಅಡ್ಡಲಾಗಿ ವಿಯರ್ ನಿರ್ಮಾಣ ಮಾಡುವ 43.10 ಕೋಟಿಗಳ ಅಂದಾಜು ಮೊತ್ತದ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.