ದಾವಣಗೆರೆ: ಮಾಹಿತಿ ಹಕ್ಕು ಕಾಯಿದೆ ಎರಡನೇ ಸ್ವಾತಂತ್ರ್ಯ ಹಕ್ಕು ಎಂದರೆ ತಪ್ಪಾಗಲಾರದು. ಕಾಯಿದೆ ಬರುವುದಕ್ಕೂ ಮುಂಚೆ ಜನಸಾಮಾನ್ಯರಿಗೆ ಅಫಿಸಿಯಲ್ ಸೀಕ್ರೆಸಿ ಕಾಯಿದೆ ಅನ್ವಯ ಕೇಳಿದ ಮಾಹಿತಿಯನ್ನು ನೀಡಲಾಗುತ್ತಿರಲಿಲ್ಲ. ಮಾಹಿತಿ ಹಕ್ಕು ಕಾಯಿದೆ ಬಂದಾಗಿನಿಂದ ಆಡಳಿತದಲ್ಲಿ ಪಾರದರ್ಶಕತೆ ಹೆಚ್ಚಳ ಮತ್ತು ಆಡಳಿತದಲ್ಲಿ ಶಿಸ್ತು ಮೂಡಿದೆ. ಆದರೆ ಕೆಲವರು ಮಾಹಿತಿ ಕೇಳುವುದನ್ನು ಕಸುಬನ್ನಾಗಿ ಮಾಡಿಕೊಂಡಿದ್ದಾರೆ. ಮಾಹಿತಿ ಹಕ್ಕು ಕಾಯಿದೆಯಡಿ ಪಡೆಯುವ ದಾಖಲೆಗಳು ಸಾರ್ವಜನಿಕ ಹಿತಾಸಕ್ತಿ ಮತ್ತು ಸ್ವ ಹಿತಾಸಕ್ತಿಯಿಂದ ಕೂಡಿರಬೇಕು, ಆದರೆ ಅವ್ಯವಹಾರಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಮಾಹಿತಿ ಹಕ್ಕು ಆಯೋಗದ ಆಯುಕ್ತರಾದ ರಾಜಶೇಖರ್ ತಿಳಿಸಿದರು.
ಈ ಸುದ್ದಿಯನ್ನೂ ಓದಿ: ಮಾಹಿತಿ ಹಕ್ಕು ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ನವೆಂಬರ್ ನಲ್ಲಿ ಲೋಕ ಅದಾಲತ್ ಮಾದರಿಯಲ್ಲಿ ಕಲಾಪ: ರುದ್ರಣ್ಣ ಹರ್ತಿಕೋಟೆ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಹಿತಿ ಹಕ್ಕು ಕಾಯಿದೆಯಡಿ ಕೇವಲ 30 ಸೆಕ್ಷನ್‍ಗಳಿದ್ದು ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಸರಿಯಾಗಿ ಅರ್ಥಮಾಡಿಕೊಂಡು ಅನುಷ್ಟಾನ ಮಾಡಬೇಕು. ಯಾವುದೇ
ವೇದಿಕೆ, ಸಮಿತಿ ಎಂಬ ಹೆಸರಿನಲ್ಲಿ ಕಾಯಿದೆ ಹೆಸರು ಇರುವಂತಿಲ್ಲ ಮತ್ತು ಇದರ ಲಾಂಛನವನ್ನು ದುರ್ಬಳಕೆ ಮಾಡಿಕೊಳ್ಳುವಂತಿಲ್ಲ. ಒಂದೇ ಮಾಹಿತಿಗೆ ಸಂಬಂಧಿಸಿದಂತೆ ಎರಡನೇ ಮೇಲ್ಮನವಿ ಪ್ರಾಧಿಕಾರಕ್ಕೆ ಹಲವು
ಅರ್ಜಿ ಸಲ್ಲಿಸಿದವರನ್ನು ಕಪ್ಪುಪಟ್ಟಿಗೆ ಸೇರಿಸಲು ಆಯೋಗ ಪರಿಶೀಲಿಸಲಿದೆ. ಅವರು ಮಾಹಿತಿ ಹಕ್ಕು ಕಾಯಿದೆಯನ್ನು ದುರ್ಬಳಕೆ ಮಾಡಿಕೊಂಡಲ್ಲಿ ಅಂತಹ ಅರ್ಜಿದಾರರನ್ನು ನಿರ್ಬಂಧಿಸಲಾಗುತ್ತದೆ. ಇಲ್ಲಿಯವರೆಗೆ
ಆಯೋಗ 26 ಅರ್ಜಿದಾರರ ಮೇಲೆ ನಿರ್ಬಂಧ ಹಾಕಲಾಗಿದೆ ಎಂದರು.
ಮಾಹಿತಿ ಹಕ್ಕು ಕಾಯಿದೆಯಡಿ ಮಾಹಿತಿ ನೀಡದ ಅಧಿಕಾರಿಗಳಿಗೆ ದಿನಕ್ಕೆ 250 ರಂತೆ ಗರಿಷ್ಠ ರೂ.25000 ಗಳವರೆಗೆ ದಂಡ ವಿಧಿಸಲು ಮತ್ತು ಅರ್ಜಿದಾರರಿಗೆ ಪರಿಹಾರ ನೀಡಲು ಗರಿಷ್ಠ 1 ಲಕ್ಷದವರೆಗೆ ಮತ್ತು ಶಿಸ್ತುಕ್ರಮಕ್ಕೆ ಶಿಫಾರಸು ಮಾಡುವ ಅಧಿಕಾರ ಆಯೋಗಕ್ಕಿದೆ ಎಂದರು.
ಆರ್.ಟಿ.ಐ ಪ್ರಗತಿಯನ್ನು ಕೆಡಿಪಿ ಸಭೆಯಲ್ಲಿ ಪರಿಶೀಲಿಸಲು ಸರ್ಕಾರಕ್ಕೆ ಆಯೋಗ ಶಿಫಾರಸು ಮಾಡಿದೆ. ಮತ್ತು ಈಗಿರುವ ಅರ್ಜಿ ಶುಲ್ಕ, ಮಾಹಿತಿ ಶುಲ್ಕ, ಸಿಡಿಯಲ್ಲಿ ಹಾಕಿ ನೀಡುವ, ಭೌತಿಕವಾಗಿ ಪರಿಶೀಲಿಸುವ ಅವಧಿಯ ಶುಲ್ಕ ಪರಿಶೀಲನೆಗೆ ವಿಜಯಭಾಸ್ಕರ್ ಆಡಳಿತ ಸುಧಾರಣಾ ಆಯೋಗದಲ್ಲಿ ಪ್ರಸ್ತಾಪಿಸಲಾಗಿದೆ ಎಂದರು.
ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಮಾತನಾಡಿ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಿಗೆ ಸಲ್ಲಿಕೆಯಾಗುವ ಮಾಹಿತಿ ಹಕ್ಕು ಕಾಯಿದೆ ಅರ್ಜಿಗಳ ಸಂಖ್ಯೆಯನ್ನು ಕಡಿಮೆ ಮಾಡುವುದು ನಮ್ಮ ಗುರಿಯಾಗಿದ್ದು ಎರಡನೇ ಮೇಲ್ಮನವಿ ಅರ್ಜಿಗಳ ಸಂಖ್ಯೆಯನ್ನು ಗಣನೀಯವಾಗಿ ತಗ್ಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ದಾವಣಗೆರೆ ಜಿಲ್ಲೆಗೆ ಸಂಬಂಧಿಸಿದ ಎರಡನೇ ಮೇಲ್ಮನವಿ ಅರ್ಜಿಗಳ ವಿವರ; ಕಂದಾಯ ಇಲಾಖೆ 161, ಪಂಚಾಯತ್ ರಾಜ್ ಇಲಾಖೆ 90, ನಗರಾಭಿವೃದ್ದಿ ಇಲಾಖೆ 75, ಜಲಸಂಪನ್ಮೂಲ 53, ಲೋಕೋಪಯೋಗಿ ಇಲಾಖೆ 35,
ಶಿಕ್ಷಣ ಇಲಾಖೆ 31, ಸಮಾಜ ಕಲ್ಯಾಣ 30, ಗೃಹ ಇಲಾಖೆ 13, ಅಲ್ಪಸಂಖ್ಯಾತರ ಇಲಾಖೆ 11, ಅರಣ್ಯ ಇಲಾಖೆ 11, ಆರೋಗ್ಯ 10, ಇಂಧನ 9, ಸಹಕಾರ 8, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ 7, ಕೈಗಾರಿಕೆ ಮತ್ತು ವಾಣಿಜ್ಯ 4, ಕೃಷಿ 2, ಸಾರಿಗೆ 2, ವಸತಿ 2 ಸೇರಿ ಇತರೆ 5 ಅರ್ಜಿಗಳು ಬಾಕಿ ಇವೆ.
ಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್ ಉಪಸ್ಥಿತರಿದ್ದರು.