SUDDIKSHANA KANNADA NEWS/ DAVANAGERE/ DATE:02-04-2025
ದಾವಣಗೆರೆ: ಯುವಜನರು ಸರ್ಕಾರಿ ಉದ್ಯೋಗಗಳನ್ನು ಮಾತ್ರವೇ ಅನುಸರಿಸುವ ಬದಲು, ತೃಪ್ತಿ ನೀಡುವ ಆಯ್ಕೆಯ ನಿರ್ದಿಷ್ಟ ಕ್ಷೇತ್ರದಲ್ಲಿ ಕೌಶಲಗಳನ್ನು ಬೆಳೆಸಿಕೊಂಡು ವೃತ್ತಿಜೀವನದಲ್ಲಿ ಭವಿಷ್ಯ ಕಂಡುಕೊಳ್ಳುವುದು ಸೂಕ್ತ ಎಂದು ಕರ್ನಾಟಕದ ರಾಜ್ಯಪಾಲರಾದ ಥಾವರ್ಚಂದ್ ಗೆಹಲೋಟ್ ಹೇಳಿದರು.
ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಬುಧವಾರ ನಡೆದ 12ನೇ ಘಟಿಕೋತ್ಸವ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು, ಸಾರ್ವಜನಿಕ ವಲಯದಲ್ಲಿ ಉದ್ಯೋಗಾಕಾಂಕ್ಷಿ ಯುವಜನರ ಸಂಖ್ಯೆ ದೊಡ್ಡದಾಗಿದೆ. ಎಲ್ಲರಿಗೂ ಉದ್ಯೋಗ ಒದಗಿಸುವುದು ಬಹುದೊಡ್ಡ ಸವಾಲಾಗಿದೆ. ಜನಸಂಖ್ಯೆಗೆ ತಕ್ಕ ಉದ್ಯೋಗ ಸೃಜನೆಯೂ ಕಷ್ಟಕರವಾಗಿದೆ ಎಂದರು.
ಸರ್ಕಾರದ ಕೆಲಸವೊಂದೇ ಎಲ್ಲರ ಭವಿಷ್ಯವನ್ನು ರೂಪಿಸುವುದಿಲ್ಲ. ಜಗತ್ತು ದೊಡ್ಡದಾಗಿದ್ದು ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಮತ್ತು ಕೌಶಲ್ಯಗಳನ್ನು ಬಳಸಿಕೊಂಡು ಜೀವನ ರೂಪಿಸುವ, ವೃತ್ತಿ ಬದುಕಿನಲ್ಲಿ ತೃಪ್ತಿ ನೀಡುವ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪರಿಸರ ನಾಶದಿಂದ ಜಾಗತಿಕವಾಗಿ ತಾಪಮಾನ ಏರುತ್ತಿದೆ. ಇದು ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಯುವಜನರು ಸಮುದಾಯದ ಸಹಭಾಗಿತ್ವದಲ್ಲಿ ಸಮಸ್ಯೆಯ ಮೂಲವನ್ನು ಅರಿತು ಪರಿಹಾರಕ್ಕೆ ಶ್ರಮಿಸಬೇಕು. ಭವಿಷ್ಯದ ಪೀಳಿಗೆಗೆ ಉತ್ತಮ ವಾತಾವರಣ ನಿರ್ಮಿಸಲು ಆದ್ಯತೆ ನೀಡಬೇಕು ಎಂದು ರಾಜ್ಯಪಾಲರು ಸಲಹೆ ನೀಡಿದರು.
ಡಿಜಿಟಲ್ ಯುಗದಲ್ಲಿ ದೈಹಿಕ ಶ್ರಮ ಕಡಿಮೆಯಾಗುತ್ತಿದೆ. ಮಾನಸಿಕ ಒತ್ತಡ ನಿವಾರಿಸಿ ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ವ್ಯಾಯಾಮವು ಮಹತ್ವದ ಪಾತ್ರವಹಿಸುತ್ತದೆ. ಯೋಗವು ಉತ್ತಮ ಪರಿಹಾರ ಮಾರ್ಗವಾಗಿದ್ದು, ನಿತ್ಯವೂ ಅಭ್ಯಾಸ ಮಾಡುವುದನ್ನು ರೂಢಿಸಿಕೊಳ್ಳಬೇಕು. ಶೈಕ್ಷಣಿಕ ಉನ್ನತಿಯ ಜೊತೆಗೆ ಗುರು ಹಿರಿಯರು, ತಂದೆ-ತಾಯಿಯರನ್ನು ಗೌರವಿಸಬೇಕು. ಓದು ಮತ್ತು ಅನುಭವದ ಮೂಲಕ ತಮ್ಮದೇ ರೀತಿಯಲ್ಲಿ ಭವಿಷ್ಯವನ್ನು ಕಟ್ಟಿಕೊಳ್ಳಬೇಕು ಎಂದರು.
ಬೇರೆಯವರ ನಿರೀಕ್ಷೆ, ಸಾಧನೆಯನ್ನು ಅನುಕರಣೆ ಮಾಡದೇ ನಿಮ್ಮದೇ ಸಾಮರ್ಥ್ಯದ ಮೂಲಕ ಇತರರಿಗೆ ಮಾದರಿಯಾಗಬೇಕು. ಹಿರಿಯರ ಅನುಭವ, ಸಲಹೆಗಳಿಗೆ ಗೌರವ ನೀಡಬೇಕು. ಸಮಸ್ಯೆಗಳಿಗೆ ಪ್ರತಿರೋಧವೇ ಉತ್ತರವಲ್ಲ, ಪರಿಹಾರದ ಹಾದಿಯನ್ನು ಕಂಡುಕೊಳ್ಳುವುದು ಜಾಣತನ. ಅಂಥ ದಾರಿಯನ್ನು ಹುಡುಕುವತ್ತ ಮುನ್ನಡೆಯಬೇಕು. ಅತ್ಯುತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ರಾಜ್ಯಪಾಲರು ತಿಳಿಸಿದರು.
ವಿಶ್ವವಿದ್ಯಾಲಯದ 133 ಸಮರ್ಪಿತ ಅಧ್ಯಾಪಕರು ಅಧ್ಯಯನ, ಅಧ್ಯಾಪನ, ಸಂಶೋಧನೆ ಮತ್ತು ಸಮುದಾಯ ಅಭಿವೃದ್ಧಿ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಗಮನಾರ್ಹ ಸಂಶೋಧನೆಯ ಫಲಿತಾಂಶವು ಗಮನಾರ್ಹವಾಗಿದೆ. ಎನ್ಐಆರ್ಎಫ್ ರ್ಯಾಂಕಿಂಗ್ನಲ್ಲಿ 51ರಿಂದ 100ರ ಶ್ರೇಯಾಂಕದಲ್ಲಿ ಸ್ಥಾನ ಪಡೆದಿದೆ. ವಿವಿಧ ವಿಭಾಗಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್ಗಳನ್ನು ನೀಡುತ್ತಿರುವ ವಿಶ್ವವಿದ್ಯಾಲಯವು ಇತ್ತೀಚೆಗೆ ಎಂಸಿಎ ಕೋರ್ಸ್ ಆರಂಭಿಸಿದೆ. ಪರೀಕ್ಷೆ ನಂತರ ಕೇವಲ ನಾಲ್ಕು ಗಂಟೆಯಲ್ಲಿ ಫಲಿತಾಂಶ ಪ್ರಕಟಿಸುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದ್ದು ವಿಶೇಷವಾಗಿದೆ ಎಂದರು.
ಇದಲ್ಲದೆ, ಕನ್ನಡ ಮತ್ತು ಇಂಗ್ಲಿಷ್ ಪಠ್ಯಕ್ರಮಗಳಿಗೆ ಪಠ್ಯಪುಸ್ತಕಗಳ ಪ್ರಕಟಣೆ ಸೇರಿದಂತೆ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) 2020 ಮತ್ತು ರಾಜ್ಯ ಶಿಕ್ಷಣ ನೀತಿ 2024 ರ ವಿಶ್ವವಿದ್ಯಾಲಯದ ಪೂರ್ವಭಾವಿ ಅನುಷ್ಠಾನಗೊಳಿಸಿದೆ. ಶಿಕ್ಷಣ ಮಾತ್ರವಲ್ಲದೆ, ಕ್ರೀಡೆ, ಪಠ್ಯೇತರ ಕಾರ್ಯ ಚಟುವಟಿಕೆ, ಸಾಮಾಜಿಕ ಸೇವಾ ಕಾರ್ಯಗಳಲ್ಲಿಯೂ ವಿಶ್ವವಿದ್ಯಾನಿಲಯದ ಮುಂಚೂಣಿಯಲ್ಲಿದೆ. ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಪಡೆದಿದ್ದು ಹೆಮ್ಮೆಯ ಸಂಗತಿ ಎಂದರು.
ದಾವಣಗೆರೆ ವಿಶ್ವವಿದ್ಯಾನಿಲಯದ ದೃಶ್ಯಕಲಾ ಮಹಾವಿದ್ಯಾಲಯವು 60ನೇ ವರ್ಷದ ಆಚರಣೆಯ ಸಂಭ್ರಮದಲ್ಲಿದೆ. ಅದರ ಸಾಧನೆ ಇನ್ನೂ ಎತ್ತರಕ್ಕೇರಲಿ, ಕಾಲೇಜಿನ ವಿದ್ಯಾರ್ಥಿಗಳು ಜಾಗತಿಕ ಮಟ್ಟದಲ್ಲಿ ವಿಶ್ವವಿದ್ಯಾನಿಲಯದ ಕುಡಿಗಳಾಗಿ
ಬೆಳಗಲಿ ಎಂದರು ಹಾರೈಸಿದರು.
ಪರೀಕ್ಷಾಂಗ ಕುಲಸಚಿವ ಪ್ರೊ.ಸಿ.ಕೆ.ರಮೇಶ್, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಕುಲಪತಿ ಪ್ರೊ.ಬಿ.ಡಿ.ಕುಂಬಾರ, ವಿಜ್ಞಾನಿ ಪ್ರೊ.ಪಿ.ಬಲರಾಮ್, ಕುಲಸಚಿವ ಪ್ರೊ.ಆರ್.ಶಶಿಧರ ಮತ್ತಿತರರು ಹಾಜರಿದ್ದರು.