SUDDIKSHANA KANNADA NEWS/ DAVANAGERE/ DATE:29-01-2025
ದಾವಣಗೆರೆ: ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯಲ್ಲಿ 22 ಕೆರೆಗಳ ಏತ ನೀರಾವರಿ ಯೋಜನೆ ಹೊಸ ಪೈಪ್ ಲೈನ್ ಕಾಮಗಾರಿ ಮತ್ತು ಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಭದ್ರಾ ಕಾಲುವೆಗಳ ಆಧುನೀಕರಣಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಶಾಸಕರಾದ ಕೆ.ಎಸ್.ಬಸವಂತಪ್ಪ, ಶಿವಗಂಗಾ ವಿ. ಬಸವರಾಜ್ ಮನವಿ ಮಾಡಿದರು.
ಬೆಂಗಳೂರಿನ ನೀರಾವರಿ ನಿಗಮದ ಕಚೇರಿ ಸಭಾಂಗಣದಲ್ಲಿ ಬುಧವಾರ ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಶಾಸಕ ಕೆ. ಎಸ್. ಬಸವಂತಪ್ಪ, ತುಂಗಭದ್ರಾ ನದಿಯಿಂದ 22 ಕೆರೆಗಳ ಏತ ನೀರಾವರಿ ಯೋಜನೆಯ ಮೂಲಕ ನಮ್ಮ ಕ್ಷೇತ್ರದ ಭಾಗಗಳ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಗೊಳಿಸಲಾಗಿತ್ತು. ಎಲ್ ಅಂಡ್ ಟಿ ಕಂಪನಿ ಯೋಜನೆಯ ಕಾಮಗಾರಿ ನಡೆಸಿತ್ತು ಎಂದು ತಿಳಿಸಿದರು.
ಕಳಪೆ ಕಾಮಗಾರಿಯಿಂದ ಇವತ್ತಿನವರೆಗೂ ಆ ಕೆರೆಗಳಿಗೆ ನೀರು ತುಂಬಿಲ್ಲ. ಹೊಸ ಕಾಮಗಾರಿ ಕೈಗೊಂಡು ಕೆರೆಗಳಿಗೆ ನೀರು ತುಂಬಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ನೇತೃತ್ವದಲ್ಲಿ ನೀರಾವರಿ ನಿಗಮ ಮಂಡಳಿಯಲ್ಲಿ ಕೆರೆಗಳ ಅಭಿವೃದ್ಧಿಗೆ 22 ಕೋಟಿ ರೂ. ಮೀಸಲಿಟ್ಟಿದ್ದು, ಇನ್ಬು ಹೆಚ್ಚುವರಿಯಾಗಿ 50 ಕೋಟಿ ಬಿಡುಗಡೆ ಮಾಡುವಂತೆ ನಿಮಗೆ ಮನವಿ ಸಲ್ಲಿಸಲಾಗಿತ್ತು ಎಂದು ಉಪಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿದರು.
ಮಾಯಕೊಂಡ ಕ್ಷೇತ್ರದಲ್ಲಿ ಭದ್ರಾ ಅಚ್ಚುಕಟ್ಟು ಪ್ರದೇಶ ಹೆಚ್ಚು ವ್ಯಾಪ್ತಿ ಹೊಂದಿದ್ದು, ಭದ್ರಾ ಕಾಲುವೆಗಳು, ಸೇತುವೆಗಳನ್ನು ನಿರ್ಮಾಣ ಮಾಡಿ ಸುಮಾರು 50 ವರ್ಷ ಕಳೆದಿದ್ಧು, ಭದ್ರಾ ಕಾಲುವೆಗಳು, ಸೇತುವೆಗಳು ಶಿಥಿಲಗೊಂಡು ಕಿತ್ತು ಹೋಗಿವೆ. ಇದರಿಂದ ಕಾಲುವೆಗಳಿಗೆ ನೀರು ಬಿಡುಗಡೆ ಮಾಡಿದಾಗ ನೀರು ರೈತರ ಗದ್ದೆಗಳಿಗೆ ನುಗ್ಗಿ ರೈತರು ಕಂಗಾಲು ಆಗುತ್ತಿದ್ದಾರೆ. ಅಲ್ಲದೇ ಲಕ್ಷಾಂತರ ರುಪಾಯಿ ನಷ್ಟ ಅನುಭವಿಸುತ್ತಿದ್ದಾರೆ. ಕೂಡಲೇ ಅನುದಾನ ಬಿಡುಗಡೆ ಮಾಡಿ ಭದ್ರಾ ಕಾಲುವೆಗಳು ಮತ್ತು ಸೇತುವೆಗಳನ್ನು ಆಧುನೀಕರಣ ಮಾಡುವ ಮೂಲಕ ರೈತರ ನೆರವಿಗೆ ಧಾವಿಸಬೇಕೆಂದು ಮನವಿ ಮಾಡಿದರು.
ಶಾಸಕ ಕೆ.ಎಸ್.ಬಸವಂತಪ್ಪ ಅವರ ಮನವಿಗೆ ಸ್ಪಂದಿಸಿದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಈ ಬಗ್ಗೆ ಕ್ರಮ ತೆಗೆದುಕೊಂಡು ಕೆರೆಗಳ ಅಭಿವೃದ್ಧಿ ಮತ್ತು ಭದ್ರಾ ಕಾಲುವೆಗಳ ಆಧುನೀಕರಣಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು.