SUDDIKSHANA KANNADA NEWS/ DAVANAGERE/ DATE:19-08-2023
ದಾವಣಗೆರೆ: ಜಿಲ್ಲೆಯ ಎಲ್ಲಾ ಪಡಿತರ ಚೀಟಿ ಫಲಾನುಭವಿಗಳ (Ration Card Status) ಇ-ಕೆವೈಸಿ ಸಂಗ್ರಹಣೆಯನ್ನು ನ್ಯಾಯಬೆಲೆ ಅಂಗಡಿಗಳ ಮಟ್ಟದಲ್ಲಿ ಆಗಸ್ಟ್ 31 ರೊಳಗೆ ಪೂರ್ಣಗೊಳಿಸಲು ತಿಳಿಸಲಾಗಿದೆ.
ಜಿಲ್ಲೆಯಲ್ಲಿ ಒಟ್ಟು ಅಂತ್ಯೋದಯ 10696, ಆದ್ಯತಾ ಪಡಿತರ ಚೀಟಿಗಳು 51509, ಆದ್ಯತೇತರ ಪಡಿತರ ಚೀಟಿಗಳು 74,882, ಒಟ್ಟು 137087 ಪಡಿತರ ಚೀಟಿ ಫಲಾನುಭವಿಗಳ ಇ-ಕೆವೈಸಿ (Ration Card Status) ಬಾಕಿ ಇದ್ದು, ಅಂತಹ ಫಲಾನುಭವಿಗಳ ಪಟ್ಟಿಯನ್ನು ಪ್ರತಿ ನ್ಯಾಯಬೆಲೆ ಅಂಗಡಿಗಳ ಮುಂದೆ ಪ್ರಕಟಿಸಲಾಗುತ್ತದೆ. ಸಂಬಂಧಿಸಿದ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಫಲಾನುಭವಿಗಳು ಆಗಸ್ಟ್ 31 ರೊಳಗಾಗಿ ಇ-ಕೆವೈಸಿ ಪೂರ್ಣಗೊಳಿಸಿಕೊಳ್ಳಬೇಕು.

ಈ ಸುದ್ದಿಯನ್ನೂ ಓದಿ:
Santhebennur: ಸಂತೇಬೆನ್ನೂರಿನಲ್ಲಿ ಪತ್ನಿ ಕೊಂದ ತಂದೆ ವಿರುದ್ಧ ಪುತ್ರ ದೂರು… ಹತ್ಯೆಗೈದು ನೇರ ಠಾಣೆಗೆ ಹೋದ ಹಂತಕ..!
ವಿನಾಯಿತಿ ನೀಡಲಾಗಿರುವ ಪಡಿತರ ಚೀಟಿಯಲ್ಲಿ ಬೆರಳಚ್ಚು ಪಡೆಯಲು ಆಗದೆ ಇರುವ ಪಡಿತರ ಫಲಾನುಭವಿಗಳನ್ನು ಅಮಾನತುಪಡಿಸದೆ, ಪುನಃ ಬೆರಳಚ್ಚು ಪಡೆಯಲು, ಬೆರಳಚ್ಚು ಬಾರದೆ ಇದ್ದಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ಐರಿಸ್ ತಂತ್ರಾಂಶವನ್ನು ಬಳಸಿ ಫಲಾನುಭವಿಗಳ ಇ-ಕೆವೈಸಿ ಪೂರ್ಣಗೊಳಿಸಲಾಗುವುದು.
ಪಡಿತರ ಚೀಟಿ ಫಲಾನುಭವಿಗಳ ಇ-ಕೆವೈಸಿ ಸಂಗ್ರಹಣೆಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿಕೊಳ್ಳದೆ ಇರುವಂತಹ ಪಡಿತರ ಚೀಟಿಗಳ ಸದಸ್ಯರುಗಳನ್ನು ಪಡಿತರ ಚೀಟಿಯಿಂದ ಅಮಾನತುಗೊಳಿಸುವ ಮೂಲಕ ಆಹಾರಧಾನ್ಯ ಮತ್ತು ಡಿಬಿಟಿ ನಗದು ಸೌಲಭ್ಯವನ್ನು ಸೆಪ್ಟೆಂಬರ್ ಮಾಹೆಯಿಂದ ಸ್ಥಗಿತಗೊಳಿಸಲಾಗುವುದು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಪಡಿತರ ಚೀಟಿದಾರರು ತಮ್ಮ ಕುಟುಂಬದ ಯಾರಾದರೂ ಒಬ್ಬ ಸದಸ್ಯರ ಜಾತಿ ಪ್ರಮಾಣ ಪತ್ರವನ್ನು ನ್ಯಾಯಬೆಲೆ ಅಂಗಡಿಯಲ್ಲಿ ನೀಡಿ ನಿಖರವಾದ ವಿವರ ದಾಖಲಿಸಿಕೊಳ್ಳಲು ಜಿಲ್ಲಾ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕ ಶಿದ್ರಾಮ ಮಾರಿಹಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.