ದಾವಣಗೆರೆ: ಖಾದ್ಯ ತೈಲಗಳನ್ನು ಆಮದು ಮಾಡಿಕೊಳ್ಳುವಲ್ಲಿ ದೇಶದ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ದೇಶಿಯ ಎಣ್ಣೆಕಾಳುಗಳ ಉತ್ಪಾದನೆಯನ್ನು ಹೆಚ್ಚಿಸುವ ಹಾಗೂ ರೈತರ ಆದಾಯವನ್ನು ಸುಧಾರಿಸಲು ಭಾರತ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಕೇಂದ್ರ ಪುರಷ್ಕೃತ ಕೃಷಿಯೋನ್ನತಿ ಯೋಜನೆಯಡಿ ‘’ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ – ಎಣ್ಣೆಕಾಳು’’ (National Mission on Edible Oil – Oilseeds (NMEO-OS) ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತಿದೆ.
ಎಣ್ಣೆಕಾಳು ಬೆಳೆಗಾರರು ಮತ್ತು ಮೌಲ್ಯ ಸರಪಳಿ ಪಾಲುದಾರರನ್ನು (Value Chain Partners) ಸಂಸ್ಕರಣಾದಾರರೊಂದಿಗೆ ಸಂಪರ್ಕಿಸಲು ಮತ್ತು ಅವರಿಗೆ ಮಾರುಕಟ್ಟೆ ಕಲ್ಪಿಸುವುದರೊಂದಿಗೆ ಉತ್ತಮ ಲಾಭವನ್ನು ಪಡೆಯುವಂತೆ ಖಾತ್ರಿಪಡಿಸುವುದು ಯೋಜನೆಯ ಗುರಿಗಳಲ್ಲಿ ಒಂದಾಗಿದೆ.
ರೂ. 9.99 ಲಕ್ಷದವರೆಗೆ ಸಿಗಲಿದೆ ಅನುದಾನ:
ಸದರಿ ಯೋಜನೆಯಡಿ ಸ್ಥಳೀಯವಾಗಿ ಉದ್ಯೋಗಾವಕಾಶ ಕಲ್ಪಿಸಲು ಹಾಗೂ ಶುದ್ಧ ಖಾದ್ಯ ತೈಲ ಉಪಯೋಗಿಸಲು ಅನುಕೂಲವಾಗುವಂತೆ ಪ್ರೇರೇಪಿಸಲು ಸೂಕ್ತವಾಗುವಂತೆ ಹಾಗೂ ಮೌಲ್ಯ ಸರಪಳಿಯನ್ನು ಉತ್ತೇಜಿಸಲು, ಸಂಸ್ಕರಣಾ ಘಟಕಗಳಿಗೆ ಅವಶ್ಯವಿರುವ ಯಂತ್ರೋಪಕರಣಗಳನ್ನು ಪಡೆಯಲು/ಪ್ರಾಥಮಿಕ ಮತ್ತು ದ್ವಿತೀಯ ಎಣ್ಣೆಕಾಳು ಕೊಯ್ಲೋತ್ತರ ಮೂಲ ಸೌಕರ್ಯ ಸೌಲಭ್ಯ ಪಡೆಯಲು ಗರಿಷ್ಠ ಯೋಜನಾ ವರದಿಯ ಶೇ.33 ರಷ್ಟು ಅಥವಾ ರೂ.9.99 ಲಕ್ಷಕ್ಕೆ ಮೀರದಂತೆ ಅನುದಾನವನ್ನು ನೀಡಲಾಗುವುದು. ಸದರಿ ಯೋಜನೆಯ ಘಟಕದಡಿ ಕಟ್ಟಡ ವೆಚ್ಚ ಮತ್ತು ಭೂಮಿ ಬಾಡಿಗೆಯನ್ನು ಪರಿಗಣಿಸಲಾಗುವುದಿಲ್ಲ.
ಅರ್ಜಿ ಸಲ್ಲಿಸಲು ಜುಲೈ 4 ಕೊನೆಯ ದಿನ:
ಸದರಿ ಯೋಜನೆಯಡಿ ಸೌಲಭ್ಯ ಪಡೆಯಲು ಸರ್ಕಾರ / ಸರ್ಕಾರೇತರ ಸಂಸ್ಥೆಗಳು, FPOs ಗಳು ಜುಲೈ04 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಯೋಜನೆಯ ಮಾರ್ಗಸೂಚಿಯನ್ವಯ ಜಿಲ್ಲಾ ಕಾರ್ಯಕಾರಿ ಸಮಿತಿಯಲ್ಲಿ ಫಲಾನುಭವಿ ಆಯ್ಕೆ ನಡೆಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಜಂಟಿ ಕೃಷಿ ನಿರ್ದೇಶಕರ ಕಛೇರಿ, ಉಪ ಕೃಷಿ ನಿರ್ದೇಶಕರ ಕಛೇರಿ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿಗಳನ್ನು ಸಂಪರ್ಕಿಸುವಂತೆ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.





Leave a comment