ಬೆಂಗಳೂರು/ಕೇರಳ: ಸ್ಯಾಂಡಲ್‌ವುಡ್‌ನಿಂದ ಪ್ಯಾನ್ ಇಂಡಿಯಾ ಮಟ್ಟಕ್ಕೆ ಬೆಳೆದಿರುವ ನಟಿ ರಶ್ಮಿಕಾ ಮಂದಣ್ಣ, ತಮ್ಮ ಮುಂಬರುವ ‘ಮೈಸ’ (Mysaa) ಸಿನಿಮಾದ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಚಿತ್ರೀಕರಣದ ವೇಳೆ ತಮಗಾದ ಭೀಕರ ಹಾಗೂ ಸವಾಲಿನ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ರವೀಂದ್ರ ಪುಲ್ಲೆ ನಿರ್ದೇಶನದ ‘ಮೈಸ’ ಸಿನಿಮಾದಲ್ಲಿ ರಶ್ಮಿಕಾ ಗೋಂಡ್ ಬುಡಕಟ್ಟು ಸಮುದಾಯದ ಮಹಿಳೆಯಾಗಿ ಅತ್ಯಂತ ಸಾಹಸಸಿಂಹ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೇರಳದ ದಟ್ಟ ಅರಣ್ಯ ಪ್ರದೇಶದಲ್ಲಿ ಚಿತ್ರೀಕರಣ ನಡೆಯುತ್ತಿದ್ದಾಗ ನಿರ್ದೇಶಕರು ನೀಡಿದ ಸಾಹಸ ದೃಶ್ಯಗಳು ತಮ್ಮ ಜೀವಕ್ಕೆ ಕಂಟಕವಾಗುವಂತಿದ್ದವು ಎಂದು ರಶ್ಮಿಕಾ ಹೇಳಿದ್ದಾರೆ.
90 ಅಡಿ ಎತ್ತರದ ಅತಿರಪಳ್ಳಿ ಜಲಪಾತದಿಂದ ಜಂಪ್!
ಚಿತ್ರೀಕರಣದ ವೇಳೆ ನಿರ್ದೇಶಕರು ರಶ್ಮಿಕಾ ಅವರಿಗೆ 90 ಅಡಿ ಎತ್ತರದ ಅತಿರಪಳ್ಳಿ ಜಲಪಾತದಿಂದ ಧುಮುಕುವಂತೆ ಸೂಚಿಸಿದ್ದರು. ಎತ್ತರವೆಂದರೆ ತೀವ್ರ ಭಯ ಪಡುವ ರಶ್ಮಿಕಾ, “ದಿನವಿಡೀ ಭಯದಿಂದ ನಡುಗುತ್ತಿದ್ದೆ. ಅಷ್ಟೇ ಅಲ್ಲದೆ, ಸತತ 8 ಗಂಟೆಗಳ ಕಾಲ ನೀರಿನ ಅಡಿಯಲ್ಲೇ ಇರಬೇಕಾಯಿತು. ನಾನು ಮೀನೇನು ಅಲ್ಲವಲ್ಲ!” ಎಂದು ಹಾಸ್ಯಮಿಶ್ರಿತವಾಗಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಬೆಟ್ಟದ ತುದಿಯಲ್ಲಿ ಓಟ, ಹಿಪ್ ಟೆಂಡನ್ ಕಟ್!
ಅರಣ್ಯದ ಕಡಿದಾದ ಬೆಟ್ಟದ ತುದಿಯಲ್ಲಿ ಪೂರ್ಣ ವೇಗದಲ್ಲಿ ಓಡುವಂತೆ ನಿರ್ದೇಶಕರು ಹೇಳಿದಾಗ, ಸಣ್ಣ ತಪ್ಪಡಿಯಾದರೂ ದೊಡ್ಡ ಅಪಾಯ ಕಾದಿತ್ತು. ಅದಾಗ್ಯೂ ನಿರ್ದೇಶಕರ ಹಠಕ್ಕೆ ಮಣಿದು ಅಭಿನಯಿಸಿದ್ದಾಗಿ ರಶ್ಮಿಕಾ ತಿಳಿಸಿದ್ದಾರೆ. ಇದಲ್ಲದೆ, ನೃತ್ಯ ದೃಶ್ಯವೊಂದರ ಚಿತ್ರೀಕರಣದ ವೇಳೆ ರಶ್ಮಿಕಾ ಅವರ ಕಾಲಿನ ‘ಹಿಪ್ ಟೆಂಡನ್’ ಶರೀರದಿಂದ ಬೇರ್ಪಟ್ಟಿದ್ದು, ಫುಟ್‌ಬಾಲ್ ಆಟಗಾರರಿಗೆ ಆಗುವಂತಹ ಗಂಭೀರ ಗಾಯಕ್ಕೆ ತುತ್ತಾಗಿದ್ದಾರೆ.
ರವೀಂದ್ರ ಪುಲ್ಲೆ ನಿರ್ದೇಶನದ, ಸಮುದ್ರಖನಿ, ಈಶ್ವರಿ ರಾವ್ ಮುಖ್ಯಭೂಮಿಕೆಯಲ್ಲಿರುವ ಈ ಬಹುನಿರೀಕ್ಷಿತ ‘ಮೈಸ’ ಸಿನಿಮಾ ನವೆಂಬರ್ 27, 2026 ರಂದು ವಿಶ್ವದಾದ್ಯಂತ ತೆರೆಕಾಣಲಿದೆ.





Leave a comment