ಆತ್ಮೀಯ ಓದುಗರೆ,
ಬ್ರಿಟೀಷರ ವಿರುದ್ಧದ ಸಮರದಲ್ಲಿ ಐತಿಹಾಸಿಕ ವಿಜಯ ಸಾಧಿಸಿದ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮರನ್ನು ಮರೆಯಲು ಸಾಧ್ಯವೇ ಇಲ್ಲ. ಅವರ ಗೌರವಾರ್ಥ ಅಂಚೆ ಚೀಟಿ ಬಿಡುಗಡೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಮಾತ್ರವಲ್ಲ, ಅಕ್ಬೋಬರ್ 23ರಂದು ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟೀಷರ ವಿರುದ್ಧ ಸಮರ ಸಾರಿ ಮೊದಲ ಗೆಲುವು ಸಾಧಿಸಿದ ದಿನ. ಈ ಐತಿಹಾಸಿಕ ವಿಜಯದ ಕ್ಷಣಕ್ಕೆ 200 ವರ್ಷ ಆಗಲಿದೆ. ಈ ಹಿನ್ನೆಲೆಯಲ್ಲಿ ವಿಶೇಷ ಲೇಖನ ಪ್ರಕಟಿಸಲಾಗುತ್ತಿದೆ.
– ಸುದ್ದಿಕ್ಷಣ.ಕಾಮ್ ಡಿಜಿಟಲ್ ಮೀಡಿಯಾ ಟೀಂ
ಎಂದೂ ಮರೆಯದ ಕನ್ನಡತಿ ರಾಣಿಚನ್ನಮ್ಮ:
ಭಾರತೀಯರ ಮೇಲೆ ಬ್ರಿಟೀಷರು ಹಲವು ಕಾನೂನುಗಳಿಂದ ಕಿರುಕುಳ ನೀಡಿ ದೇಶಿಯ ಸಂಸ್ಥಾನಗಳನ್ನು ತಮ್ಮ ಆಡಳಿತಕ್ಕೆ ವಶಪಡಿಸಿಕೊಳ್ಳುವ ಸಂದರ್ಭದಲ್ಲಿಅವರ ಕಾನೂನುಗಳನ್ನು, ದಬ್ಬಾಳಿಕೆಯನ್ನು ಪ್ರತಿಭಟಿಸಿದ ದೇಶದ ಪ್ರಪ್ರಥಮ ಬಂಡಾಯಗಾರ್ತಿ, ಕರ್ನಾಟಕದ ವೀರರಾಣಿ ಕಿತ್ತೂರು ಚೆನ್ನಮ್ಮ. ಸ್ವಾತಂತ್ರ್ಯ, ರಕ್ಷಣೆ, ನಾಡಿನ ಹಿತಕ್ಕಾಗಿ ಹೋರಾಡಿದ ಈ ಕನ್ನಡತಿಯ ಧೈರ್ಯ, ಸಾಹಸ ಸಮಸ್ತ ಕನ್ನಡಿಗರಿಗೆ ಅಭಿಮಾನದ ಸಂಗತಿ. ಎರಡು ನೂರು ವರ್ಷಗಳ ಹಿಂದೆ 1824ರಲ್ಲಿ ತನ್ನ ಸಾಮ್ರಾಜ್ಯದ ರಕ್ಷಣೆಗಾಗಿ ಆಂಗ್ಲರ ವಿರುದ್ಧ ಯುದ್ಧ ಮಾಡಿ ಜಯವನ್ನು ಸಾಧಿಸಿದ್ದು ಸ್ಮರಿಸಿಕೊಳ್ಳುವ ಸಂಗತಿ.
ಇಂತಹ ಹೋರಾಟಗಾರ್ತಿಯ ಸಂಸ್ಥಾನಕ್ಕೆ, ಅರಸೊತ್ತಿಗೆಗೆ ಸುದೀರ್ಘಇತಿಹಾಸವಿದೆ. ಹಿರೇಮಲ್ಲಶೆಟ್ಟಿ ಮತ್ತು ಚಿಕ್ಕಮಲ್ಲಶೆಟ್ಟಿ ಕ್ರಿ.ಶ. 1585ರಲ್ಲಿ ಕಿತ್ತೂರು ದೇಸಗತಿಯ ಅರಸು ಕ್ರಿ.ಶ. 1772ರಿಂದ 1816 ರವರೆಗೆ ಕಿತ್ತೂರು ಸಂಸ್ಥಾನ ಆಳಿದ ಮಲ್ಲಸರ್ಜ ದೇಸಾಯಿ ಪ್ರಮುಖ. ಈ ಅರಸನಿಗೆ ಇಬ್ಬರು ಪತ್ನಿಯರು ರಾಣಿ ರುದ್ರವ್ವ ಮತ್ತು ರಾಣಿ ಚನ್ನಮ್ಮ.
ಕಿತ್ತೂರುರಾಣಿ ಚನ್ನಮ್ಮನ ಹಿನ್ನಲೆ:
ಬ್ರಿಟೀಷರಿಗೆ ಸಿಂಹಸ್ವಪ್ನವಾಗಿದ್ದ, ಎದೆಗಾರ್ತಿ, ಹೋರಾಟಗಾರ್ತಿಕಿತ್ತೂರು ರಾಣಿ ಚನ್ನಮ್ಮ ಅಕ್ಟೋಬರ್-23, 1778ರಲ್ಲಿ ಬೆಳಗಾವಿ ಸಮೀಪದ ಕಾಕತೀಯ ದೇಸಾಯಿ ಮನೆತನದಲ್ಲಿ ಜನಿಸಿದಳು. ಚಿಕ್ಕ ವಯಸ್ಸಿನಿಂದಲೇ ಕುದುರೆ ಸವಾರಿ, ಕತ್ತಿವರಸೆ, ಬಿಲ್ಲುಗಾರಿಕೆತರಬೇತಿ ಮತ್ತು ಶಿಕ್ಷಣ ಪಡೆದಳು. ಕನ್ನಡ, ಉರ್ದು, ಮರಾಠಿ ಭಾಷೆಯೊಂದಿಗೆ ಇಂಗ್ಲೀಷಿನ ವ್ಯವಹಾರಿಕ ಜ್ಞಾನ ಇವರಿಗಿತ್ತು. ರಾಜಮಲ್ಲಸರ್ಜ ಅರಸನೊಂದಿಗೆ 15ನೇ ವಯಸ್ಸಿನಲ್ಲಿ ವಿವಾಹವಾದಳು. ಚೆನ್ನಮ್ಮನ ಪತಿ 1816ರಲ್ಲಿ ನಿಧನರಾದರು. ನಂತರ ಶಿವಲಿಂಗ ಸರ್ಜನಿಗೆ ಪಟ್ಟಕಟ್ಟಲಾಯಿತು.1824ರಲ್ಲಿ ಮಗನ ಮರಣ ಸಂಭವಿಸಿತು. ಕಿತ್ತೂರು ಸಂಸ್ಥಾನದ ಆಡಳಿತ ಭಾರ ನಡೆಸುವ ಹೊಣೆ ರಾಣಿ ಚನ್ನಮ್ಮನದಾಯಿತು.
ಕಿತ್ತೂರು ಸಂಸ್ಥಾನಕ್ಕೆ ಆಂಗ್ಲರ ಕೆಂಗಣ್ಣು:
ಶಿವಲಿಂಗ ಸರ್ಜನಿಗೆ ಮಕ್ಕಳಾಗಲಿಲ್ಲ. ದತ್ತು ಪುತ್ರನನ್ನಾಗಿ ಶಿವಲಿಂಗಪ್ಪನನ್ನು ಉತ್ತರಾಧಿಕಾರಿ ಮಾಡಲು ಬ್ರಿಟೀಷರು ಒಪ್ಪಲಿಲ್ಲ. ಸುದೀರ್ಘ ಪತ್ರ ವ್ಯವಹಾರ ನಡೆದರೂ ಸಮಸ್ಯೆ ನಿವಾರಣೆ ಆಗಲಿಲ್ಲ. ಆಂಗ್ಲರ ವಿರುದ್ಧ ಹೋರಾಟ ಮಾಡಲು ರಾಣಿ ಚೆನ್ನಮ್ಮ ಸಿದ್ಧತೆ ಮಾಡಿಕೊಳ್ಳುವ ಸಂಗತಿ ಅರಮನೆಯ ಒಳಗಡೆಯ ಶತೃಗಳಾದ, ಆಡಳಿತಾಧಿಕಾರಿಗಳಾದ ಮಲ್ಲಪ್ಪ ಶೆಟ್ಟಿ, ವೆಂಕಟರಾಯ ಮತ್ತಿತರು ಪ್ರತಿಯೊಂದು ಘಟನೆ, ಸಂಗತಿ, ರಹಸ್ಯ ಚಟುವಟಿಕೆಗಳ ಮಾಹಿತಿ ಬ್ರಿಟೀಷ್ ಅಧಿಕಾರಿಗಳಿಗೆ ತಿಳಿಸುತ್ತಿದ್ದರು. ಧಾರವಾಡದ ಕಲೆಕ್ಟರ್ ಆಗಿದ್ದ ಥ್ಯಾಕರೆಯ ನೇತೃತ್ವದಲ್ಲಿಆಂಗ್ಲರ ಸೈನ್ಯಕಿತ್ತೂರು ಸಂಸ್ಥಾನಕ್ಕೆ 1824 ಆಕ್ಟೋಬರ್-21ರಂದು ಮುತ್ತಿಗೆ ಹಾಕಿತು. ಎರಡು ದಿನದ ನಂತರ ದಿನಾಂಕ: 23ರಂದು ಕೋಟೆಯ ಹೆಬ್ಬಾಗಿಲನ್ನು ಫಿರಂಗಿ ಹಾರಿಸಿ ಸೈನ್ಯ ಸಂಸ್ಥಾನದೊಳಗೆ ನುಗ್ಗಲು ಯತ್ನಿಸಿತು.
ಬ್ರಿಟೀಷರ ವಿರುದ್ಧ ರಾಣಿ ಚನ್ನಮ್ಮಗೆ ಜಯ:
ರಾಣಿ ಚನ್ನಮ್ಮರ ಪರಾಕ್ರಮ, ಧೈರ್ಯ ಮತ್ತು ಹೋರಾಟದಲ್ಲಿಆಂಗ್ಲರ ವಿರುದ್ಧ ವಿಜಯ ಸಾಧಿಸಿದಳು. ‘ಕ್ಯಾಪ್ಟನ್‌ಬ್ಲಾಕ್’ ಎಂಬುವನು ಕೋಟೆಯ ಮೇಲೆ ಫಿರಂಗಿ ಹಾರಿಸುತ್ತಿದ್ದಂತೆಯೇ ರಾಣಿ ಚೆನ್ನಮ್ಮನ ಯೋಧ ಅಮಟೂರ ಬಾಳಪ್ಪ ಕೋಟೆಯ ಮೇಲಿಂದ ಹಾರಿಸಿದ ಗುಂಡು ಕಲೆಕ್ಟರ್ ಥ್ಯಾಕರೆಗೆ ಬಡಿದು, ಉರುಳಿ ಬಿದ್ದು ಮೃತಪಟ್ಟನು. ಬ್ರಿಟೀಷ್ ಸೈನ್ಯ ದಿಕ್ಕುಪಾಲಾಗಿ ಓಡಿ ಹೋಯಿತು.ಸೈನ್ಯದ ಕ್ಯಾಪ್ಟನ್ ಬ್ಲಾಕ್ ಹಾಗೂ ಇತರೆ ಅಧಿಕಾರಿಗಳು ಯುದ್ಧದಲ್ಲಿ ಮಡಿದರು. ಬ್ರಿಟೀಷ್ ಸೈನಿಕರು ಕಿತ್ತೂರಿನ ಯೋಧರಿಗೆ ಸೆರೆಸಿಕ್ಕರು, ಬ್ರಿಟೀಷ್ ಪಡೆಗಳು ಸೋತವು.
ಸೆಂಟ್‌ಜಾನ್‌ಥ್ಯಾಕ್ರೆ, ಕಲೆಕ್ಟರ್ ಮತ್ತುರಾಜಕೀಯ ಏಜೆಂಟ್ ಯುದ್ಧದಲ್ಲಿ ಮರಣ ಹೊಂದಿದರು. ಒಮದು ಸಾಮಾನ್ಯ ಸಣ್ಣ ಸಂಸ್ಥಾನದ ‘ಮಹಿಳೆ’ಯ ಸೈನ್ಯಕ್ಕೆ ಆಂಗ್ಲರ ಮಹಾನ್ ಸಾಮ್ರಾಜ್ಯದ ಸೈನ್ಯ ಸೋಲುವುದೆಂದರೇನು? ರಾಣಿ ಚೆನ್ನಮ್ಮನಿಂದ ಬ್ರಿಟಿಷರಿಗೆ ಆದ ಅವಮಾನ, ಸಾವುಗಳನ್ನು ಸವಾಲಾಗಿ ಸ್ವೀಕರಿಸಿದ ಆಂಗ್ಲರು ಕಿತ್ತೂರು ಸಂಸ್ಥಾನವನ್ನು ಬಗ್ಗು ಬಡಿಯುವ ತೀರ್ಮಾನಕ್ಕೆ ಬಂದರು.
ಆಂಗ್ಲರಿಗೆ ಸೆರೆಸಿಕ್ಕ ರಾಣಿಚನ್ನಮ್ಮ:
ರಾಣಿ ಚನ್ನಮ್ಮನ ವಿಜಯಆಂಗ್ಲರಿಗೆ ಭಾರಿ ಮುಖಭಂಗವಾಯಿತು. ದೇಶದ ಪ್ರಥಮ ಸ್ವಾತಂತ್ರ್ಯ ಸಮರಕ್ಕೆ ಕನ್ನಡದರಾಣಿಯಿಂದ ಮೊದಲ ಜಯಸಿಕ್ಕಿತು. ಈ ಸಂತಸ, ವಿಜಯೋತ್ಸವ ಬಹಳ ದಿನ ಮುಂದುವರಿಯದೇ ಒಂದೆರಡು ತಿಂಗಳಲ್ಲಿ ಬೆಳಗಾವಿಯಿಂದ ಚಾಪ್ಲಿನ್ ನೇತೃತ್ವದಲ್ಲಿ ಭಾರಿ ಸಂಖ್ಯೆಯ ಸೈನ್ಯವೊಂದು ಕಿತ್ತೂರು ಸಂಸ್ಥಾನಕ್ಕೆ ನಾಲ್ಕು ದಿಕ್ಕುಗಳಿಂದ ಮುತ್ತಿಗೆ ಹಾಕಿತು.
ಬ್ರಿಟೀಷರ ಆಧುನಿಕ ಶಸ್ತ್ರ ಹಾಗೂ ಫಿರಂಗಿಗಳ ಮುಂದೆ ನಮ್ಮ ದೇಶಿಯ ಆಯುಧಗಳು, ರಾಣಿ ಚನ್ನಮ್ಮಳ ಶಕ್ತಿ ಸಾಮರ್ಥ್ಯ ವಿಫಲವಾಯಿತು. ಈ ಎರಡನೆಯಯುದ್ಧದಲ್ಲಿ ರಾಣಿ ಚೆನ್ನಮ್ಮ ಹಾಗೂ ನಲ್ವತ್ತು ಸರದಾರರನ್ನು ಬಂಧಿಸಲಾಯಿತು. ನಂತರ ಸಂಗೊಳ್ಳಿ ರಾಯಣ್ಣ ಮುಂತಾದ ಶೂರರು ಹೋರಾಡಿದರೂ ನಾಡಿಗೆ ಸ್ವಾತಂತ್ರ್ಯ ದೊರಕಲಿಲ್ಲ.
ಕಾರಾಗೃಹದಲ್ಲಿ ಸಾವನ್ನಪ್ಪಿದ ರಾಣಿಚನ್ನಮ್ಮ:
ಕಿತ್ತೂರು ಸೈನ್ಯಕ್ಕೆ ಸೋಲುಂಟಾಯಿತು. ರಾಣಿಚನ್ನಮ್ಮ ಮತ್ತು ಸೊಸೆ ವೀರವ್ವ ಪಾರಾಗಲು ಮಾಡಿದ ಪ್ರಯತ್ನ ವಿಫಲವಾಯ್ತು. ಕಿತ್ತೂರಿನ ಹಲವಾರು ವೀರ ಯೋಧರು ಈ ಭೀಕರ ಕಾಳಗದಲ್ಲಿ ವೀರ ಮರಣವನ್ನಪ್ಪಿದರು. ಬ್ರಿಟೀಷ್ ಸರಕಾರ ಚನ್ನಮ್ಮ ಮತ್ತು ವೀರವ್ವಳನ್ನು ಬೈಲಹೊಂಗಲದ ಸೆರೆಮನೆಯಲ್ಲಿಟ್ಟು ಚಿತ್ರಹಿಂಸೆ ನೀಡಿದರು.ಕಿತ್ತೂರಿನ ಸ್ವಾತಂತ್ರ್ಯವನ್ನು ಮರಳಿ ಪಡೆಯುವ ಕನಸು ಕಾಣುತ್ತ ಸಂಗೊಳ್ಳಿ ರಾಯಣ್ಣನಂತ ವೀರ ಯೋಧರ ಜೊತೆಗೆ ಗುಪ್ತ ಸಂಪರ್ಕಇಟ್ಟುಕೊಂಡು ಹೋರಾಟದ ಸಂಚು ರೂಪಿಸುತ್ತಿದ್ದ, ಸಮಯ ಕಾಯುತ್ತಿದ್ದ ರಾಣಿಚನ್ನಮ್ಮ ಸೆರೆಮನೆಯಲ್ಲಿ ದುರ್ಬಲಳಾಗಿ, ಆರೋಗ್ಯ ಹದಗೆಟ್ಟು, ಮಾನಸಿಕವಾಗಿ ಕೊರಗುತ್ತಾ 1829 ಫೆಬ್ರವರಿ 21 ರಂದು ಸೆರೆಮನೆಯಲ್ಲಿ ನಿಧನಳಾದಳು. ರಾಣಿಗೆ 51 ವರ್ಷ ವಯಸ್ಸಾಗಿತ್ತು. ಅವರ ಪಾರ್ಥಿವ ಶರೀರದಅಂತ್ಯ ಸಂಸ್ಕಾರವು ಸಕಲ ಸೇನಾ ಮರ್ಯಾದೆಗಳೊಂದಿಗೆ ಬೈಲಹೊಂಗಲದ ಕಲ್ಮಠದಲ್ಲಿ ನಡೆಯಿತು.
ಕನ್ನಡ ನಾಡಿನಲ್ಲಿಅಜರಾಮರ ರಾಣಿಚನ್ನಮ್ಮ:
ಆಂಗ್ಲರ ದಬ್ಬಾಳಿಕೆ, ನಮ್ಮವರ ವಂಚನೆ, ಮೋಸದಿಂದ ರಾಣಿ ಚೆನ್ನಮ್ಮ ತನ್ನ ಕಿತ್ತೂರು ಸಂಸ್ಥಾನವನ್ನು ಕಳೆದುಕೊಳ್ಳಬೇಕಾಯಿತು. ಅವರ ಪರಾಕ್ರಮಎದೆಗಾರಿಕೆ, ಜನಪರ ಕಾಳಜಿಗಳು, ಸ್ವಾಭಿಮಾನ ಈ ನೆಲದಿಂದ ‘ಎರಡುನೂರು’ ವರ್ಷ ಕಳೆದರೂ ಇನ್ನು ಮರೆಯಾಗಿಲ್ಲ. ಭಾರತದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿಯಾದ ಇವರು ನಮ್ಮವರ ಸಂಚಿನಿಂದಲೇ ಸೆರೆವಾಸ ಕಾಣಬೇಕಾಯಿತು. ಅರಮನೆಯ ಬಹುಭಾಗ ನಾಶವಾಗಿದ್ದರೂಅದರ ಭವ್ಯತೆ ಇಂದಿಗೂ ಎದ್ದು ಕಾಣುತ್ತದೆ. ಆಗಿನ ಕಾಲದ ಶ್ರೀಮಂತಿಕೆ, ಕಲಾವಂತಿಕೆಗಳು ಮೂಕ ಸಾಕ್ಷಿಗಳಾಗಿವೆ. ಚೆನ್ನಮ್ಮನ ಧೀರೋದಾತ್ತವಾದ ಹೋರಾಟದಿಂದ ಕಿತ್ತೂರು ಸ್ವಾತಂತ್ರ್ಯ ಸಂಗ್ರಾಮದ ಮೊದಲ ಹೆಜ್ಜೆ ಇಟ್ಟಿತೆಂಬ ಖ್ಯಾತಿ ಪಡೆದಿದೆ. ಹಲವು ಯುದ್ಧಗಳನ್ನು ಕಂಡು ವೀರಭೂಮಿಯಾಗಿದೆ. ಕಿತ್ತೂರಿನಕಥೆ ಲಾವಣೆಯಾಗಿಕಥೆಯಾಗಿ, ಬರಹದಲ್ಲಿ ಪ್ರಚುರಗೊಂಡು ಖ್ಯಾತ ನಾಮವಾಗಿದೆ.
ವೀರರಾಣಿಚನ್ನಮ್ಮನ ಸವಿನೆನಪುಗಳು:
ರಾಣಿಚನ್ನಮ್ಮನ ನೆನಪಿಗಾಗಿ ಮಹಿಳೆಯರ ಸೈನಿಕ ಶಾಲೆ, ವಸ್ತು ಸಂಗ್ರಾಲಯ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿವೆ. ‘ಕಿತ್ತೂರು’ ಎಂಬ ಸ್ಥಳ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಮುಂತಾದ ವೀರರಕಥೆಯನ್ನು ಹೇಳಲು ಅಲ್ಲಿ ಪಾಳು ಬಿದ್ದಿರುವ ಭವ್ಯಕೋಟೆಯ ಅವಶೇಷಗಳು ಇಂದಿಗೂ ನಿಂತಿವೆ. ರಾಣಿಚನ್ನಮ್ಮನ ಪ್ರತಿಮೆಯನ್ನು ಭಾರತದ ಸಂಸತ್ತಿನ ಸಂಕೀರ್ಣದಲ್ಲಿ ಸೆಪ್ಟೆಂಬರ್ 11-2007ರಂದು ಭಾರತದ ಮೊದಲ ಮಹಿಳಾ ರಾಷ್ಟ್ರಪತಿಗಳಾದ ಪ್ರತಿಭಾ ಪಾಟೀಲ್ ಅನಾವರಣಗೊಳಿಸಿದರು. ಬೆಂಗಳೂರು, ಬೆಳಗಾವಿ, ಕಿತ್ತೂರು ಮತ್ತು ಹುಬ್ಬಳಿಯಲ್ಲಿ ರಾಣಿಚನ್ನಮ್ಮನ ಪ್ರತಿಮೆಗಳಿವೆ. ಅಕ್ಟೋಬರ್-23-1977ರಲ್ಲಿ ಭಾರತ ಸರ್ಕಾರ ಅಂಚೆ ಚೀಟಿಯಲ್ಲಿರಾಣಿ ಚನ್ನಮ್ಮನ ಚಿತ್ರ ಬಿಡುಗಡೆ ಮಾಡಿತು.1961ರಲ್ಲಿ ಕನ್ನಡದಲ್ಲಿ ಚಲನಚಿತ್ರವಾಹಿತು. ಭಾರತೀಯರೈಲ್ವೆ ಬೆಂಗಳೂರು ಮತ್ತು ಸಾಂಗ್ಲಿ ಸಂಪರ್ಕಿಸುವ ರೈಲ್ವೆಗೆ ‘ರಾಣಿಚನ್ನಮ್ಮ ಎಕ್ಸ್ ಪ್ರೆಸ್’ ಎಂದು ಹೆಸರಿಸಲಾಯಿತು. ಅವರ ಸ್ಮರಣಾರ್ಥ ಬೆಳಗಾವಿಯಲ್ಲಿ ವಿಶ್ವವಿದ್ಯಾನಿಲಯಕ್ಕೆ ‘ರಾಣಿಚನ್ನಮ್ಮ’ ಎಂದು ಹೆಸರಿಡಲಾಯಿತು. ಕಿತ್ತೂರುರಾಣಿಚನ್ನಮ್ಮ ಭಾರತದ ವೀರ ಸ್ವಾತಂತ್ರ್ಯ ಹೋರಟಗಾರ್ತಿ ಇಂದಿಗೂ ನಮ್ಮಗಳ ಹೃದಯಗಳಲ್ಲಿ ಅಜರಾಮರರಾಗಿದ್ದಾರೆ. ಅವರ ಸವಿನೆನಪು ಸದಾ ಸ್ಮರಣೀಯವಾಗಿದೆ.
ಬರಹ: ಡಾ. ಗಂಗಾಧರಯ್ಯ ಹಿರೇಮಠ, ವಿಶ್ರಾಂತ ಪ್ರಾಧ್ಯಾಪಕರು, ದಾವಣಗೆರೆ. ಮೊ: 9880093613