ಹರಿದ್ವಾರ: ಶಿಕ್ಷಣ ಸಂಸ್ಥೆಗಳಲ್ಲಿ ಮೂಲಸೌಕರ್ಯಗಳ ಕೊರತೆ ಹಾಗೂ ಸರ್ಕಾರಿ ಉದ್ಯೋಗ ನೇಮಕಾತಿಯಲ್ಲಿ ನಡೆಯುತ್ತಿರುವ ಸಾಲು ಸಾಲು ಅಕ್ರಮಗಳನ್ನು ಕೇಂದ್ರ ಸರ್ಕಾರ ತಕ್ಷಣವೇ ಸರಿಪಡಿಸದಿದ್ದರೆ ತಾವು ಮತ್ತೆ ಬೃಹತ್ ಹೋರಾಟಕ್ಕಿಳಿಯುವುದಾಗಿ ಯೋಗಗುರು ಬಾಬಾ ರಾಮ್‌ದೇವ್ ಎಚ್ಚರಿಸಿದ್ದಾರೆ.
ಹರಿದ್ವಾರದ ಪತಂಜಲಿ ಯೋಗಪೀಠದಲ್ಲಿ ಮಾತನಾಡಿದ ಅವರು, ದೇಶದ ಶಾಲೆ-ಕಾಲೇಜುಗಳಲ್ಲಿ ಶಿಕ್ಷಕರು, ಕುಡಿಯುವ ನೀರು ಹಾಗೂ ಶೌಚಾಲಯದಂತಹ ಕನಿಷ್ಠ ಸೌಲಭ್ಯಗಳಿಲ್ಲದೆ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಇನ್ನೊಂದೆಡೆ ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷಾ ಅಕ್ರಮ ಮತ್ತು ಸರ್ಕಾರಿ ಹುದ್ದೆಗಳ ನೇಮಕಾತಿ ಇಂಟರ್ವ್ಯೂಗಳಲ್ಲಿ ಶೇ. 99ರಷ್ಟು ಭ್ರಷ್ಟಾಚಾರ ಹಾಗೂ ಹಣದ ಪ್ರಭಾವವೇ ಕೆಲಸ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದರು. ಕೋಟಿಗಟ್ಟಲೆ ಲಂಚ ನೀಡಿ ಉದ್ಯೋಗ ಪಡೆಯುವ ವ್ಯವಸ್ಥೆ ಸಂವಿಧಾನಕ್ಕೆ ಹಾಗೂ ದೇಶದ ತತ್ತ್ವಗಳಿಗೆ ಮಾರಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯುವಜನತೆ ಮತ್ತು Gen Z ಪ್ರತಿಭಟನಾಕಾರರಿಗೆ ಸಲಹೆ ನೀಡಿದ ರಾಮ್‌ದೇವ್, ಹಕ್ಕುಗಳಿಗಾಗಿ ಹೋರಾಡುವಾಗ ಯಾವುದೇ ಕಾರಣಕ್ಕೂ ಹಿಂಸಾಚಾರ ಹಾಗೂ ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಮಾಡಬಾರದು. ಪ್ರತಿಭಟನೆಗಳು ಸಂವಿಧಾನಾತ್ಮಕ ಚೌಕಟ್ಟಿನಲ್ಲೇ ಇರಬೇಕು ಎಂದರು. ವ್ಯವಸ್ಥೆಯಲ್ಲಿನ ‘ಘೋಟಾಲೆ’ಗಳನ್ನು ಸರ್ಕಾರ ಶೀಘ್ರವೇ ಸರಿಪಡಿಸದಿದ್ದರೆ 2011ರ ಮಾದರಿಯಲ್ಲೇ ಮತ್ತೆ ಪ್ರತಿಭಟನೆಗೆ ಇಳಿಯಬೇಕಾಗುತ್ತದೆ ಎಂದು ತಿಳಿಸಿದರು.





Leave a comment