ಧೋಲ್‌ಪುರ (ರಾಜಸ್ಥಾನ): ರಾಜಸ್ಥಾನದ ಧೋಲ್‌ಪುರ ನಗರದ ಬಾಡಿಗೆ ಮನೆಯಲ್ಲಿ ದಂಪತಿ ಪ್ರತ್ಯೇಕ ಕೊಠಡಿಗಳಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಸೋಮವಾರ ನಡೆದಿದೆ.
ಮೃತರನ್ನು ಕರೌಲಿ ಮೂಲದ ಬಲರಾಮ್ ಮೀನಾ (37) ಹಾಗೂ ಅವರ ಪತ್ನಿ ಸರೋಜಾ (35) ಎಂದು ಗುರುತಿಸಲಾಗಿದೆ. ಬಲರಾಮ್ ಮೀನಾ ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಶಾಲೆಯಿಂದ ಬಂದ ಮಕ್ಕಳಿಗೆ ಕಾದಿತ್ತು ಆಘಾತ:
ಸೋಮವಾರ ಬೆಳಿಗ್ಗೆ ದಂಪತಿಯ 5 ವರ್ಷದ ಮಗ ಆರುಷ್ ಹಾಗೂ ಸಂಬಂಧಿಯ ಮಗು ಶಾಲೆಗೆ ಹೋಗಿದ್ದರು. ಮಧ್ಯಾಹ್ನ ಶಾಲೆಯಿಂದ ಮನೆಗೆ ಮರಳಿದಾಗ ಪೋಷಕರು ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ಮಕ್ಕಳ ಆಕ್ರಂದನ ಕೇಳಿ ಧಾವಿಸಿದ ನೆರೆಹೊರೆಯವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಡೆತ್ ನೋಟ್ ಹಾಗೂ ‘ಅಂತಿಮ್ ಜೋಹಾರ್’ ಸ್ಟೇಟಸ್:
ಘಟನಾ ಸ್ಥಳದಲ್ಲಿ ಡೈರಿ ರೂಪದಲ್ಲಿದ್ದ ಡೆತ್ ನೋಟ್ ಸಿಕ್ಕಿದ್ದು, “ನಾವು ಜೀವನದಿಂದ ಬೇಸತ್ತಿದ್ದೇವೆ” ಎಂದು ಬರೆಯಲಾಗಿದೆ. ಅಲ್ಲದೆ ಸೆಪ್ಟೆಂಬರ್ 26 ರಂದೇ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಲಾಗಿತ್ತು, ಆದರೆ ಮಕ್ಕಳನ್ನು ನೋಡಿ ನಿರ್ಧಾರ ಮುಂದೂಡಲಾಗಿತ್ತು ಎಂದು ಉಲ್ಲೇಖಿಸಲಾಗಿದೆ.
ಕೃತ್ಯ ಎಸಗುವ ಕೆಲವೇ ಸಮಯದ ಮೊದಲು (ಮಧ್ಯಾಹ್ನ 12.59 ರ ಸುಮಾರಿಗೆ) ಬಲರಾಮ್ ತಮ್ಮ ವಾಟ್ಸಾಪ್‌ನಲ್ಲಿ ದಂಪತಿಯ ಫೋಟೋಗಳೊಂದಿಗೆ “ಅಂತಿಮ್ ಜೋಹಾರ್” (ಕೊನೆಯ ನಮಸ್ಕಾರ) ಎಂದು ಸ್ಟೇಟಸ್ ಹಾಕಿದ್ದರು.
ಪೊಲೀಸರು ಹಾಗೂ ವಿಧಿವಿಜ್ಞಾನ (FSL) ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಣಕಾಸು ವ್ಯವಹಾರ ಹಾಗೂ ಇತರ ಕೋನಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.





Leave a comment