Home ಕ್ರೈಂ ನ್ಯೂಸ್ 15 ಸಾವಿರ ರೂ. ಗೌರವಧನಕ್ಕೆ ಒತ್ತಾಯಿಸಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ ವಿಚಾರ: ಪ್ರಿಯಾಂಕಾ ಗಾಂಧಿ ಭರವಸೆ ಮರೆತ ಕಾಂಗ್ರೆಸ್ ಸರ್ಕಾರ?
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

15 ಸಾವಿರ ರೂ. ಗೌರವಧನಕ್ಕೆ ಒತ್ತಾಯಿಸಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ ವಿಚಾರ: ಪ್ರಿಯಾಂಕಾ ಗಾಂಧಿ ಭರವಸೆ ಮರೆತ ಕಾಂಗ್ರೆಸ್ ಸರ್ಕಾರ?

Share
ಆಶಾ
Share

ಬೆಂಗಳೂರು: ಚುನಾವಣೆಗೂ ಮುನ್ನ ಆಶಾ ಕಾರ್ಯಕರ್ತೆಯರಿಗೆ ₹15,000 ಗೌರವಧನ ನೀಡುವುದಾಗಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಭರವಸೆ ನೀಡಿದ್ದರು. ಆದರೆ ಇಂದು ಅದೇ ಕಾರ್ಯಕರ್ತೆಯರು ನ್ಯಾಯಯುತ ಬೇಡಿಕೆಗಳಿಗಾಗಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೀದಿಗಿಳಿದು ಹೋರಾಡುತ್ತಿದ್ದಾರೆ. ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಈ ಮಹಿಳೆಯರ ನೋವನ್ನು ಕಡೆಗಣಿಸುತ್ತಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಲ್ಕು ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರಲ್ಲಿ ಕೆಲವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ತಮ್ಮ ಪುಟ್ಟ ಮಕ್ಕಳನ್ನೂ ಪ್ರತಿಭಟನಾ ಸ್ಥಳಕ್ಕೆ ಕರೆತರುವ ಅನಿವಾರ್ಯತೆಗೆ ಸಿಲುಕಿರುವ ಈ ಮಹಿಳೆಯರ ಸಂಕಷ್ಟಕ್ಕೆ ಸರ್ಕಾರದ ಬಳಿ ಪರಿಹಾರವಿಲ್ಲವೇ ಎಂದು ಅಶೋಕ್ ಪ್ರಶ್ನಿಸಿದ್ದಾರೆ. ವೇದಿಕೆಗಳಲ್ಲಿ ಮಹಿಳಾ ಸಬಲೀಕರಣದ ಭಾಷಣ, ಚುನಾವಣಾ ಪ್ರಚಾರದಲ್ಲಿ ಭರವಸೆಗಳ ಮಹಾಪೂರ ನೀಡಿ, ಅಧಿಕಾರಕ್ಕೆ ಬಂದ ಬಳಿಕ ನಿರ್ಲಕ್ಷ್ಯ ತೋರುವುದು ಕಾಂಗ್ರೆಸ್‌ನ ಮಹಿಳಾ ಪರ ಧೋರಣೆಯೇ ಎಂದು ಅವರು ಕಿಡಿಕಾರಿದ್ದಾರೆ.

ಪ್ರಿಯಾಂಕಾ ಗಾಂಧಿ ಭರವಸೆ: ಚುನಾವಣಾ ಪೂರ್ವದಲ್ಲಿ ಆಶಾ ಕಾರ್ಯಕರ್ತೆಯರಿಗೆ ₹15,000 ಗೌರವಧನ ಘೋಷಿಸಲಾಗಿದ್ದು, ಆ ಮಾತಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಉತ್ತರದಾಯಿಯಾಗಬೇಕು ಎಂದು ಆಗ್ರಹಿಸಲಾಗಿದೆ.

ಆರೋಗ್ಯ ವ್ಯವಸ್ಥೆಯ ಬೆನ್ನೆಲುಬು ಕಡೆಗಣನೆ: ಸರ್ಕಾರದ ಜಾಹೀರಾತುಗಳಿಗೆ ನೂರಾರು ಕೋಟಿ ರೂ. ಖರ್ಚು ಮಾಡುವ ಸರ್ಕಾರಕ್ಕೆ, ಆರೋಗ್ಯ ವ್ಯವಸ್ಥೆಯ ಬೆನ್ನೆಲುಬಾಗಿ ದುಡಿಯುವ ಆಶಾ ಕಾರ್ಯಕರ್ತೆಯರಿಗೆ ನ್ಯಾಯಯುತ ಗೌರವಧನ ನೀಡಲು ಮನಸ್ಸಿಲ್ಲವೇ ಎಂದು ಪ್ರಶ್ನಿಸಲಾಗಿದೆ.

ಮಾನವೀಯತೆಯಿಂದ ಸ್ಪಂದಿಸಲು ಒತ್ತಾಯ: ಆಶಾ ಕಾರ್ಯಕರ್ತೆಯರ ಹೋರಾಟವನ್ನು ರಾಜಕೀಯವಾಗಿ ನೋಡದೆ, ಮಾನವೀಯತೆಯಿಂದ ಸ್ಪಂದಿಸಿ ತಕ್ಷಣವೇ ಅವರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆರ್. ಅಶೋಕ್ ಒತ್ತಾಯಿಸಿದ್ದಾರೆ.

Share