Home ದಾವಣಗೆರೆ 23 ಕೋಟಿ ರೂ. ಬೆಲೆಯ ಕುದುರೆ! ಪುಷ್ಕರ್ ಮೇಳದಲ್ಲಿ ಸೆಲೆಬ್ರಿಟಿಗಳಂತೆ ಮಿಂಚುತ್ತಿರುವ ಕೋಟಿ ಬೆಲೆಯ ರಾಜವಂಶದ ಕುದುರೆಗಳು!
ದಾವಣಗೆರೆನವದೆಹಲಿಬೆಂಗಳೂರುವಾಣಿಜ್ಯ

23 ಕೋಟಿ ರೂ. ಬೆಲೆಯ ಕುದುರೆ! ಪುಷ್ಕರ್ ಮೇಳದಲ್ಲಿ ಸೆಲೆಬ್ರಿಟಿಗಳಂತೆ ಮಿಂಚುತ್ತಿರುವ ಕೋಟಿ ಬೆಲೆಯ ರಾಜವಂಶದ ಕುದುರೆಗಳು!

Share
ಕುದುರೆ
Share

ಪುಷ್ಕರ್ (ರಾಜಸ್ಥಾನ): ರಾಜಸ್ಥಾನದ ವಿಶ್ವಪ್ರಸಿದ್ಧ ವಾರ್ಷಿಕ ‘ಪುಷ್ಕರ್ ಮೇಳ’ದಲ್ಲಿ ಈ ಬಾರಿ ಕೋಟಿ ಕೋಟಿ ರೂಪಾಯಿ ಬೆಲೆಬಾಳುವ ಅಪರೂಪದ ತಳಿಯ ಕುದುರೆಗಳು ಪ್ರಮುಖ ಆಕರ್ಷಣೆಯ ಕೇಂದ್ರಬಿಂದುವಾಗಿವೆ.

ಸಾಂಪ್ರದಾಯಿಕ ಡೋಲುಗಳ ಬಡಿತ, ನೃತ್ಯ ಪ್ರದರ್ಶನ ಹಾಗೂ ಭಾರಿ ಭದ್ರತೆಯೊಂದಿಗೆ ಮೇಳಕ್ಕೆ ಎಂಟ್ರಿ ಕೊಡುತ್ತಿರುವ ಈ ಕುದುರೆಗಳು ಸಿನಿಮಾ ಸೆಲೆಬ್ರಿಟಿಗಳಿಗಿಂತ ಕಡಿಮೆಯಿಲ್ಲದಂತೆ ಜನರ ಗಮನ ಸೆಳೆಯುತ್ತಿವೆ.

ಈ ವರ್ಷ ಮೇಳದ ಅತಿದೊಡ್ಡ ಆಕರ್ಷಣೆಯಾಗಿರುವ ಜೆತ್ವಾಲ್ ಸ್ಟಡ್‌ನ ‘ಬಾದಲ್’ ಎಂಬ ಕುದುರೆಯ ಬೆಲೆಯನ್ನು ಬರೋಬ್ಬರಿ 23 ಕೋಟಿ ರೂ. ಎಂದು ಅಂದಾಜಿಸಲಾಗಿದ್ದು, ಇದರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಪ್ರವಾಸಿಗರು ಮುಗಿಬೀಳುತ್ತಿದ್ದಾರೆ.

ಬಾದಲ್ ಮಾಲೀಕ ರಾಹುಲ್ ಜೆತ್ವಾಲ್ ಅವರ ಬಳಿ ಬಾದಲ್, ನ್ಯೂ ಬಾದಲ್ ಮತ್ತು ವಿಶ್ವಾಸ್ ಎಂಬ ಮೂರು ಪ್ರಮುಖ ಕುದುರೆಗಳಿವೆ. ಆದರೆ ತಮಗೆ ಬಾದಲ್ ಕುದುರೆಯನ್ನು ಮಾರಾಟ ಮಾಡುವ ಯಾವುದೇ ಉದ್ದೇಶವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದೇ ರೀತಿ ಗುಜರಾತ್‌ನ ‘ಗೋಲ್ಡನ್ ಕಿಂಗ್’ ಎಂಬ ಮಾರ್ವಾಡಿ ಕುದುರೆಗೆ 21 ಕೋಟಿ ರೂ. ಹಾಗೂ ಮಹಾರಾಷ್ಟ್ರದ ‘ಅಲೆಕ್ಸ್’ ಮತ್ತು ‘ಆರ್‌ಡಿಎಕ್ಸ್’ ಕುದುರೆಗಳಿಗೆ ತಲಾ 5 ಕೋಟಿ ರೂ. ಬೆಲೆ ಕಟ್ಟಲಾಗಿದೆ.

ಆದರೆ, ಈ ಕೋಟಿ ಬೆಲೆಯ ಘೋಷಣೆಗಳು ಕೇವಲ ಪ್ರದರ್ಶನ ಮತ್ತು ತಳಿಯ ಪ್ರಚಾರಕ್ಕಾಗಿ ಸೀಮಿತವಾಗಿವೆಯೇ ಹೊರತು, ವಾಸ್ತವದಲ್ಲಿ ಅಷ್ಟೊಂದು ಮೊತ್ತಕ್ಕೆ ವಹಿವಾಟು ನಡೆಯುವುದಿಲ್ಲ ಎಂದು ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ಹಾಗೂ ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ದವ್ನೂರ್ ಕುದುರೆಯ ರಾಜವೈಭೋಗ: ಮೇಳದಲ್ಲಿ ಗಮನ ಸೆಳೆಯುತ್ತಿರುವ ‘ದವ್ನೂರ್’ ಎಂಬ ಕುದುರೆಗೆ ಕುಡಿಯಲು ಬಿಸ್ಲೆರಿ ಬಾಟಲಿ ನೀರನ್ನು ನೀಡಲಾಗುತ್ತಿದ್ದು, ಆಹಾರವಾಗಿ ಗೋಡಂಬಿ ಮತ್ತು ಬಾದಾಮಿಯನ್ನು ನೀಡಲಾಗುತ್ತಿದೆ.

ವಿಶೇಷ ತಳಿಗಳ ಆಕರ್ಷಣೆ: ಹಾಲಿನಂತಹ ಬಿಳಿ ಬಣ್ಣ ಮತ್ತು ಗುಲಾಬಿ ಮೂತಿಯನ್ನು ಹೊಂದಿರುವ ‘ನುಕ್ರಾ’ ತಳಿಯ ಕುದುರೆಗಳು ಮದುವೆ ಹಾಗೂ ಶುಭ ಸಮಾರಂಭಗಳಿಗೆ ಭಾರಿ ಬೇಡಿಕೆ ಪಡೆದುಕೊಂಡಿವೆ.

ವಾಸ್ತವ ವಹಿವಾಟಿನ ಲೆಕ್ಕಾಚಾರ: ಸಾಮಾಜಿಕ ಜಾಲತಾಣಗಳಲ್ಲಿ ಕೋಟಿ ಕೋಟಿ ಬೆಲೆಯ ಬಗ್ಗೆ ಚರ್ಚೆಯಾಗುತ್ತಿದ್ದರೂ, ಅಧಿಕೃತ ಅಂಕಿಅಂಶಗಳ ಪ್ರಕಾರ ಕಳೆದ ಬಾರಿ ಗರಿಷ್ಠ ಮಾರಾಟವಾದ ಕುದುರೆಯ ಬೆಲೆ 4.60 ಲಕ್ಷ ರೂ. ಆಗಿತ್ತು.

ಇದರೊಂದಿಗೆ ತರಬೇತಿ ಪಡೆದ ಕುದುರೆಗಳ ನೃತ್ಯ ಪ್ರದರ್ಶನ ಹಾಗೂ ರಾಜಸ್ಥಾನ ಪೊಲೀಸ್ ಅಶ್ವದಳದ ಸಾಹಸ ಪ್ರದರ್ಶನಗಳು ಪ್ರವಾಸಿಗರಿಗೆ ಭರಪೂರ ಮನರಂಜನೆ ನೀಡುತ್ತಿವೆ.

Share

Recent Posts

Recent Comments

No comments to show.
Related Articles