ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಕನಿಷ್ಠ ಬೆಂಬಲ ಯೋಜನೆಯಡಿ ರೈತರಿಂದ ಭತ್ತ, ರಾಗಿ, ಜೋಳ ಖರೀದಿ: ಅಕ್ರಮವಾಗಿ ಮಾರಾಟ ಮಾಡಿದರೆ ಕ್ರಿಮಿನಲ್ ಕೇಸ್..!

On: November 18, 2024 6:54 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:18-11-2024

ಬಳ್ಳಾರಿ: ಪ್ರಸ್ತಕ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಯೋಜನೆಯಡಿ ರೈತರಿಂದ ಭತ್ತ, ರಾಗಿ, ಜೋಳ ಖರೀದಿಸಲು ಜಿಲ್ಲೆಯಾದ್ಯಂತ ಏಳು ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, ರೈತಾಪಿ ವರ್ಗದವರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿಯ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಹೇಳಿದರು.

ನಗರದ ಅನಂತಪುರ ರಸ್ತೆಯ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

2024-25ನೇ ಸಾಲಿನ ಮುಂಗಾರು ಋತುವಿನಲ್ಲಿ ಬೆಳೆದ ಬಿಳಿ ಜೋಳವನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ನೇರವಾಗಿ ಖರೀದಿಸಲು ಬಳ್ಳಾರಿ ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿ ತೀರ್ಮಾನಿಸಿದೆ. ಈ ಹಿಂದೆ ಕೇವಲ ರಾಗಿ, ಜೋಳ ಬೆಳೆಗಳನ್ನು ಮಾತ್ರ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಬೆಳೆಗಳ ನೋಂದಣಿ ಹಾಗೂ ಖರೀದಿ ಮಾಡಲಾಗುತ್ತಿತ್ತು, ಪ್ರಸ್ತುತ ಜಿಲ್ಲೆಯಲ್ಲಿನ ಭತ್ತದ ಬೆಳೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಭತ್ತವನ್ನೂ ಸಹ ನೋಂದಣಿ ಮತ್ತು ಖರೀದಿ ಮಾಡಲಾಗುತ್ತಿದೆ ಎಂದರು.

ಎಂಎಸ್‌ಪಿ ಕಾರ್ಯಾಚರಣೆಯ ಖರೀದಿ ಕೇಂದ್ರಗಳು:

ಕನಿಷ್ಠ ಬೆಂಬಲ ಯೋಜನೆಯಡಿ ರೈತರಿಂದ ಭತ್ತ, ರಾಗಿ, ಜೋಳ ಕೃಷಿ ಉತ್ಪನ್ನಗಳನ್ನು ಬಳ್ಳಾರಿ ತಾಲ್ಲೂಕಿನಲ್ಲಿ ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘ (ಎಪಿಎಂಸಿ ಯಾರ್ಡ್), ಕುರುಗೋಡು ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ(ಎಪಿಎಂಸಿ ಯಾರ್ಡ್), ಕಂಪ್ಲಿ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ(ಎಪಿಎಂಸಿ ಯಾರ್ಡ್), ಸಂಡೂರು ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ(ಎಪಿಎಂಸಿ ಯಾರ್ಡ್), ಸಂಡೂರು ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ(ಎಪಿಎಂಸಿ ಯಾರ್ಡ್), ಸಿರುಗುಪ್ಪ ತಾಲ್ಲೂಕಿನಲ್ಲಿ ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘ(ಎಪಿಎಂಸಿ ಯಾರ್ಡ್), ಹಚ್ಚೊಳ್ಳಿಯ ಎಪಿಎಂಸಿ ಯಾರ್ಡ್, ಕರೂರಿನ ಎಪಿಎಂಸಿ ಯಾರ್ಡ್ ಸ್ಥಳಗಳಲ್ಲಿ ಬೆಳೆಗಳನ್ನು ರೈತರಿಂದ ನೇರವಾಗಿ ಖರೀದಿ ಮಾಡಲಾಗುತ್ತದೆ ಎಂದರು.

ಕಳೆದ ಬಾರಿ ಐದು ಖರೀದಿ ಕೇಂದ್ರಗಳಲ್ಲಿ ಬೆಳೆ ಖರೀದಿ ಮಾಡಲಾಗುತ್ತಿತ್ತು, ರೈತರ ಹಿತದೃಷ್ಟಿಯಿಂದ ಹೆಚ್ಚುವರಿಯಾಗಿ ಎರಡು ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಮಾಹಿತಿ ನೀಡಿದರು.

ಖರೀದಿಸುವ ಉತ್ಪನ್ನ ಮತ್ತು ನಿಗದಿಯಾದ ಬೆಂಬಲ ಬೆಲೆ:

ಸಾಮಾನ್ಯ ಭತ್ತಕ್ಕೆ ರೂ.2,300(ಪ್ರತಿ ಕ್ವಿಂಟಾಲ್‌ಗೆ) ಮತ್ತು ಗ್ರೇಡ್-ಎ ಭತ್ತಕ್ಕೆ ರೂ.2,320(ಪ್ರತಿ ಕ್ವಿಂಟಾಲ್‌ಗೆ) ಇದ್ದು, ರಾಗಿ ಬೆಳೆಗೆ ರೂ.4,290 (ಪ್ರತಿ ಕ್ವಿಂಟಾಲ್‌ಗೆ) ಇರುತ್ತದೆ.

ಹೈಬ್ರೀಡ್ ಬಿಳಿ ಜೋಳಕ್ಕೆ ರೂ.3,371(ಪ್ರತಿ ಕ್ವಿಂಟಾಲ್‌ಗೆ) ಇದ್ದು, ಮಾಲ್ದಂಡಿ ಬಿಳಿ ಜೋಳಕ್ಕೆ ರೂ.3,421 (ಪ್ರತಿ ಕ್ವಿಂಟಾಲ್‌ಗೆ) ಬೆಲೆ ನಿಗದಿಯಾಗಿದ್ದು, ರೈತರು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ತಮ್ಮ ಬೆಳೆಗಳನ್ನು ಮಾರಾಟ ಮಾಡಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ, ಬೆಂಗಳೂರು. ಇವರು ಖರೀದಿಸುವ ಏಜೆನ್ಸಿಯಾಗಿರುತ್ತಾರೆ. ರೈತರು ಪ್ರೂಟ್ ದಾಖಲೆ ಮೂಲಕ ನೋಂದಾಯಿಸಲು ಅವಕಾಶವಿರುತ್ತದೆ ಎಂದರು.

ಭತ್ತ ಬೆಳೆಯನ್ನು ನೊಂದಯಿಸಲು ನ.11 ರಿಂದ ಡಿ.31 ವರೆಗೆ ಅವಕಾಶವಿದ್ದು, ಭತ್ತ ಖರೀದಿ ಕೇಂದ್ರದಲ್ಲಿ 2025ರ ಜ.01 ರಿಂದ ಮಾ.31ರ ವರೆಗೆ ಖರೀದಿಸಲಾಗುತ್ತದೆ. ರಾಗಿ ಮತ್ತು ಜೋಳ ನೋಂದಣಿಯು ಡಿ.01 ರಿಂದ ಪ್ರಾರಂಭಗೊಳ್ಳುತ್ತದೆ. ಹಾಗೂ ರಾಗಿ ಮತ್ತು ಜೋಳ ಬೆಳೆಯ ಖರೀದಿ ಕೇಂದ್ರದಲ್ಲಿ 2025ರ ಜ.01 ರಿಂದ ಮಾ.31ರ ವರೆಗೆ ಖರೀದಿಸಲಾಗುತ್ತದೆ ಎಂದು ಹೇಳಿದರು.

ರೈತರ ಹೆಸರು ಹೇಳಿ, ಅಕ್ರಮವಾಗಿ ಬೆಳೆ ನೋಂದಾಯಿಸಿಕೊಂಡು ಮಾರಾಟ ಮಾಡಿದರೆ ಅಂತವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು. ಬೆಳೆ ಮಾರಾಟ ಸಂದರ್ಭದಲ್ಲಿ ಗೋಣಿ ಚೀಲ ವ್ಯವಸ್ಥೆಯನ್ನು ಖರೀದಿ ಸಂಸ್ಥೆ ಅಥವಾ ಏಜೆನ್ಸಿ ಅವರೇ ಮಾಡತಕ್ಕದ್ದು, ಉಗ್ರಾಣ ಸಮಸ್ಯೆ, ಕಳಪೆ ನಿರ್ವಹಣೆ ಸೇರಿದಂತೆ ಇನ್ನಿತರೆ ದೂರುಗಳು ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿ ಮತ್ತು ಏಜೆನ್ಸಿ ಅವರ ವಿರುದ್ದ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಅಧಿಕಾರಿಗಳು ಹಾಗೂ ಏಜೆನ್ಸಿ ಸಂಸ್ಥೆಯವರು ರೈತಪರ ಕಾಳಜಿಯಿಂದ ಕಾರ್ಯನಿರ್ವಹಿಸಬೇಕು. ನಿಯಮಬದ್ಧವಾಗಿ ಕಾರ್ಯನಿರ್ವಹಿಸದೇ ಹೋದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸೂಚಿಸಿದರು.

ಖರೀದಿ ಕೇಂದ್ರಗಳಲ್ಲಿ ಚೆಕ್‌ಪೊಸ್ಟ್ ತೆರೆಯಲಾಗುತ್ತದೆ. ಬೆಳೆಗಳ ಖರೀದಿ ಹಾಗೂ ನೋಂದಣಿ ಪ್ರಕ್ರಿಯೆಯು ಸಿಸಿಟಿವಿ ಕಣ್ಗಾವಲಿನಲ್ಲಿ ನಡೆಯಲಿದ್ದು, ಯಾವುದೇ ಅಕ್ರಮ ಚಟುವಟಿಕೆಗಳಿಗೆ ಆಸ್ಪದ ನೀಡದೆ ಬೆಳೆಗಳ ನೊಂದಣಿ ಹಾಗೂ ಖರೀದಿ ಕಾರ್ಯ ಯಶಸ್ವಿಯಾಗಿ ನಡೆಯಬೇಕು ಎಂದು ಅವರು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೊಭಾರಾಣಿ ವಿ.ಜೆ ಅವರು ಮಾತನಾಡಿ, ಈ ಹಿಂದಿನ ಬೆಳೆಗಳ ನೊಂದಣಿ ಹಾಗೂ ಖರೀದಿ ಸಮಯದಲ್ಲಾದ ಸಮಸ್ಯೆಗಳ ಕುರಿತು ಪರಿಶೀಲಿಸಬೇಕು. ರೈತರಿಗೆ ಯಾವುದೇ ರೀತಿ ಅಡಚಡಣೆಯಾಗದಂತೆ ಯಶಸ್ವಿಯಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರಾದ ಸಕೀನಾ.ಬಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸೋಮಸುಂದರ್, ಬಳ್ಳಾರಿ ತಾಲ್ಲೂಕಿನ ತಹಸೀಲ್ದಾರ್ ಗುರುರಾಜ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ರೈತರು ಹಾಗೂ ಇತರರು ಉಪಸ್ಥಿತರಿದ್ದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment