Home ಕ್ರೈಂ ನ್ಯೂಸ್ ಪ್ರೀತಿ, ಡ್ರಗ್ಸ್ ಮತ್ತು ಪಾಕ್ ನಂಟು: ರಾಜಸ್ಥಾನ ರೈಲು ಹಳಿ ಸ್ಫೋಟ ಪ್ರಕರಣದಲ್ಲಿ ಪಂಜಾಬ್ ಯುವತಿ ಹಾಗೂ ಸಹಚರ ಸಿಕ್ಕಿಬಿದ್ದಿದ್ದೇಗೆ?
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಪ್ರೀತಿ, ಡ್ರಗ್ಸ್ ಮತ್ತು ಪಾಕ್ ನಂಟು: ರಾಜಸ್ಥಾನ ರೈಲು ಹಳಿ ಸ್ಫೋಟ ಪ್ರಕರಣದಲ್ಲಿ ಪಂಜಾಬ್ ಯುವತಿ ಹಾಗೂ ಸಹಚರ ಸಿಕ್ಕಿಬಿದ್ದಿದ್ದೇಗೆ?

Share
ರಾಜಸ್ಥಾನ
Share

ಗುರುದಾಸ್‌ಪುರ: ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ 12ನೇ ತರಗತಿ ಉತ್ತೀರ್ಣಳಾಗಿರುವ ಮಹಕ್‌ದೀಪ್ ಕೌರ್ ಎಂಬ ಯುವತಿ, ಕುಟುಂಬದ ಮೂಲಕ ಗಡಿಯಾಚೆಗಿನ ಕಳ್ಳಸಾಗಣೆ ಜಾಲದ ಸಂಪರ್ಕಕ್ಕೆ ಬಂದು, ಬಳಿಕ ಪಾಕಿಸ್ತಾನ ಮೂಲದ ಉಗ್ರ ಹಾಗೂ ಅಪರಾಧ ಜಾಲದ ಪ್ರಮುಖ ಕೊಂಡಿಯಾಗಿ ಬದಲಾಗಿದ್ದಾಳೆ.

ನವೆಂಬರ್ 3ರಂದು ರಾಜಸ್ಥಾನದ ರೈಲು ಹಳಿಯ ಮೇಲೆ ನಡೆದ ಐಇಡಿ ಸ್ಫೋಟ ಪ್ರಕರಣದಲ್ಲಿ ಈಕೆಯ ಮಹತ್ವದ ಪಾತ್ರವಿರುವುದು ಪೊಲೀಸ್ ತನಿಖೆಯಿಂದ ಬಹಿರಂಗಗೊಂಡಿದೆ. ಪಾಕಿಸ್ತಾನ ಮೂಲದ ಹ್ಯಾಂಡ್ಲರ್ ‘ಶಾ’ ಎಂಬಾತನ ನೇರ ಸೂಚನೆ ಮತ್ತು ಸಂಪರ್ಕದಲ್ಲಿದ್ದ ಮಹಕ್‌ದೀಪ್, ಕೌರ್ ಕಲಾನ್ ಗ್ರಾಮದ ದೇವಿಂದರ್ ಸಿಂಗ್ ಎಂಬ ಯುವಕನನ್ನು ಈ ವಿಧ್ವಂಸಕ ಕೃತ್ಯಕ್ಕೆ ಬಳಸಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ತನಿಖಾಧಿಕಾರಿಗಳ ಪ್ರಕಾರ, ಮಹಕ್‌ದೀಪ್‌ಳ ಮಾಜಿ ಪತಿ ಕರಣ್ ದೀಪ್ ಸಿಂಗ್ ಮತ್ತು ಆಕೆಯ ಸೋದರಸಂಬಂಧಿ ಪಾಕಿಸ್ತಾನದ ಕಳ್ಳಸಾಗಣೆದಾರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಡ್ರಗ್ಸ್ ಮತ್ತು ಶಸ್ತ್ರಾಸ್ತ್ರಗಳನ್ನು ಸ್ವೀಕರಿಸುತ್ತಿದ್ದರು. ಈ ಕೌಟುಂಬಿಕ ಹಿನ್ನೆಲೆಯ ಮೂಲಕ ಮಹಕ್‌ದೀಪ್‌ಗೆ ‘ಶಾ’ ಪರಿಚಯವಾಗಿದ್ದು, ಹಣದಾಸೆಗೆ ಬಿದ್ದು ಆತನ ಜಾಲದಲ್ಲಿ ಗುರುತಿಸಿಕೊಂಡಿದ್ದಳು.

ಕೇವಲ ಮೂರು ತಿಂಗಳ ಹಿಂದೆ ದೇವಿಂದರ್ ಸಿಂಗ್‌ನಿಗೆ ಮದುವೆಯ ಭರವಸೆ ನೀಡಿ ಪ್ರೀತಿಯ ಬಲೆಗೆ ಬೀಳಿಸಿಕೊಂಡಿದ್ದ ಈಕೆ, ರಾಜಸ್ಥಾನಕ್ಕೆ ಮೂರು ಬಾರಿ ಕರೆದೊಯ್ದು ಈ ಸ್ಫೋಟದ ಕೃತ್ಯ ಎಸಗುವಂತೆ ಮಾಡಿದ್ದಾಳೆ. ಈ ಕೃತ್ಯಕ್ಕಾಗಿ ಇಬ್ಬರಿಗೂ 1 ಲಕ್ಷ ರೂಪಾಯಿ ನೀಡುವುದಾಗಿ ಭರವಸೆ ನೀಡಲಾಗಿತ್ತು ಎಂದು ತಿಳಿದುಬಂದಿದೆ. ರಾಜಸ್ಥಾನ ಎಟಿಎಸ್ ಮತ್ತು ಪಂಜಾಬ್ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಗುರುದಾಸ್‌ಪುರದ ಕಲನೌರ್ ಪ್ರದೇಶದಲ್ಲಿ ಇಬ್ಬರನ್ನೂ ಬಂಧಿಸಲಾಗಿದ್ದು, ಅವರಿಂದ ಎರಡು ಪಿಸ್ತೂಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ರಾಜಸ್ಥಾನಕ್ಕೆ ಮೂರು ಬಾರಿ ಭೇಟಿ ಮತ್ತು ಸ್ಫೋಟ: ಆರೋಪಿಗಳು ಅಕ್ಟೋಬರ್ 3-4ರಂದು ಮೊದಲ ಬಾರಿ ಶ್ರೀಗಂಗಾನಗರಕ್ಕೆ ತೆರಳಿ ರೈಲು ಹಳಿ ಬಳಿ ಸ್ಫೋಟಕ ಇರಿಸಿದ್ದರೂ ಅದು ವಿಫಲಗೊಂಡಿತ್ತು. ಬಳಿಕ ಅಕ್ಟೋಬರ್ 12ರಂದು ಮತ್ತೊಮ್ಮೆ ತೆರಳಿ, ಮೂರನೇ ಬಾರಿಗೆ ಅಕ್ಟೋಬರ್ 30ರ ನಂತರ ಹೋಟೆಲ್ ಒಂದರಲ್ಲಿ ತಂಗಿ ಬೈಕ್ ಬಳಸಿ ಹಳಿಯ ಮೇಲೆ ಐಇಡಿ ಅಳವಡಿಸಿ ಸ್ಫೋಟ ನಡೆಸಿದ್ದರು.

ಕುಟುಂಬದ ಅಪರಾಧ ಹಿನ್ನೆಲೆ: ಮಹಕ್‌ದೀಪ್‌ಳ ಮಾಜಿ ಪತಿ ಕರಣ್ ದೀಪ್ ಸಿಂಗ್ ಡ್ರಗ್ಸ್ ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆ ಪ್ರಕರಣದಲ್ಲಿ ಕಳೆದ ಒಂದು ವರ್ಷದಿಂದ ಜೈಲಿನಲ್ಲಿದ್ದಾರೆ. ಅಲ್ಲದೆ, ಆಕೆಯ ಸಹೋದರ ಕೂಡ ಮಾದಕವಸ್ತು ಪ್ರಕರಣದಲ್ಲಿ ಬಂಧಿತನಾಗಿ ಜೈಲು ಸೇರಿದ್ದಾನೆ.

ಹೊಸ ಒಳಸಂಚಿನ ವಿಧಾನ: ಪಾಕಿಸ್ತಾನಿ ಹ್ಯಾಂಡ್ರಲ್‌ಗಳು ಸ್ಥಳೀಯ ಮಹಿಳೆಯರಿಗೆ ಪ್ರೀತಿ ಹಾಗೂ ಹಣದ ಆಮಿಷವೊಡ್ಡಿ, ಅಸ್ತಿತ್ವದಲ್ಲಿರುವ ಡ್ರಗ್ಸ್ ಹಾಗೂ ಶಸ್ತ್ರಾಸ್ತ್ರ ಜಾಲದ ಮೂಲಕ ಭಾರತದಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ಬಳಸಿಕೊಳ್ಳುತ್ತಿರುವ ಅಪಾಯಕಾರಿ ಹೊಸ ಪ್ರವೃತ್ತಿಯನ್ನು ಭದ್ರತಾ ಸಂಸ್ಥೆಗಳು ಪತ್ತೆಹಚ್ಚಿವೆ.

ಪ್ರಕರಣದ ಕುರಿತು ರಾಜಸ್ಥಾನ ಎಟಿಎಸ್ ಮತ್ತು ಪಂಜಾಬ್ ಪೊಲೀಸರು ಜಂಟಿಯಾಗಿ ತೀವ್ರ ತನಿಖೆ ಮುಂದುವರಿಸಿದ್ದು, ಸ್ಫೋಟಕಗಳ ಮೂಲ ಹಾಗೂ ಜಾಲದ ಇತರ ವ್ಯಕ್ತಿಗಳ ಪತ್ತೆ ಕಾರ್ಯ ಭರದಿಂದ ಸಾಗುತ್ತಿದೆ.

Share

Leave a comment

Leave a Reply

Your email address will not be published. Required fields are marked *