ಗುರ್ದಾಸ್ಪುರ (ಪಂಜಾಬ್): ಪಂಜಾಬ್ನ ಗುರ್ದಾಸ್ಪುರ ಜಿಲ್ಲೆಯಲ್ಲಿ ರಜೆ ಮೇಲೆ ಮನೆಗೆ ಬಂದಿದ್ದ ಸೈನಿಕರೊಬ್ಬರ ಮೇಲೆ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಸ್ವಂತ ತಾಯಿ, ಸಹೋದರ ಹಾಗೂ ಇತರ ಸಂಬಂಧಿಕರು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ.
ವಜೀರ್ ಸಿಂಗ್ ಎಂಬ ಯೋಧ ಗಾಯಗೊಂಡಿದ್ದು, ಅವರ ಪತ್ನಿ ಸಿಮ್ಮಿ ಸೈನಿ ಈ ಕೃತ್ಯವನ್ನು ಮೊಬೈಲ್ನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಯೋಧ ವಜೀರ್ ಸಿಂಗ್ ತಮ್ಮ ಹೆಸರಿನಲ್ಲಿ ಅಂಗಡಿಯೊಂದನ್ನು ನಿರ್ಮಿಸಿದ್ದು, ಜತೆಗೆ ಕೃಷಿ ಜಮೀನು ಒತ್ತುವರಿ ವಿಚಾರವಾಗಿ ಕುಟುಂಬದಲ್ಲಿ ಕಲಹವಿತ್ತು. ಆಸ್ತಿ ವಿವಾದ ಬಗೆಹರಿಸುವ ನೆಪದಲ್ಲಿ ಯೋಧನನ್ನು ಕರೆಸಿ ಈ ಹಲ್ಲೆ ನಡೆಸಲಾಗಿದೆ ಎಂದು ಪತ್ನಿ ಆರೋಪಿಸಿದ್ದಾರೆ. ಹಲ್ಲೆಯಿಂದ ಅಜ್ಞಾತ ಸ್ಥಿತಿಗೆ ತಲುಪಿದ್ದ ಪತಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರೂ ಅಲ್ಲಿ ಸರಿಯಾದ ಚಿಕಿತ್ಸೆ ಸಿಗದ ಕಾರಣ ಮನೆಗೆ ಕರೆತಂದು ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಸಿಮ್ಮಿ ಸೈನಿ ತಿಳಿಸಿದ್ದಾರೆ. ಕುಟುಂಬಸ್ಥರು ಜೀವ ಬೆದರಿಕೆ ಹಾಕುತ್ತಿದ್ದು, ಮನೆಯಲ್ಲೇ ಬಂಧಿಯಾಗುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಆಸ್ತಿ ವಿವಾದ ಮತ್ತು ಒತ್ತುವರಿ ಆರೋಪ: ಯೋಧ ವಜೀರ್ ಸಿಂಗ್ ಅವರ ಹೆಸರಿನಲ್ಲಿದ್ದ ಅಂಗಡಿ ಹಾಗೂ ಕೃಷಿ ಭೂಮಿ ವಿಚಾರವಾಗಿ ಕುಟುಂಬದವರೇ ಒತ್ತುವರಿ ನಡೆಸಿ ಕೃತ್ಯ ಎಸಗಿದ್ದಾರೆ.
ಸಾಕ್ಷ್ಯವಾಗಿ ವೈರಲ್ ಆದ ವಿಡಿಯೋ: ಪತ್ನಿ ಸಿಮ್ಮಿ ಸೈನಿ ಅವರು ಸ್ಥಳಕ್ಕೆ ಧಾವಿಸಿ ಹಲ್ಲೆಯ ದೃಶ್ಯವನ್ನು ಮೊಬೈಲ್ನಲ್ಲಿ ಸೆರೆಹಿಡಿದಿದ್ದು, ಪ್ರಮುಖ ಸಾಕ್ಷ್ಯವಾಗಿ ಹೊರಬಂದಿದೆ.
ಪೊಲೀಸ್ ತನಿಖೆ ಹಾಗೂ ಕ್ರಮ: ಗಾಯಗೊಂಡ ಸೈನಿಕನ ಹೇಳಿಕೆ ಮತ್ತು ವೈದ್ಯಕೀಯ ವರದಿಯನ್ನು ಪಡೆದಿರುವ ಪೊಲೀಸರು ತನಿಖೆ ಮುಂದುವರಿಸಿದ್ದು, ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.





Leave a comment