ಚಂಡೀಗಢ: ಸಿಖ್ ಧರ್ಮದ ಸರ್ವೋಚ್ಚ ಧಾರ್ಮಿಕ ಸಂಸ್ಥೆಯಾದ ‘ಅಕಲ್ ತಖ್ತ್’ (Akal Takht) ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರನ್ನು ‘ಗುರು ದ್ರೋಹಿ’ (ಧರ್ಮ ವಿರೋಧಿ) ಎಂದು ಘೋಷಿಸಿದ ಬೆನ್ನಲ್ಲೇ, ಪಂಜಾಬ್ ರಾಜಕಾರಣದಲ್ಲಿ ಈಗ ಹೈಡ್ರಾಮಾ ಶುರುವಾಗಿದೆ.
ವಿವಾದಿತ ವಿಡಿಯೋ ಕುರಿತು ಪಂಜಾಬ್ ಸರ್ಕಾರ ಗುರುವಾರ ಬಿಡುಗಡೆ ಮಾಡಿರುವ ಹೊಸ ಫೋರೆನ್ಸಿಕ್ ವರದಿಯು ಇಡೀ ಪ್ರಕರಣಕ್ಕೆ ದೊಡ್ಡ ತಿರುವು ನೀಡಿದೆ. ವಿಡಿಯೋದಲ್ಲಿರುವ ವ್ಯಕ್ತಿ ಮುಖ್ಯಮಂತ್ರಿ ಭಗವಂತ್ ಮಾನ್ ಅವರೇ ಅಲ್ಲ ಎಂದು ಈ ವರದಿ ಸ್ಪಷ್ಟಪಡಿಸಿದೆ.
ಏನಿದು ವಿವಾದ?
ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಿಯೊಬ್ಬ ಸಿಖ್ ಗುರುಗಳ ಭಾವಚಿತ್ರದ ಮೇಲೆ ಮದ್ಯ ಚಿಮುಕಿಸುತ್ತಿರುವ 39 ಸೆಕೆಂಡುಗಳ ವಿಡಿಯೋವೊಂದು ವೈರಲ್ ಆಗಿತ್ತು. ಈ ವ್ಯಕ್ತಿ ಪಂಜಾಬ್ ಸಿಎಂ ಭಗವಂತ್ ಮಾನ್ ಅವರಂತೆ ಕಾಣಿಸುತ್ತಿದ್ದರಿಂದ ಸಿಖ್ ಸಮುದಾಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಕುರಿತು ತನಿಖೆ ನಡೆಸಿದ್ದ ಅಕಲ್ ತಖ್ತ್, ಕೇಂದ್ರ ಸರ್ಕಾರ ಅಂಗೀಕರಿಸಿದ ಎರಡು ಲ್ಯಾಬ್‌ಗಳ ವರದಿಯನ್ನು ಆಧರಿಸಿ ವಿಡಿಯೋ ಅಸಲಿ ಎಂದು ಘೋಷಿಸಿತ್ತು. ಅಲ್ಲದೆ ಮಾನ್ ಅವರು ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿ, ಸಿಖ್ ಸಮುದಾಯ ಅವರೊಂದಿಗೆ ಯಾವುದೇ ಸಂಬಂಧ ಇಟ್ಟುಕೊಳ್ಳಬಾರದು ಎಂದು ಆದೇಶಿಸಿತ್ತು. ಈ ಬೆನ್ನಲ್ಲೇ ಕಾಂಗ್ರೆಸ್, ಬಿಜೆಪಿ ಮತ್ತು ಅಕಾಲಿದಳ ಸಿಎಂ ರಾಜೀನಾಮೆಗೆ ಒತ್ತಾಯಿಸಿದ್ದವು.
ಹೊಸ ಫೋರೆನ್ಸಿಕ್ ವರದಿಯಲ್ಲಿ ಏನಿದೆ? ಅಕಲ್ ತಖ್ತ್ ನಿರ್ಧಾರವನ್ನು ಬಲವಾಗಿ ವಿರೋಧಿಸಿರುವ ಆಮ್ ಆದ್ಮಿ ಪಾರ್ಟಿ (AAP) ಮತ್ತು ಪಂಜಾಬ್ ಸರ್ಕಾರ, ಪಂಜಾಬ್ ಹೊರಗಿನ ಎರಡು ಕೇಂದ್ರ ಅಂಗೀಕೃತ ಪ್ರಮುಖ ಫೋರೆನ್ಸಿಕ್ ಪ್ರಯೋಗಾಲಯಗಳಿಂದ ವಿಡಿಯೋವನ್ನು ವೈಜ್ಞಾನಿಕವಾಗಿ ಪರೀಕ್ಷಿಸಿದೆ. ಈ ಜಂಟಿ ವರದಿಯ ಮುಖ್ಯಾಂಶಗಳು ಹೀಗಿವೆ:
ಮುಖ ಮತ್ತು ದೇಹದ ರಚನೆ ಮ್ಯಾಚ್ ಆಗುತ್ತಿಲ್ಲ: ವೈರಲ್ ವಿಡಿಯೋದ ಒಟ್ಟು 1,191 ಫ್ರೇಮ್‌ಗಳನ್ನು ತಾಂತ್ರಿಕವಾಗಿ ವಿಶ್ಲೇಷಿಸಲಾಗಿದೆ. ವಿಡಿಯೋದಲ್ಲಿರುವ ವ್ಯಕ್ತಿಯ ಮುಖ, ದೇಹದ ವಿಸ್ತೀರ್ಣ ಮತ್ತು ನಿಲ್ಲುವ ಶೈಲಿಗೂ (Stance) ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೂ ಯಾವುದೇ ಸಾಮ್ಯತೆ ಇಲ್ಲ.
ಎತ್ತರದಲ್ಲಿ ವ್ಯತ್ಯಾಸ: ವಿಡಿಯೋದಲ್ಲಿ ಕಾಣಿಸುವ ವ್ಯಕ್ತಿಯ ಅಂದಾಜು ಎತ್ತರ 5 ಅಡಿ 10 ಇಂಚು ಇದೆ. ಆದರೆ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ನಿಜವಾದ ಎತ್ತರ 5 ಅಡಿ 8 ಇಂಚು ಮಾತ್ರ.
ಪ್ರೊಫೈಲ್ ಮ್ಯಾಚ್ ಆಗಿಲ್ಲ: ವ್ಯಕ್ತಿಯ ಪಾರ್ಶ್ವ ನೋಟ (Side Profile) ಮತ್ತು ಹಿಂಭಾಗದ ನೋಟ (Back Profile) ಸಿಎಂ ಭಗವಂತ್ ಮಾನ್ ಅವರ ಹೆಗಲ ರಚನೆ ಹಾಗೂ ಶಾರೀರಿಕ ದೃಢತೆಗೆ ಹೊಂದಿಕೆಯಾಗುತ್ತಿಲ್ಲ.
ರಾಜಕೀಯ ಪ್ರೇರಿತ ಪಿತೂರಿ: ಭಗವಂತ್ ಮಾನ್ ಆರೋಪ ಈ ಇಡೀ ವಿವಾದದ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಭಗವಂತ್ ಮಾನ್, “ಇದು ನನ್ನ ತೇಜೋವಧೆ ಮಾಡಲು ವಿರೋಧ ಪಕ್ಷಗಳು ನಡೆಸುತ್ತಿರುವ ರಾಜಕೀಯ ಪ್ರೇರಿತ ಸಂಚು. ಪಂಜಾಬ್‌ನ ನೀರು, ಕೃಷಿ, ರೈತರು ಮತ್ತು ಯುವಕರ ಹಿತರಕ್ಷಣೆಗಾಗಿ ನಮ್ಮ ಸರ್ಕಾರ ಕೈಗೊಂಡ ನಿರ್ಧಾರಗಳನ್ನು ಸಹಿಸದ ರಾಜಕೀಯ ನಾಯಕರು ಧಾರ್ಮಿಕ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ” ಎಂದು ಕಿಡಿಕಾರಿದ್ದಾರೆ.
ಪ್ರಸ್ತುತ ಎರಡೂ ಕಡೆಯಿಂದ ವಿಭಿನ್ನ ಫೋರೆನ್ಸಿಕ್ ವರದಿಗಳು ಮುನ್ನೆಲೆಗೆ ಬಂದಿರುವುದರಿಂದ ಪಂಜಾಬ್‌ನಲ್ಲಿ ಧಾರ್ಮಿಕ ಮತ್ತು ರಾಜಕೀಯ ಸಂಘರ್ಷ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ದಟ್ಟವಾಗಿದೆ.
- AAP Punjab
- Akal Takht edict
- Bhagwant Mann anti Guru row
- Bhagwant Mann video controversy
- forensic lab report
- national news today
- Punjab CM Bhagwant Mann
- Punjab politics
- ಅಕಲ್ ತಖ್ತ್ ತೀರ್ಪು
- ಆಮ್ ಆದ್ಮಿ ಪಾರ್ಟಿ ಪಂಜಾಬ್
- ಪಂಜಾಬ್ ರಾಜಕೀಯ ಸುದ್ದಿ
- ಪಂಜಾಬ್ ಸಿಎಂ ಭಗವಂತ್ ಮಾನ್
- ಫೋರೆನ್ಸಿಕ್ ಲ್ಯಾಬ್ ವರದಿ
- ಭಗವಂತ್ ಮಾನ್ ವಿಡಿಯೋ ವಿವಾದ
- ರಾಷ್ಟ್ರೀಯ ಸುದ್ದಿ
- ಸಿಖ್ ಧರ್ಮ ಗುರು ದ್ರೋಹಿ





Leave a comment