SUDDIKSHANA KANNADA NEWS/ DAVANAGERE/ DATE: 31-01-2024
ದಾವಣಗೆರೆ: ಪೊಲೀಸ್ ಎಂದರೆ ಭಯ ಅಲ್ಲ ಭರವಸೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಹೇಳಿದರು.
ನಗರದ ಗಾಂಧಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಪೌರ ಕಾರ್ಮಿಕರ ವಸತಿ ಗೃಹದಲ್ಲಿ ಏರ್ಪಡಿಸಿದ್ದ ದಲಿತ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದಲಿತ ಸಭೆಗಳನ್ನು ನಡೆಸುವ ಉದ್ದೇಶ ದಲಿತ ಸಮುದಾಯದ ಕುಂದು ಕೊರತೆಗಳನ್ನು ಆಲಿಸುವುದು. ಸಮಸ್ಯೆಗಳಿಗೆ ಸ್ಪಂದಿಸುವುದಾಗಿದೆ. ಹಾಗಾಗಿ ಸರ್ಕಾರ ಹಾಗೂ ಹಿರಿಯ ಅಧಿಕಾರಿಗಳು ದಲಿತ ಸಭೆಗಳನ್ನು ನಡೆಸಲು ಹೆಚ್ಚಿನ ಒತ್ತು ನೀಡುತ್ತಿದ್ದು, ದಲಿತ ಸಭೆಗಳಲ್ಲಿ ದಲಿತರು ತಮ್ಮ ಕುಂದುಕೊರತೆಗಳನ್ನು ತಿಳಿಸುವ ಮೂಲಕ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ. ಹೆಚ್ಚು ಪೊಲೀಸರು ಜನರಿಗೆ ಹತ್ತಿರವಾಗಬೇಕು, ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದರು.
ಜನರು ತಮ್ಮ ಸಮಸ್ಯಗಳಿಗೆ ಠಾಣೆಗೆ ಭೇಟಿಯಾದಗ ಸರಿಯಾಗಿ ಸ್ಪಂದಿಸಬೇಕು. ಒಂದು ವೇಳೆ ನಿಮಗೆ ಸರಿಯಾದ ಸ್ಪಂದನೆ ಸಿಗದೇ ಇದ್ದ ಸಂಧರ್ಭದಲ್ಲಿ ನಾವು ನಿಮ್ಮ ಬಳಿಯೇ ಬಂದು ಈ ರೀತಿ ದಲಿತ ಸಭೆಗಳನ್ನು ನಡೆಸಿದಾಗ ನಿಮ್ಮ ಸಮಸ್ಯಗಳ ಬಗ್ಗೆ ನೇರವಾಗಿ, ಮುಕ್ತವಾಗಿ ಹೇಳಿಕೊಂಡು ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ದಲಿತ ಸಮುದಾಯವು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು, ತಮ್ಮ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ನಿಮ್ಮ ಜವಾಬ್ದಾರಿ. ದಲಿತರ ಶಿಕ್ಷಣಕ್ಕಾಗಿ ಸರ್ಕಾರವು ಕೂಡ ಹಲವು ಯೋಜನೆಗಳು, ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ದಲಿತ ಸಮುದಾಯವು ಮೌಢ್ಯ ಆಚರಣೆಗಳಿಂದ ಹೊರಬರಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಇತ್ತೀಚಿಗೆ ಬಾಲ್ಯ ವಿವಾಹಗಳು ಆಗುತ್ತಿರುವುದನ್ನು ನೋಡುತ್ತಿದ್ದೇವೆ. ಆದ್ದರಿಂದ ಕಾನೂನು ವಿರುದ್ಧವಾಗಿ ಚಿಕ್ಕವಯಸ್ಸಿಗೆ ಮಕ್ಕಳನ್ನು ಮದುವೆ ಮಾಡಬಾರದು. ಅವರಿಗೆ ಒಳ್ಳೆಯ ಶಿಕ್ಷಣವನ್ನು ನೀಡಲು ಒತ್ತು ನೀಡಬೇಕು. ಶಿಕ್ಷಣವಂಚಿತರಾದ
ಚಿಕ್ಕ ಚಿಕ್ಕ ಮಕ್ಕಳೇ ಇಂದಿನ ದಿನಗಳಲ್ಲಿ ದುಷ್ಚಟಗಳಿಗೆ ಬಲಿಯಾಗಿ, ಅಪರಾಧ, ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿರುವುದನ್ನು ನಾವು ಕಾಣಬಹುದಾಗಿದೆ. ಇದರಿಂದ ಮಕ್ಕಳು ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಹೀಗೆ ಆಗದಂತೆ ತಡೆಯಲು ಶಿಕ್ಷಣವೊಂದೇ ದಾರಿ. ಆದ್ದರಿಂದ ಕಡ್ಡಾಯವಾಗಿ ನಿಮ್ಮ ನಿಮ್ಮ ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡಲು ಮನವಿ ಮಾಡುತ್ತೇನೆ ಎಂದು ತಿಳಿಸಿದರು.
ನಿಮ್ಮ ವ್ಯಾಪ್ತಿಯಲ್ಲಿ ಪೊಲೀಸ್ ಬೀಟ್ ಸಿಬ್ಬಂದಿ ಇದ್ದು ಅವರ ಬಳಿ ತಮ್ಮ ಅಹವಾಲುಗಳನ್ನು ತಿಳಿಸಬಹುದು. ಅಲ್ಲದೇ ನಿಮ್ಮ ಅಕ್ಕ ಪಕ್ಕದಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳು ಕಂಡು ಬಂದರೆ ಕೂಡಲೇ ನಿಮ್ಮ ಬೀಟ್ ಸಿಬ್ಬಂದಿ, ಸ್ಥಳೀಯ ಠಾಣೆ ಹಾಗೂ ತುರ್ತು ಸಹಾಯವಾಣಿ 112 ಗೆ ಕರೆ ಮಾಡಿ ತಿಳಿಸಬಹುದಾಗಿದೆ. ಕೂಡಲೇ ನಮ್ಮ ಸಿಬ್ಬಂದಿ ಸ್ಪಂದಿಸುತ್ತಾರೆ ಎಂದು ಭರವಸೆ ನೀಡಿದರು.
ಹಿರಿಯರಿಗಾಗಿ ಹಿರಿಯರ ಸಹಾಯವಾಣಿ, ಮಕ್ಕಳಿಗಾಗಿ ಮಕ್ಕಳ ಸಹಾಯವಾಣಿ, ಸೈಬರ್ ಅಪರಾಧಗಳಿಗಾಗಿ ಸೈಬರ್ ಸಹಾಯವಾಣಿ, ತುರ್ತು ಸಹಾಯಕ್ಕಾಗಿ ಸಹಾಯವಾಣಿ 112 , ಮಹಿಳಾ ಸುರಕ್ಷತೆಗಾಗಿ ನಗರದಲ್ಲಿ ನೂತನವಾಗಿ ದಾವಣಗೆರೆ ‘ಸುರಕ್ಷಾ’ ಆಪ್ ಜಾರಿಗೆ ತರಲಾಗಿದ್ದು ಬಳಕೆ ಮಾಡಿ ಎಂದು ಸಲಹೆ ನೀಡಿದರು.
ದಲಿತ ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಂಜುನಾಥ, ನಗರ ಡಿವೈಎಸ್ಪಿ ಮಲ್ಲೇಶ್ ದೊಡ್ಮನಿ, ಪೊಲೀಸ್ ನಿರೀಕ್ಷಕರಾದ ಬಾಲಚಂದ್ರ ನಾಯ್ಕ್, ಗುರುಬಸವರಾಜ, ಪ್ರಭಾವತಿ ಶೇತಸನದಿ, ಸುನೀಲ್ ಕುಮಾರ, ಪಿಎಸ್ಐ ಅಂಜನಪ್ಪ, ಪುಷ್ಪಲತಾ, ಶಮೀಮ್ ಉನ್ನೀಸ, ದಲಿತ ಮುಖಂಡರಾದ ಎಲ್. ಹೆಚ್. ಸಾಗರ್, ಹುಚ್ಚೆಂಗೆಪ್ಪ, ಸೋಮಲಾಪುರದ ಹನುಮಂತಪ್ಪ, ಮಂಜುನಾಥ ಸೇರಿದಂತೆ ದಲಿತ ಮಹಿಳೆಯರು, ಪೌರ ಕಾರ್ಮಿಕರು ಭಾಗವಹಿಸಿದ್ದರು.