SUDDIKSHANA KANNADA NEWS/ DAVANAGERE/ DATE:01-04-2025
ದಾವಣಗೆರೆ: ಪೊಲೀಸ್ ಪೇದೆಯ ಮಗಳು ದಾವಣಗೆರೆ ವಿಶ್ವವಿದ್ಯಾನಿಲಯದ ೨೦೨೩-೨೪ನೇ ಸಾಲಿನ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಚಿನ್ನದ ಪದಕ ಗಳಿಸಿ ಚಿನ್ನದ ಹುಡುಗಿ ಎನಿಸಿದ್ದಾರೆ.
ದಾವಣಗೆರೆ ಗಾಂಧಿನಗರ ಪೊಲೀಸ್ ಠಾಣೆ ಮುಖ್ಯ ಪೇದೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಎಚ್. ಕುಬೇರ್ ನಾಯ್ಕ್ ಮತ್ತು ಅವರ ಪತ್ನಿ ರಶ್ಮಿ ಅವರ ಪುತ್ರಿ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ರಿಯಾ ಪ್ರಥಮ ರ್ಯಾಂಕ್ನೊಂದಿಗೆ ಆರು ಚಿನ್ನದ ಪದಕ ಗಳಿಸಿದ್ದಾರೆ. ಈ ಸಾಧನೆಯೊಂದಿಗೆ ತಮ್ಮ ಕುಟುಂಬದ ಜೊತೆಗೆ ಅಪ್ಪನ ವೃತ್ತಿಗೂ ಗೌರವ ತಂದುಕೊಟ್ಟ ಸಂಭ್ರಮದಲ್ಲಿದ್ದಾರೆ.
‘ವಾಣಿಜ್ಯಶಾಸ್ತ್ರ ನನ್ನ ಆಸಕ್ತಿಯ ವಿಷಯ. ಇದು ಎಲ್ಲ ವ್ಯವಹಾರಗಳ ಮೂಲ ಬೇರು. ಇದರಲ್ಲಿ ಸಾಧನೆ ಮಾಡಬೇಕು ಎಂಬ ಆಶಯದೊಂದಿಗೆ ಅಧ್ಯಯನ ಮಾಡಿದೆ. ನನ್ನ ಪ್ರಯತ್ನಕ್ಕೆ ವಿಶ್ವವಿದ್ಯಾನಿಲಯದ ಅಧ್ಯಾಪಕರು ಪ್ರೋತ್ಸಾಹಿಸಿದರು. ಇದೇ ಕ್ಷೇತ್ರದಲ್ಲಿ ಮುಂದುವರಿಯಬೇಕು, ಸಂಶೋಧನೆ ನಡೆಸಬೇಕು ಎಂಬ ಉದ್ದೇಶವಿದೆ’ ಎಂದು ರಿಯಾ ತಮ್ಮ ಭವಿಷ್ಯದ ಕನಸನ್ನು ವ್ಯಕ್ತಪಡಿಸಿದರು.
ಚಿನ್ನ ಸಾಧಕರು:
ಸ್ನಾತಕೋತ್ತರ ಪದವಿಯಲ್ಲಿ ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗದ ವಿದ್ಯಾರ್ಥಿನಿ ಐ.ಕೆ.ರಿಯಾ ಆರು ಚಿನ್ನದ ಪದಕಗಳನ್ನು ಗಳಿಸಿದ್ದಾರೆ. ಸ್ನಾತಕ ಪದವಿಯಲ್ಲಿ ದಾವಣಗೆರೆ ಎವಿಕೆ ಕಾಲೇಜಿನ ರಕ್ಷಾ ವಿ.ಅಂಗಡಿ (ಬಿಎಸ್ಸಿ), ಹೊಳಲ್ಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎಸ್.ಗಂಗಮ್ಮ (ಬಿ.ಎ), ಚಿತ್ರದುರ್ಗ ಎಸ್.ಆರ್.ಎಸ್ ಶಿಕ್ಷಣ ಮಹಾವಿದ್ಯಾಲಯದ ಎನ್.ಪಿ.ಭವ್ಯಶ್ರೀ (ಶಿಕ್ಷಣ) ಅವರು ತಲಾ ಮೂರು ಪದಕಗಳೊಂದಿಗೆ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಸ್ನಾತಕೋತ್ತರ ಪದವಿಯಲ್ಲಿ ಅರ್ಥಶಾಸ್ತ್ರ ವಿಭಾಗದ ಆರ್.ಟಿ. ಶಶ್ವಂತ ಮತ್ತು ವ್ಯವಹಾರ ನಿರ್ವಹಣೆ ವಿಭಾಗದ ಎಸ್.ಜಿ. ಸೌಂದರ್ಯ ತಲಾ ನಾಲ್ಕು ಚಿನ್ನದ ಪದಕಗಳನ್ನು ಪಡೆದಿದ್ದಾರೆ. ಕೆ.ಸ್ನೇಹಾ (ಇಂಗ್ಲಿಷ್), ಸಿ.ಎನ್. ಅಕ್ಷತಾ (ಕನ್ನಡ), ವರ್ಷಾ ಸಣ್ಣಪ್ಪನವರ (ಜೀವರಸಾಯನ ವಿಜ್ಞಾನ), ಡಿ.ಶ್ರೀಕಾಂತ ಅಂಗಡಿ (ರಸಾಯನಶಾಸ್ತ್ರ), ಗೌರಿ ಮಣ್ಣೂರ (ಗಣಿತಶಾಸ್ತ್ರ), ಎಚ್. ಮೇಘನಾ (ಭೌತಶಾಸ್ತ್ರ ), ಕೆ.ಸಿಂಧು (ಜೀವಶಾಸ್ತ್ರ) ಅವರು ತಲಾ ಮೂರು ಚಿನ್ನದ ಪದಕ ಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಆರ್. ಲಕ್ಷ್ಮಣ (ಪತ್ರಿಕೋದ್ಯಮ), ಸಿ.ಗುರುಪ್ರಸಾದ (ಬಿವಿಎ), ಎವಿಕೆ ಕಾಲೇಜಿನ ಖುಷಿ ಕೋಥಾರಿ (ಬಿಕಾಂ), ಚಿತ್ರದುರ್ಗ ಎಸ್ಆರ್ಎಸ್ ಶಿಕ್ಷಣ ಕಾಲೇಜಿನ ಇ.ಚೈತ್ರಾ (ಶಿಕ್ಷಣ), ಆರ್.ಅಂಜು (ಎಂ.ಪಿಇಡಿ), ಎನ್.ಎನ್.ಯಶ್ವಂತೆ (ಜೈವಿಕ ತಂತ್ರಜ್ಞಾನ),
ಎ.ಪ್ರೀತಿ (ಸಸ್ಯಶಾಸ್ತ್ರ), ಶರ್ಮೀಳಾ (ಕಂಪ್ಯೂಟರ್ ವಿಜ್ಞಾನ), ರುಚಿತಾ ಪಾಟೀಲ (ಸೂಕ್ಷ್ಮಜೀವ ವಿಜ್ಞಾನ), ಬಾಪೂಜಿ ಹೈಟೆಕ್ ಕಾಲೇಜಿನ ಎಚ್.ಟಿ. ಶ್ರವಣಕುಮಾರಿ (ಬಿಸಿಎ) ಅವರು ತಲಾ ಎರಡು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.