SUDDIKSHANA KANNADA NEWS/ DAVANAGERE/ DATE:07-08-2024
ದಾವಣಗೆರೆ: ಪೋಲಿಸ್ ರಕ್ಷಣೆಯಲ್ಲಿ ಒತ್ತುವರಿ ತೆರವುಗೊಳಿಸಲು ಮಹಾನಗರ ಪಾಲಿಕೆ ಸಿಬ್ಬಂದಿ ತೆರಳಿದಾಗ ಒತ್ತುವರಿದಾರರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದಿದ್ದರೂ ಮೂಕಪ್ರೇಕ್ಷಕರಾಗಿ ನಿಲ್ಲುವಂತೆ ಆಗಿದ್ದು, ಪಾಲಿಕೆ ಜಾಗ ಒತ್ತುವರಿ ತೆರವು ಕಾರ್ಯಕ್ಕೆ ಪಾಲಿಕೆಗೆ ತೀವ್ರ ಸಮಸ್ಯೆಯಾಗಿ ಪರಿಣಮಿಸಿದೆ.
32ನೇ ವಾರ್ಡ್ ನ ಆಂಜನೇಯ ದೇವಸ್ಥಾನದ ರಥಬೀದಿ ಅಭಿವೃದ್ಧಿಪಡಿಸಲು ಮಹಾನಗರ ಪಾಲಿಕೆಯಿಂದ ರಸ್ತೆ ಬದಿಗೆ ಫೇವರ್ ಅಳವಡಿಸುವ ಕೆಲಸ ಸುಮಾರು ಒಂದು ತಿಂಗಳಿನಿಂದ ನಡೆಯುತ್ತಿದೆ. ಕೆಲವರು ಫುಟ್ಪಾತ್ ನಲ್ಲಿ ವಾಟರ್ ಟ್ಯಾಂಕ್ ನಿರ್ಮಿಸಿಕೊಂಡಿದ್ದಾರೆ. ಅವುಗಳನ್ನು ತೆರೆವುಗೊಳಿಸಲು ಕಳೆದ ಒಂದು ತಿಂಗಳಿನಿಂದ ಮಹಾನಗರ ಪಾಲಿಕೆ ಸಿಬ್ಬಂದಿ ಮೌಖಿಕ ಸೂಚನೆಯನ್ನು ನೀಡಿದ್ದಾರೆ. ಅವರು ತೆರವುಗೊಳಿಸದೆ ಇದ್ದಾಗ ಲಿಖಿತ ನೋಟಿಸ್ ನೀಡಿದ್ದಾರೆ. ಆದರೂ ಸಹ ಮಹಾನಗರ ಪಾಲಿಕೆ ನೋಟಿಸ್ ಹಾಗೂ ಸಿಬ್ಬಂದಿಯ ಬಗ್ಗೆ ನಿರ್ಲಕ್ಷ್ಯದಿಂದ ಮಾತನಾಡಿದ್ದಾರೆ.
ಈ ಬಗ್ಗೆ ಮಹಾನಗರ ಪಾಲಿಕೆ ಸಿಬ್ಬಂದಿಗಳು ಆಯುಕ್ತರ ಗಮನಕ್ಕೆ ತಂದು ಕೆಟಿಜಿ ನಗರ ಪೊಲೀಸ್ ಠಾಣೆಗೆ ದೂರು ನೀಡಿ ಪೊಲೀಸರ ಸಮ್ಮುಖದಲ್ಲಿ ಈ ದಿನ ತೆರವು ಗಳಿಸಲು ಹೋದಾಗ ಟ್ಯಾಂಕ್ ನಿರ್ಮಿಸಿ ಕೊಂಡವರು ಮಹಾನಗರ ಪಾಲಿಕೆ ಸಿಬ್ಬಂದಿಗೆ ತೆರವುಗೊಳಿಸದಂತೆ ಗಲಾಟೆ ಮಾಡಿದ್ದಾರೆ. ಮಹಾನಗರ ಪಾಲಿಕೆಯಿಂದ ಪೊಲೀಸ್ ಠಾಣೆಗೆ ದೂರು ನೀಡಿ ಪೊಲೀಸರನ್ನು ಕರೆದುಕೊಂಡು ಹೋಗಿದ್ದರೂ ಸಹ ತೆರವುಗೊಳಿಸಲು ಅಡ್ಡಿಪಡಿಸುವವರ ಮೇಲೆ ಯಾವುದೇ ಕ್ರಮ ಕೈಗೊಳ್ಳದೆ ವಿರೋಧ ಮಾಡುವವರನ್ನು ಪೊಲೀಸರು ನೋಡುತ್ತಾ ನಿಂತಿರುವ ಘಟನೆ 32ನೇ ವಾರ್ಡಿನಲ್ಲಿ ನಡೆದಿದೆ.
ಈ ರೀತಿ ಒತ್ತುವರಿದಾರರನ್ನು ತೆರವುಗೊಳಿಸದಿದ್ದರೆ ಮಹಾನಗರ ಪಾಲಿಕೆಯ ರಸ್ತೆ, ಉದ್ಯಾನವನ ಹಾಗೂ ಇನ್ನಿತರೆ ನಿವೇಶನಗಳು, ಒತ್ತುವರಿದಾರರಿಂದ ಕಬಳಿಕೆ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಈಗಾಗಲೇ ನಗರಾದ್ಯಂತ ವಿವಿಧ ವಾರ್ಡ್ ಗಳ ವಿವಿಧ ಕಡೆಗಳಲ್ಲಿ ಉದ್ಯಾನವನಗಳು, ಹಾಗೂ ಪಾಲಿಕೆಯ ಸಾರ್ವಜನಿಕ ಉದ್ದೇಶಕ್ಕೆ ಬಿಟ್ಟ ನಿವೇಶನಗಳು, ರಸ್ತೆಗಳು, ಬಫರ್ ಬಯಲು ಜಾಗಗಳ ಒತ್ತುವರಿಯಾಗಿವೆ. ಇಂತಹ ಒತ್ತುವರಿಗಳನ್ನು ತೆರವುಗೊಳಿಸದಿದ್ದರೆ ಪಾಲಿಕೆಯ ಸಾರ್ವಜನಿಕ ಸಾರ್ವಜನಿಕ ಉಪಯೋಗಕ್ಕೆ ಬಿಟ್ಟಿರುವ ಆಸ್ತಿಗಳು ಉಳಿಯುವುದಿಲ್ಲ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.
ಇನ್ನು ಕೇವಲ 32ನೇ ವಾರ್ಡ್ ನಲ್ಲಿ ಮಾತ್ರವಲ್ಲ, ಬೇರೆ ವಾರ್ಡ್ ಗಳಲ್ಲಿಯೂ ಈ ಸಮಸ್ಯೆ ತಲೆದೋರಿದೆ. ಪಾಲಿಕೆ, ರಸ್ತೆ ಜಾಗ ಒತ್ತುವರಿ ಮಾಡಿಕೊಂಡವರು ಒತ್ತುವರಿ ತೆರವಿಗೆ ಮನವಿ ಮಾಡಿದರೂ ಕೇಳುತ್ತಿಲ್ಲ. ಪಾಲಿಕೆ ನೊಟೀಸ್ ನೀಡಿದರೂ ಕ್ಯಾರೇ ಎನ್ನುತ್ತಿಲ್ಲ. ಆದ್ದರಿಂದ ಯಾವುದೇ ಮುಲಾಜಿಲ್ಲದೇ ಒತ್ತುವರಿದಾರರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಸರ್ಕಾರಿ, ಪಾಲಿಕೆ, ಸಾರ್ವಜನಿಕ ಬಳಕೆ ಜಾಗ ಒತ್ತುವರಿ ಮಾಡಿಕೊಂಡಿದ್ದರೆ ಯಾವ ದಾಕ್ಷಿಣ್ಯಕ್ಕೂ ಒಳಗಾಗದೇ ತೆರವುಗೊಳಿಸಬೇಕು. ಇಂಥವರಿಗೆ ದಂಡ ವಿಧಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.