
ಹೊಸದೆಹಲಿ: ಖ್ಯಾತ ಗೀತರಚನೆಕಾರ ಮತ್ತು ಚಿತ್ರಕಥೆಗಾರ ಜಾವೇದ್ ಅಖ್ತರ್ ಅವರು ಭಗವಾನ್ ಶ್ರೀರಾಮ ಮತ್ತು ರಾಮಾಯಣದ ಮೌಲ್ಯಗಳನ್ನು ಕೊಂಡಾಡಿರುವುದಕ್ಕೆ ಅಖಿಲ ಭಾರತ ಇಮಾಮ್ ಅಸೋಸಿಯೇಷನ್ ಅಧ್ಯಕ್ಷ ಮೌಲಾನಾ ಸಾಜಿದ್ ರಷಿದಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜಾವೇದ್ ಅಖ್ತರ್ ಅವರು ತಮ್ಮ ಹೆಸರನ್ನು ‘ಜಾವೇದ್ ಅಖ್ತರ್’ ಬದಲು ‘ರಾಮ್ ಪಾಲ್’ ಎಂದು ಬದಲಾಯಿಸಿಕೊಳ್ಳಲಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮೌಲಾನಾ ಸಾಜಿದ್ ರಷಿದಿ ಹೇಳಿದ್ದೇನು?
#WATCH | Delhi: On lyricist Javed Akhtar's statement, All India Imam Association (AIAA) President Maulana Sajid Rashidi says, "Javed Akhtar is a businessman. Songs are sold in Bollywood; if he doesn’t make such statements, who would buy his songs? I would like to point out that… https://t.co/RG7XXas0Uk pic.twitter.com/1kbHdoqL3J
— ANI (@ANI) November 17, 2026
ಭಗವಾನ್ ಶ್ರೀರಾಮನು ಕೇವಲ ವ್ಯಕ್ತಿಯಲ್ಲ, ಬದಲಿಗೆ ನೈತಿಕತೆ, ಜೀವನ ವಿಧಾನ ಮತ್ತು ಸೌಂದರ್ಯಶಾಸ್ತ್ರದ ಪ್ರತೀಕವಾಗಿದ್ದು, ಯಾವುದೇ ಧರ್ಮವನ್ನು ಅನುಸರಿಸಿದರೂ ಶ್ರೀರಾಮ ಪ್ರತಿಯೊಬ್ಬ ಭಾರತೀಯನ ರಕ್ತದಲ್ಲಿದ್ದಾನೆ ಎಂದು ಜಾವೇದ್ ಅಖ್ತರ್ ಇತ್ತೀಚೆಗೆ ಹೇಳಿದ್ದರು. ಈ ಹೇಳಿಕೆಯನ್ನು ಕಟುವಾಗಿ ಟೀಕಿಸಿರುವ ಮೌಲಾನಾ ರಷಿದಿ, ಜಾವೇದ್ ಅಖ್ತರ್ ವಾಣಿಜ್ಯ ಲಾಭಕ್ಕಾಗಿ ಹಾಗೂ ಬಾಲಿವುಡ್‌ನಲ್ಲಿ ತಮ್ಮ ಹಾಡುಗಳನ್ನು ಮಾರಾಟ ಮಾಡಲು ಈ ರೀತಿ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಹೆಸರು ಬದಲಾಯಿಸುವಂತೆ ಆಗ್ರಹ: ತಾವೊಬ್ಬ ನಾಸ್ತಿಕ ಎಂದು ಹೇಳಿಕೊಳ್ಳುವ ಜಾವೇದ್ ಅಖ್ತರ್, ಹಿಂದೂಗಳ ಮೆಚ್ಚುಗೆ ಗಳಿಸಲು ಮತ್ತು ವ್ಯಾಪಾರಕ್ಕಾಗಿ ರಾಮನ ಬಗ್ಗೆ ಮಾತನಾಡುತ್ತಿದ್ದಾರೆ. ತಾಕತ್ತಿದ್ದರೆ ತಮ್ಮ ಹೆಸರನ್ನು ‘ರಾಮ್ ಪಾಲ್’ ಎಂದು ಬದಲಾಯಿಸಿಕೊಳ್ಳಲಿ ಎಂದು ರಷಿದಿ ಸವಾಲು ಹಾಕಿದ್ದಾರೆ.
ವ್ಯಾಪಾರಿ ಮನೋಭಾವದ ಆರೋಪ: ಬಾಲಿವುಡ್‌ನಲ್ಲಿ ಸಿನಿಮಾಗಳು ಮತ್ತು ಹಾಡುಗಳು ಮಾರಾಟವಾಗಬೇಕಾದರೆ ಇಂತಹ ಹೇಳಿಕೆಗಳನ್ನು ನೀಡುವುದು ಅಖ್ತರ್‌ಗೆ ಅಭ್ಯಾಸವಾಗಿದೆ. ಅವರು ಒಂದೇ ಹಡಗಿನಲ್ಲಿ ಎರಡು ಕಾಲು ಇಡುವ ಕೆಲಸ ಮಾಡುತ್ತಿದ್ದಾರೆ ಎಂದು ಮೌಲಾನಾ ಟೀಕಿಸಿದ್ದಾರೆ.
ಜಾವೇದ್ ಅಖ್ತರ್ ಹೇಳಿಕೆ: ಸ್ವದೇಶ್ ಸಿನಿಮಾದ “ಮನ್ ಸೆ ರಾವಣ್ ಜೋ ನಿಕಾಲೆ, ರಾಮ್ ಉಸ್ಕೆ ಮನ್ ಮೇ ಹೈ” ಹಾಡನ್ನು ಉಲ್ಲೇಖಿಸಿದ್ದ ಅಖ್ತರ್, ರಾಮ ಭಾರತೀಯರ ಸಂಸ್ಕೃತಿಯ ಭಾಗ ಎಂದು ಅಭಿಪ್ರಾಯಪಟ್ಟಿದ್ದರು.
ಈ ವಿವಾದವು ಈಗ ಸಾಮಾಜಿಕ ಜಾಲತಾಣಗಳು ಹಾಗೂ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.




