SUDDIKSHANA KANNADA NEWS/ DAVANAGERE/ DATE:18-02-2025
ದಾವಣಗೆರೆ: ಗ್ರಾಮ ಪಂಚಾಯಿತಿಗಳು ಸ್ವಂತವಾಗಿ ವಿದ್ಯುತ್ ಉತ್ಪಾದನೆ ಮಾಡಿಕೊಳ್ಳುವ ಯೋಜನೆ ಇದೆ. ದಾವಣಗೆರೆ ಜಿಲ್ಲೆಯಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆ ಮಾಡಿಕೊಳ್ಳಲು ಉದ್ದೇಶಿಸಿ ಇದನ್ನು ಪೈಲೆಟ್ ಕಾರ್ಯಕ್ರಮವಾಗಿ ರೂಪಿಸಲಾಗುತ್ತದೆ ಎಂದು ಇಂಧನ ಸಚಿವ ಕೆ. ಜೆ. ಜಾರ್ಜ್ ಮಾಹಿತಿ ನೀಡಿದರು.
ದಾವಣಗೆರೆಯಲ್ಲಿ ಮಾತನಾಡಿದ ಅವರು, ಪಂಚಾಯಿತಿಗಳು ಕುಡಿಯುವ ನೀರು ಪೂರೈಕೆ, ಬೀದಿದೀಪಗಳಿಗೆ ಅಗತ್ಯವಿರುವ ವಿದ್ಯುತ್ನ್ನು ಉತ್ಪಾದನೆ ಮಾಡಿಕೊಂಡು ಸ್ವಾವಲಂಬಿಯಾಗಬೇಕು. ಇದಕ್ಕಾಗಿ 400 ಎಕರೆ ಜಾಗವನ್ನು ಗುರುತಿಸಿ ಸೋಲಾರ್ ಪ್ಯಾನಲ್ ಅಳವಡಿಸಿ ಗ್ರಿಡ್ಗೆ ವಿದ್ಯುತ್ ನೀಡಿ ಅಷ್ಟೆ ವಿದ್ಯುತ್ನ್ನು ವಾಪಸ್ ನೀಡಲಾಗುತ್ತದೆ. ಇದರಿಂದ ವಿದ್ಯುತ್ ಉಳಿತಾಯವಾಗಲಿದೆ ಮತ್ತು ಪಂಚಾಯಿತಿಗಳ ಮೇಲಿನ ಆರ್ಥಿಕ ಹೊರೆ ಕಡಿಮೆಯಾಗಲಿದೆ ಎಂದು ತಿಳಿಸಿದರು.
ರೈತರಿಗೆ 7 ಗಂಟೆ ವಿದ್ಯುತ್:
ರೈತರ ಕೃಷಿ ಪಂಪ್ ಸೆಟ್ಗಳಿಗೆ ದಿನದಲ್ಲಿ 7 ಗಂಟೆಗಳ ಕಾಲ ತ್ರಿಫೇಸ್ ವಿದ್ಯುತ್ ಸರಬರಾಜು ಮಾಡಲಾಗುತ್ತದೆ. ದಾವಣಗೆರೆ ಜಿಲ್ಲೆ ಆನಗೋಡು, ಮಾಯಕೊಂಡ ಭಾಗದಲ್ಲಿ 3 ಅಥವಾ 4 ಗಂಟೆಗಳ ಕಾಲ ಮಾತ್ರ ಕೃಷಿ ಪಂಪ್ಸೆಟ್ಗಳಿಗೆ ವಿದ್ಯುತ್ ನೀಡಲಾಗುತ್ತದೆ ಎಂದು ಶಾಸಕ ಕೆ.ಎಸ್.ಬಸವಂತಪ್ಪ ಪ್ರಸ್ತಾಪಿಸಿದಾಗ ಎಲ್ಲಾ ರೈತರಿಗೂ ದಿನದಲ್ಲಿ 7 ಗಂಟೆಗಳ ಕಾಲ ವಿದ್ಯುತ್ ನೀಡುವುದು ಸರ್ಕಾರದ ನೀತಿಯಾಗಿದ್ದು ಅದರಂತೆ ಬೆಸ್ಕಾಂ ಕ್ರಮ ಕೈಗೊಳ್ಳಬೇಕು. ಓವರ್ ಲೋಡಿಂಗ್ ಆದರೆ ಅದನ್ನು ಬೇರೆಡೆ ವರ್ಗಾಯಿಸಿ 7 ಗಂಟೆ ಕೃಷಿ ಪಂಪ್ಸೆಟ್ಗೆ ವಿದ್ಯುತ್ ನೀಡಲೇಬೇಕೆಂದು ಸೂಚನೆ ನೀಡಿದರು.