
ಕೊಚ್ಚಿ: ತನ್ನ ದಿಟ್ಟ ಅಭಿನಯ ಹಾಗೂ ವಿಭಿನ್ನ ಪಾತ್ರಗಳ ಮೂಲಕ ದಕ್ಷಿಣ ಭಾರತದ ಚಿತ್ರರಂಗದಲ್ಲಿ ವಿಶೇಷ ಗುರುತಿಸಿಕೊಂಡಿರುವ ಖ್ಯಾತ ನಟಿ ಪಾರ್ವತಿ ತಿರುವೋತು ತಮಗೆ ಎಡಿಎಚ್‌ಡಿ (Attention-Deficit/Hyperactivity Disorder – ADHD) ಇರುವುದಾಗಿ ಬಹಿರಂಗಪಡಿಸಿದ್ದಾರೆ.
ರಂಜಿನಿ ಹರಿದಾಸ್ ಅವರ ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಮಾತನಾಡಿದ ಅವರು, ಈ ಆರೋಗ್ಯ ಸ್ಥಿತಿಯ ಕುರಿತು ಮುಕ್ತವಾಗಿ ಮಾತನಾಡಿದ್ದು, ಕಳೆದ ಕೆಲವು ವರ್ಷಗಳ ಕಡಿಮೆ ಕೆಲಸದ ಅವಧಿಯನ್ನು ದಾಟಿ, ಈಗ ಮಲಯಾಳಂ, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಹೊಸ ಹುರುಪಿನೊಂದಿಗೆ ಬಿಡುವಿಲ್ಲದೆ ಕೆಲಸ ಮಾಡಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.
ತಮ್ಮ ವೃತ್ತಿಜೀವನದ ಎರಡು ದಶಕಗಳಲ್ಲಿ ಇದೇ ಅತ್ಯಂತ ಬಿರುಸಿನ ಹಂತವೆಂದು ಬಣ್ಣಿಸಿದ ಪಾರ್ವತಿ, “ನನಗೆ ಎಡಿಎಚ್‌ಡಿಯಿದೆ, ಆದರೆ ನಾನು ಅದನ್ನು ದೊಡ್ಡ ವಿಷಯವನ್ನಾಗಿ ಮಾಡಲು ಬಯಸುವುದಿಲ್ಲ. ಸಮಯವು ನನಗೆ ಸಾಮಾನ್ಯ ರೀತಿಯಲ್ಲಿ ಕೆಲಸ ಮಾಡುವುದಿಲ್ಲ, ಅದು ಸ್ಥಿತಿಸ್ಥಾಪಕ ಸ್ವರೂಪದ್ದಾಗಿದೆ. ನಾನು ಬಯಸಿದರೆ ಅದನ್ನು ವಿಸ್ತರಿಸಬಹುದು, ಆದರೆ ಇದರರ್ಥ ನಾನು ನಿದ್ರಿಸುವುದಿಲ್ಲ ಎಂದಲ್ಲ, ನನ್ನ ನಿದ್ರೆಯನ್ನು ನಾನು ಸರಿಯಾಗಿ ನೋಡಿಕೊಳ್ಳುತ್ತೇನೆ” ಎಂದು ವಿವರಿಸಿದ್ದಾರೆ.
2022ರಲ್ಲಿ ಕೇವಲ ಎರಡು ಪ್ರಾಜೆಕ್ಟ್‌ಗಳು ಹಾಗೂ 2023ರಲ್ಲಿ ‘ತಂಗಲಾನ್’ ಚಿತ್ರಕ್ಕಾಗಿ ಕೇವಲ 75 ದಿನಗಳು ಮಾತ್ರ ಕೆಲಸ ಮಾಡಿದ್ದ ಅವರು, ಸೃಜನಶೀಲತೆ ಮತ್ತು ಬೆಳವಣಿಗೆಗಾಗಿ ಬೇರೆಡೆ ಸ್ಫೂರ್ತಿ ಹುಡುಕುವ ಬದಲು ತಮ್ಮನ್ನು ತಾವು ಕೆಲಸದಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದ್ದಾಗಿ ಹೇಳಿದ್ದಾರೆ.
ಎಡಿಎಚ್‌ಡಿ ಬಹಿರಂಗ ಹಾಗೂ ಸಕಾರಾತ್ಮಕ ಚಿಂತನೆ: ಎಡಿಎಚ್‌ಡಿ ಸ್ಥಿತಿಯನ್ನು ಲೈಟಾಗಿ ಸ್ವೀಕರಿಸಿರುವ ಪಾರ್ವತಿ, “ಮುಂದಿನ ಮೂರು ವರ್ಷಗಳ ಕಾಲ ಹಿಂದೆಂದಿಗಿಂತಲೂ ಹೆಚ್ಚು ಕಷ್ಟಪಟ್ಟು ಕೆಲಸ ಮಾಡೋಣ, ನೀವೇನು ಸಾಯುವುದಿಲ್ಲ, ವಿಫಲರಾದರೂ ವೈಭವದಿಂದ ವಿಫಲರಾಗಿ, ಸೋಲುವ ಹಕ್ಕನ್ನು ಕಾಯ್ದುಕೊಳ್ಳಿ” ಎಂದು ಯುವ ನಟಿಯರಿಗೆ ಸ್ಫೂರ್ತಿದಾಯಕ ಸಂದೇಶ ನೀಡಿದ್ದಾರೆ.
ನಟಿಯ ಮುಂಬರುವ ಭರ್ಜರಿ ಪ್ರಾಜೆಕ್ಟ್‌ಗಳು: ಪ್ರಸ್ತುತ ಬೆಜೋಯ್ ನಂಬಿಯಾರ್ ಅವರ ‘ತು ಯಾ ಮೈನ್’ ಹಾಗೂ ನಿಶಾಮ್ ಬಶೀರ್ ಅವರ ‘ಐ, ನೊಬಡಿ’ ಚಿತ್ರಗಳಲ್ಲಿ ನಟಿಸಿರುವ ಪಾರ್ವತಿ, ಶಹಾದ್ ನಿಲಂಬೂರ್ ಅವರ ‘ಪ್ರಧಾಮ ದೃಷ್ಟಿಯ ಕುಟ್ಟಕ್ಕಾರ್’ ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ.
ಅಪರೂಪದ ಒಪ್ಪಂದಗಳು: ಅಜಿತ್ಪಾಲ್ ಸಿಂಗ್ ನಿರ್ದೇಶನದ, ಹೃತಿಕ್ ರೋಷನ್ ನಿರ್ಮಾಣದ ಅಮೆಜಾನ್ ಪ್ರೈಮ್ ಸೀರಿಸ್ ‘ಸ್ಟಾರ್ಮ್’, ನಾಗಚೈತನ್ಯ ಜತೆ ‘ದೂತ’ ಸೀಸನ್ 2 ಹಾಗೂ ಕಾರ್ತಿಕ್ ಆರ್ಯನ್ ಅಭಿನಯದ ‘ಕ್ಯಾಪ್ಟನ್ ಇಂಡಿಯಾ’ ಮುಂತಾದ ದೊಡ್ಡ ಪ್ರಾಜೆಕ್ಟ್‌ಗಳಲ್ಲಿ ಪಾರ್ವತಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.




