
ಮೀರೂಟ್ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಮೀರೂಟ್ನಲ್ಲಿ ಕೇಶ ವಿನ್ಯಾಸದ ವಿಚಾರವಾಗಿ ಗೃಹಹಿಂಸೆಯ ಘಟನೆ ಬೆಳಕಿಗೆ ಬಂದಿದೆ. ಕೂದಲಿಗೆ ಬಣ್ಣ ಹಚ್ಚಿಕೊಂಡಿದ್ದನ್ನು ಪ್ರಶ್ನಿಸಿ, ಪತಿ ಹಾಗೂ ಅತ್ತೆ-ಮಾವಂದಿರು ತನ್ನ ಮೇಲೆ ಹಲ್ಲೆ ನಡೆಸಿ, ಜಡೆ ಕತ್ತರಿಸಿ ಆಸಿಡ್ ದಾಳಿಗೆ ಯತ್ನಿಸಿದ್ದಾರೆ ಎಂದು ಆರೋಪಿಸಿ ವಿವಾಹಿತ ಮಹಿಳೆಯೊಬ್ಬರು ತುಂಡರಿಸಿದ ಜಡೆಯೊಂದಿಗೆ ಲಿಸಾರಿ ಗೇಟ್ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.
ಸಮರ್ ಗಾರ್ಡನ್ ಪ್ರದೇಶದ ನಿವಾಸಿ ರೇಖಾನ್ ಎಂಬುವರೊಂದಿಗೆ ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದ ಸಂತ್ರಸ್ತೆಗೆ ಇಬ್ಬರು ಮಕ್ಕಳಿದ್ದಾರೆ. ಪತಿಯು ತನ್ನ ಚಾರಿತ್ರ್ಯದ ಬಗ್ಗೆ ಅನಗತ್ಯವಾಗಿ ಸಂಶಯಪಟ್ಟು ನಿರಂತರವಾಗಿ ದೈಹಿಕ ಹಲ್ಲೆ ಮತ್ತು ಕಿರುಕುಳ ನೀಡುತ್ತಿದ್ದರು ಎಂದು ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ.
ಶನಿವಾರ ಸಂಜೆ ಪತ್ನಿ ಕೂದಲಿಗೆ ಬಣ್ಣ ಹಚ್ಚಿಕೊಂಡಿರುವುದನ್ನು ಕಂಡು ಕೋಪಗೊಂಡ ಪತಿ ರೇಖಾನ್, ಅತ್ತೆ ರೋಷನ್ ಹಾಗೂ ಸಾಹಿಲ್ ಮತ್ತು ಸೋನು ಸೇರಿಕೊಂಡು ಭೀಕರವಾಗಿ ಹಲ್ಲೆ ನಡೆಸಿದ್ದಾರೆ. ಜತೆಗೆ ಆಕೆಯ ಜಡೆಯನ್ನು ಕತ್ತರಿಸಿ, ಮೈ ಮೇಲೆ ಆಸಿಡ್ ಎರಚಲು ಯತ್ನಿಸಿದ್ದಾರೆ.
ಜಡೆ ಕತ್ತರಿಸಿ ಆಸಿಡ್ ದಾಳಿ ಯತ್ನ: ಕೂದಲಿಗೆ ಬಣ್ಣ ಹಚ್ಚಿದ್ದಕ್ಕೆ ಗರಂ ಆದ ಪತಿ ಮತ್ತು ಆತನ ಮನೆಯವರು ಮಹಿಳೆಯ ಮೇಲೆ ದೌರ್ಜನ್ಯವೆಸೆದು, ಆಕೆಯ ಜಡೆಯನ್ನು ಕತ್ತರಿಸಿ ಹಾಕಿದ್ದು ಮಾತ್ರವಲ್ಲದೆ ಆಸಿಡ್ ದಾಳಿಗೆ ಯತ್ನಿಸಿದ್ದಾರೆ.
ರಕ್ಷಣೆ: ಗಲಾಟೆ ಹಾಗೂ ಕಿರುಚಾಟ ಕೇಳಿ ಅಕ್ಕಪಕ್ಕದ ಮನೆಯವರು ತಕ್ಷಣವೇ ‘ಡಯಲ್-112’ ತುರ್ತು ಸಹಾಯವಾಣಿಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸ್ ತಂಡ ಮಹಿಳೆಯನ್ನು ರಕ್ಷಿಸಿದೆ.
ಪೊಲೀಸರಿಂದ ಮೊಕದ್ದಮೆ ದಾಖಲು: ಸಂತ್ರಸ್ತ ಮಹಿಳೆಯು ತನ್ನ ಪ್ರಾಣಕ್ಕೆ ಭಯವಿದೆ ಎಂದು ಅಳಲು ತೋಡಿಕೊಂಡಿದ್ದು, ಆರೋಪಿಗಳ ವಿರುದ್ಧ ತಕ್ಕ ಕಾನೂನು ಕ್ರಮ ಕೈಗೊಂಡು ರಕ್ಷಣೆ ನೀಡುವಂತೆ ಕೋರಿದ್ದಾರೆ. ದೂರಿನ ಆಧಾರದ ಮೇಲೆ ವೃತ್ತ ನಿರೀಕ್ಷಕ (ಕೊತ್ವಾಲಿ) ಸಂಗ್ರಾಮ್ ಸಿಂಗ್ ಅವರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.




