Home ಕ್ರೈಂ ನ್ಯೂಸ್ ಲಾಹೋರ್‌ನ ಐತಿಹಾಸಿಕ ಹಿಂದೂ, ಸಿಖ್ ಹೆಸರುಗಳ ಮರುನಾಮಕರಣ ನಿರ್ಧಾರದಿಂದ ಹಿಂದೆ ಸರಿದ ಪಾಕಿಸ್ತಾನ ಸರ್ಕಾರ!
ಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಲಾಹೋರ್‌ನ ಐತಿಹಾಸಿಕ ಹಿಂದೂ, ಸಿಖ್ ಹೆಸರುಗಳ ಮರುನಾಮಕರಣ ನಿರ್ಧಾರದಿಂದ ಹಿಂದೆ ಸರಿದ ಪಾಕಿಸ್ತಾನ ಸರ್ಕಾರ!

Share
ಲಾಹೋರ್‌
Share

ಲಾಹೋರ್: ತೀವ್ರಗಾಮಿಗಳ ಮತ್ತು ಸೋಶಿಯಲ್ ಮೀಡಿಯಾ ವ್ಲಾಗರ್‌ಗಳ ತೀವ್ರ ವಿರೋಧಕ್ಕೆ ಮಣಿದಿರುವ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯ ಸರ್ಕಾರವು, ಲಾಹೋರ್‌ನ ಪ್ರಮುಖ ರಸ್ತೆ ಮತ್ತು ಸ್ಥಳಗಳಿಗೆ ದೇಶದ ವಿಭಜನೆಗೂ ಮುನ್ನ ಇದ್ದ ಹಿಂದೂ, ಸಿಖ್ ಹಾಗೂ ಬ್ರಿಟಿಷ್ ಕಾಲದ ಹಳೆಯ ಹೆಸರುಗಳನ್ನು ಮರುಸ್ಥಾಪಿಸುವ ತನ್ನ ನಿರ್ಧಾರವನ್ನು ಸದ್ಯಕ್ಕೆ ಮುಂದೂಡಿದೆ.

ಮುಖ್ಯಮಂತ್ರಿ ಮರ್ಯಮ್ ನವಾಜ್ ಮತ್ತು ಮಾಜಿ ಪ್ರಧಾನಿ ನವಾಜ್ ಷರೀಫ್ ನೇತೃತ್ವದ ‘ಲಾಹೋರ್ ಹೆರಿಟೇಜ್ ಏರಿಯಾಸ್ ರಿವೈವಲ್’ (LHAR) ಸಮಿತಿಯು ಈ ವರ್ಷದ ಮಾರ್ಚ್‌ನಲ್ಲಿ ಲಾಹೋರ್‌ನ ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವ ಉದ್ದೇಶದಿಂದ ಈ ಐತಿಹಾಸಿಕ ಯೋಜನೆಯನ್ನು ಕೈಗೆತ್ತಿಕೊಂಡಿತ್ತು. ಮೇ ತಿಂಗಳಲ್ಲಿ ಪಂಜಾಬ್ ಕ್ಯಾಬಿನೆಟ್ ಇದಕ್ಕೆ ಅನುಮೋದನೆಯನ್ನೂ ನೀಡಿತ್ತು.

ಆದರೆ, ಈ ಪ್ರಸ್ತಾಪ ಹೊರಬೀಳುತ್ತಿದ್ದಂತೆ ತೀವ್ರಗಾಮಿ ಸಂಘಟನೆಗಳು ಹಾಗೂ ಸಾಮಾಜಿಕ ಜಾಲತಾಣಗಳ ವ್ಲಾಗರ್‌ಗಳು ಇದಕ್ಕೆ ಧಾರ್ಮಿಕ ಬಣ್ಣ ಬಳಿದು ಸರ್ಕಾರದ ವಿರುದ್ಧ ತಿರುಗಿಬಿದ್ದರು. “ಹಿಂದೂ ಮತ್ತು ಸಿಖ್ ಹೆಸರುಗಳನ್ನು ಪುನರುಜ್ಜೀವನಗೊಳಿಸಲಾಗುತ್ತಿದೆ” ಎಂದು ಆರೋಪಿಸಿ ಸಿಎಂ ಮರ್ಯಮ್ ನವಾಜ್ ಅವರನ್ನು ಗುರಿಯಾಗಿಸಿಕೊಂಡು ತೀವ್ರ ವಾಗ್ದಾಳಿ ನಡೆಸಲಾಯಿತು. ಈ ಬ್ಯಾಕ್‌ಲ್ಯಾಶ್‌ಗೆ ಹೆದರಿದ ಸರ್ಕಾರ ಈಗ ತನ್ನ ನಿರ್ಧಾರದಿಂದ ಸಂಪೂರ್ಣ ಬ್ಯಾಕ್‌ಫುಟ್‌ಗೆ ಸರಿದಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಲಾಹೋರ್ ಡೆಪ್ಯುಟಿ ಕಮಿಷನರ್ ಮೊಹಮ್ಮದ್ ಅಲಿ ಇಜಾಜ್, “ಸದ್ಯಕ್ಕೆ ಇಂತಹ ಯಾವುದೇ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಯಾವ ಹೆಸರುಗಳು ಬದಲಾಗಬೇಕಿತ್ತು?

ಯೋಜನೆಯ ಪ್ರಕಾರ, ವಿಭಜನೆಯ ನಂತರ ಬದಲಾಗಿದ್ದ ಇಸ್ಲಾಂಪುರವನ್ನು ಮತ್ತೆ ‘ಕ್ರಿಶನ್ ನಗರ’ ಎಂದು, ಮುಸ್ತಫಾಬಾದ್ ಅನ್ನು ‘ಧರಂಪುರ’ ಎಂದು, ಬಾಬರಿ ಮಸೀದಿ ಚೌಕ್ ಅನ್ನು ‘ಜೈನ್ ಮಂದಿರ್ ರಸ್ತೆ’ ಎಂದು ಮತ್ತು ಅಲ್ಲಾಮಾ ಇಕ್ಬಾಲ್ ರಸ್ತೆಯನ್ನು ‘ಜೈಲ್ ರಸ್ತೆ’ ಎಂದು ಬದಲಾಯಿಸಲು ನಿರ್ಧಾರ ಮಾಡಲಾಗಿತ್ತು. ಇತಿಹಾಸಕಾರರು ಮತ್ತು ತಜ್ಞರು ಲಾಹೋರ್‌ನ ಈ ಬಹುಸಂಸ್ಕೃತಿಯ ಪರಂಪರೆಯನ್ನು ಉಳಿಸಲು ಬೆಂಬಲ ಸೂಚಿಸಿದ್ದರೂ, ತೀವ್ರಗಾಮಿಗಳ ಒತ್ತಡಕ್ಕೆ ಮಣಿದು ಸರ್ಕಾರ ಯೋಜನೆಯನ್ನು ಸದ್ಯಕ್ಕೆ ಕೈಬಿಟ್ಟಿದೆ.

Share

Leave a comment

Leave a Reply

Your email address will not be published. Required fields are marked *