ಕಿರಿಬಾಟಿ: ಪೆಸಿಫಿಕ್ ಸಾಗರದಲ್ಲಿ ಸುಮಾರು 100 ದಿನಗಳ ಕಾಲ ಹಾದಿ ತಪ್ಪಿ ತೇಲಾಡುತ್ತಿದ್ದ ಒಂದೇ ಕುಟುಂಬದ ಐವರು ರೋಚಕವಾಗಿ ಬದುಕುಳಿದ ಪವಾಡದಂತ ಘಟನೆಯೊಂದು ಬೆಳಕಿಗೆ ಬಂದಿದೆ.
ಮೈಕ್ರೋನೇಷ್ಯಾದ ದ್ವೀಪಗಳ ನಡುವೆ ಕೇವಲ ಒಂದು ಗಂಟೆಯ ಪ್ರಯಾಣಕ್ಕಾಗಿ 20 ಅಡಿ ಸಣ್ಣ ದೋಣಿಯಲ್ಲಿ ಹೊರಟಿದ್ದ 9 ಜನರ ಪೈಕಿ, ಬಿರುಗಾಳಿಗೆ ಸಿಲುಕಿ ದಾರಿ ತಪ್ಪಿದ ಬಳಿಕ 4,800ಕ್ಕೂ ಹೆಚ್ಚು ಕಿಲೋಮೀಟರ್ ದೂರ ಸಾಗರದಲ್ಲಿ ತೇಲಿಕೊಂಡು ಕಿರಿಬಾಟಿ ದೇಶದ ಫ್ಯಾನಿಂಗ್ ದ್ವೀಪ ತಲುಪಿದ್ದಾರೆ.
ಈ ಭೀಕರ ಪಯಣದ ಅವಧಿಯಲ್ಲಿ ಮಗು ಸೇರಿದಂತೆ ಕುಟುಂಬದ ನಾಲ್ವರು ಸದಸ್ಯರು ಆಹಾರ ಮತ್ತು ನೀರಿಲ್ಲದೆ ಸಾವನ್ನಪ್ಪಿದ್ದು, ಅವರ ಮೃತದೇಹಗಳನ್ನು ಸಾಗರಕ್ಕೇ ಎಸೆಯಬೇಕಾದ ಕಠಿಣ ಪರಿಸ್ಥಿತಿ ನಿರ್ಮಾಣವಾಗಿತ್ತು. ಬದುಕುಳಿದ ಮೂವರು ಪುರುಷರು ಹಾಗೂ ಇಬ್ಬರು ಹದಿಹರೆಯದ ಬಾಲಕರು ಮಳೆ ನೀರು ಕುಡಿದು, ಸಿಕ್ಕ ಆಮೆ ಹಾಗೂ ಸಮುದ್ರದ ಹಕ್ಕಿಗಳನ್ನು ತಿಂದು ಪ್ರಾಣ ಉಳಿಸಿಕೊಂಡಿದ್ದಾರೆ.
ದುರಂತದ ಆರಂಭ: ಜುಲೈ 30ರಂದು 9 ಜನರು ದಿನಸಿ ತರಲು ದೋಣಿಯಲ್ಲಿ ಹೊರಟಿದ್ದಾಗ ಬಿರುಗಾಳಿಗೆ ಸಿಲುಕಿ ದೋಣಿಯ ಇಂಧನ ಖಾಲಿಯಾಗಿ ದಾರಿ ತಪ್ಪಿದರು.
ವ್ಯರ್ಥವಾದ ಶೋಧ: ಯುಎಸ್ ಕೋಸ್ಟ್ ಗಾರ್ಡ್ ನಡೆಸಿದ ಶೋಧ ಕಾರ್ಯಾಚರಣೆ ಹಲವು ದಿನಗಳ ಬಳಿಕ ಫಲ ನೀಡದೆ ಸ್ಥಗಿತಗೊಂಡಿತ್ತು.
ಆಹಾರ ಮತ್ತು ನೀರು: ಮಳೆ ನೀರನ್ನು ಶೇಖರಿಸಿ ಕುಡಿಯುವುದು ಮತ್ತು ಸಮುದ್ರದಲ್ಲಿದ್ದ ಆಮೆ ಹಾಗೂ ಹಕ್ಕಿಗಳನ್ನು ಹಸಿಯಾಗಿ ತಿಂದು ಜೀವ ಉಳಿಸಿಕೊಂಡರು.
ಚರ್ಚ್ ಗಂಟೆ ಸದ್ದು: ನವೆಂಬರ್ 1ರಂದು ದೋಣಿ ಕಲ್ಲುಬಂಡೆಗೆ ಅಪ್ಪಳಿಸಿ ಧ್ವಂಸಗೊಂಡಾಗ, ಚರ್ಚ್ ಗಂಟೆಯ ಸದ್ದು ಕೇಳಿ ಕಷ್ಟಪಟ್ಟು ಈಜಿಕೊಂಡು ದಡಕ್ಕೆ ತಲುಪಿದರು.
ಸ್ಥಳೀಯರ ನೆರವು: ತೀವ್ರ ನಿರ್ಜಲೀಕರಣ ಮತ್ತು ಪೌಷ್ಟಿಕಾಂಶದ ಕೊರತೆಯಿಂದ ನಡೆಯಲಾಗದೆ ತೆವಳುತ್ತಿದ್ದ ಇವರನ್ನು ಗ್ರಾಮಸ್ಥರು ಹಾಗೂ ಚರ್ಚ್ ಧರ್ಮಗುರುಗಳು ರಕ್ಷಿಸಿ ಆರೈಕೆ ಮಾಡಿದ್ದಾರೆ.
ಸುಮಾರು 3,000 ಮೈಲಿಗಳಷ್ಟು ಸುದೀರ್ಘ ಹಾಗೂ ಭೀಕರ ಸಾಗರ ಪಯಣದ ಬಳಿಕ ಪ್ರಾಣಾಪಾಯದಿಂದ ಪಾರಾಗಿರುವ ಐವರ ಆರೋಗ್ಯ ಪ್ರಸ್ತುತ ಚೇತರಿಸಿಕೊಳ್ಳುತ್ತಿದೆ.





Leave a comment