ನವದೆಹಲಿ: ಮಹಿಳಾ ಮೀಸಲಾತಿ ಕಾಯ್ದೆ ಜಾರಿಗೊಳಿಸುವುದನ್ನು ಕ್ಷೇತ್ರ ವಿಂಗಡಣೆ (Delimitation) ಹಾಗೂ ಜನಗಣತಿಗೆ ಲಿಂಕ್ ಮಾಡುತ್ತಿರುವ ಕೇಂದ್ರ ಸರ್ಕಾರದ ಕ್ರಮಕ್ಕೆ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ರಾಜ್ಯಸಭಾ ಸಂಸದ ಪಿ. ಚಿದಂಬರಂ ಕಿಡಿಕಾರಿದ್ದಾರೆ.
ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಕೇಂದ್ರ ಸಚಿವ ಕಿರಣ್ ರಿಜಿಜು ನಡುವಿನ ವಾಕ್ಸಮರದ ಬೆನ್ನಲ್ಲೇ ಚಿದಂಬರಂ, ರಾಹುಲ್ ಗಾಂಧಿ ಪರ ಬ್ಯಾಟ್ ಬೀಸಿದ್ದಾರೆ.
ಮಹಿಳಾ ಮೀಸಲಾತಿ ಮಸೂದೆಯು (106ನೇ ಸಂವಿಧಾನ ತಿದ್ದುಪಡಿ) ಈಗಾಗಲೇ 2023ರಲ್ಲೇ ಸಂಸತ್ತಿನಲ್ಲಿ ಅಂಗೀಕಾರಗೊಂಡಿದೆ. ಹೀಗಿರುವಾಗ, ಇದನ್ನು ಕ್ಷೇತ್ರ ವಿಂಗಡಣೆ ಹಾಗೂ ಜನಗಣತಿಗೆ ಲಿಂಕ್ ಮಾಡುವ ಅಗತ್ಯವಿರಲಿಲ್ಲ. ಬಿಜೆಪಿ ಸರ್ಕಾರವು ತನ್ನ ದುರುದ್ದೇಶಪೂರಿತ “ಹಿಡನ್ ಅಜೆಂಡಾ”ದಿಂದಾಗಿ ಈ ಲಿಂಕ್ ಜೋಡಿಸಿದೆ ಎಂದು ‘X’ (ಟ್ವಿಟರ್) ನಿಕಟಪೋಸ್ಟ್‌ನಲ್ಲಿ ಪಿ. ಚಿದಂಬರಂ ಆರೋಪಿಸಿದ್ದಾರೆ. ಕೇಂದ್ರ ಸರ್ಕಾರ ಈ ಲಿಂಕ್ ಅನ್ನು ತಕ್ಷಣವೇ ರದ್ದುಗೊಳಿಸಿದರೆ, 2029ರ ಲೋಕಸಭಾ ಚುನಾವಣೆಗೂ ಮುನ್ನವೇ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಜಾರಿಗೊಳಿಸಲು ಸಾಧ್ಯವಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಇನ್ನೊಂದೆಡೆ, ಕಾಂಗ್ರೇಸ್ ಸಂಸದ ಕಾರ್ತಿ ಚಿದಂಬರಂ ಕೂಡ ದಕ್ಷಿಣ ಭಾರತದ ಪ್ರಾದೇಶಿಕ ಪಕ್ಷಗಳಾದ ಡಿಎಂಕೆ ಹಾಗೂ ಟಿಡಿಪಿಗೆ ಎಚ್ಚರಿಕೆ ನೀಡಿದ್ದಾರೆ. ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಶೇ. 50 ರಷ್ಟು ಹೆಚ್ಚಿಸುವ ಕೇಂದ್ರದ ಪ್ರಸ್ತಾಪವು ದಕ್ಷಿಣಕ್ಕಿಂತ ಉತ್ತರ ಭಾರತದ ರಾಜ್ಯಗಳ ರಾಜಕೀಯ ಬಲವನ್ನು ಮತ್ತಷ್ಟು ಹೆಚ್ಚಿಸಲಿದೆ. ಸಂಸತ್ತಿನ ಗಾತ್ರ ಹೆಚ್ಚಿಸದೆ, ಸದ್ಯ ಇರುವ 543 ಸೀಟುಗಳಲ್ಲೇ 181 ಸೀಟುಗಳನ್ನು ಮಹಿಳೆಯರಿಗೆ ತಕ್ಷಣ ಕಾಯ್ದಿರಿಸಬಹುದು ಎಂದು ಅವರು ಸಲಹೆ ನೀಡಿದ್ದಾರೆ.





Leave a comment