Home ಕ್ರೈಂ ನ್ಯೂಸ್ ಮೇ 1ರಿಂದ ಆನ್‌ಲೈನ್ ಗೇಮಿಂಗ್ ಹೊಸ ನಿಯಮ ಜಾರಿ: ಹಣದ ಆಟಗಳಿಗೆ ಬ್ರೇಕ್, ಇ-ಸ್ಪೋರ್ಟ್ಸ್‌ಗೆ ಮಾನ್ಯತೆ
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಮೇ 1ರಿಂದ ಆನ್‌ಲೈನ್ ಗೇಮಿಂಗ್ ಹೊಸ ನಿಯಮ ಜಾರಿ: ಹಣದ ಆಟಗಳಿಗೆ ಬ್ರೇಕ್, ಇ-ಸ್ಪೋರ್ಟ್ಸ್‌ಗೆ ಮಾನ್ಯತೆ

Share
ನಿಯಮ
Share

ಹೊಸ ದೆಹಲಿ: ಭಾರತದ ಡಿಜಿಟಲ್ ಗೇಮಿಂಗ್ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತರಬಲ್ಲ ‘ಆನ್‌ಲೈನ್ ಗೇಮಿಂಗ್ ನಿಯಂತ್ರಣ ನಿಯಮಗಳು-2026′ ಮೇ 1 ರಿಂದ ಜಾರಿಗೆ ಬರಲಿವೆ. ಕಳೆದ ವರ್ಷ ಸಂಸತ್ತಿನಲ್ಲಿ ಅಂಗೀಕಾರವಾಗಿದ್ದ ‘PROG ಕಾಯ್ದೆ-2025’ ರ ಅಡಿಯಲ್ಲಿ ಈ ಹೊಸ ನಿಯಮಗಳನ್ನು ರೂಪಿಸಲಾಗಿದ್ದು, ಇನ್ಮುಂದೆ ಹಣದ ಆಮಿಷ ಒಡ್ಡುವ ಆನ್‌ಲೈನ್ ಗೇಮ್‌ಗಳಿಗೆ ಕಠಿಣ ನಿಯಂತ್ರಣ ಹೇರಲಾಗುತ್ತದೆ.

ಯಾವುದು ನಿಷೇಧ? ಯಾವುದು ಅನುಮತಿ?

 ಹೊಸ ನಿಯಮಗಳ ಪ್ರಕಾರ, ಹಣದ ಪಣ ಹೂಡಿ ಆಡುವ (Online Money Games) ಆಟಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆದರೆ, ಇ-ಸ್ಪೋರ್ಟ್ಸ್ (E-sports) ಮತ್ತು ಸಾಮಾಜಿಕ ಗೇಮ್‌ಗಳಿಗೆ (Social Games) ಉತ್ತೇಜನ ನೀಡಲು ಸರ್ಕಾರ ನಿರ್ಧರಿಸಿದೆ. ಇ-ಸ್ಪೋರ್ಟ್ಸ್ ನಡೆಸುವ ಸಂಸ್ಥೆಗಳು ಇನ್ಮುಂದೆ ಕಡ್ಡಾಯವಾಗಿ ಸರ್ಕಾರದ ಅಡಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಯಶಸ್ವಿ ನೋಂದಣಿಯಾದ ನಂತರ ಅವರಿಗೆ 10 ವರ್ಷಗಳ ಅವಧಿಯ ಡಿಜಿಟಲ್ ಪ್ರಮಾಣಪತ್ರ ನೀಡಲಾಗುತ್ತದೆ.

ಗೇಮಿಂಗ್ ಪ್ರಾಧಿಕಾರ ಸ್ಥಾಪನೆ:

ಆನ್‌ಲೈನ್ ಗೇಮಿಂಗ್ ವಲಯವನ್ನು ಮೇಲ್ವಿಚಾರಣೆ ಮಾಡಲು ಕೇಂದ್ರ ಸರ್ಕಾರವು ‘ಭಾರತೀಯ ಆನ್‌ಲೈನ್ ಗೇಮಿಂಗ್ ಪ್ರಾಧಿಕಾರ’ವನ್ನು (Online Gaming Authority of India – OGAI) ಸ್ಥಾಪಿಸಿದೆ. ಇದು ಐಟಿ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸಲಿದ್ದು, ಇದರಲ್ಲಿ ಗೃಹ, ಹಣಕಾಸು, ಕ್ರೀಡೆ ಮತ್ತು ಕಾನೂನು ಸಚಿವಾಲಯದ ಹಿರಿಯ ಅಧಿಕಾರಿಗಳು ಇರಲಿದ್ದಾರೆ.

ಬಳಕೆದಾರರ ಸುರಕ್ಷತೆಗೆ ಆದ್ಯತೆ:

ವಯಸ್ಸಿನ ಮಿತಿ: ಅಪ್ರಾಪ್ತರು ಗೇಮಿಂಗ್ ಚಟಕ್ಕೆ ಬೀಳದಂತೆ ತಡೆಯಲು ಕಟ್ಟುನಿಟ್ಟಿನ ವಯಸ್ಸಿನ ದೃಢೀಕರಣ (Age-gating) ವ್ಯವಸ್ಥೆ ಇರಲಿದೆ.

ಸಮಯದ ನಿರ್ಬಂಧ: ಗೇಮ್ ಆಡುವ ಅವಧಿಯನ್ನು ನಿಯಂತ್ರಿಸಲು ಕಾಲಮಿತಿಯನ್ನು ಅಳವಡಿಸಲಾಗುತ್ತದೆ.

ದೂರು ಸಲ್ಲಿಸಲು ಅವಕಾಶ: ಗೇಮಿಂಗ್ ವೇಳೆ ಯಾವುದೇ ವಂಚನೆ ಅಥವಾ ತೊಂದರೆಯಾದಲ್ಲಿ, ಬಳಕೆದಾರರು ಮೊದಲು ಕಂಪನಿಗೆ ದೂರು ನೀಡಬೇಕು. ಅಲ್ಲಿ ಸರಿಯಾದ ಸ್ಪಂದನೆ ಸಿಗದಿದ್ದರೆ 30 ದಿನಗಳ ಒಳಗಾಗಿ ಸರ್ಕಾರಿ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಬಹುದು.

ಬ್ಯಾಂಕುಗಳ ಪಾತ್ರ:

ಯಾವುದೇ ಗೇಮಿಂಗ್ ವೇದಿಕೆಯು ಸರ್ಕಾರದಿಂದ ಅಧಿಕೃತ ಅನುಮತಿ ಪಡೆದಿದೆಯೇ ಎಂದು ಬ್ಯಾಂಕುಗಳು ಪರಿಶೀಲಿಸಬೇಕು. ನಿಷೇಧಿತ ಅಥವಾ ಅನಧಿಕೃತ ಆಟಗಳಿಗೆ ಹಣ ವರ್ಗಾವಣೆಯಾಗದಂತೆ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿವೆ.

Share

Leave a comment

Leave a Reply

Your email address will not be published. Required fields are marked *