ಬೆಂಗಳೂರು: ಕಾಲಕಾಲಕ್ಕೆ ಶಿಕ್ಷಕರ ನೇಮಕಾತಿ ಮತ್ತು ತರಬೇತಿಗಳನ್ನು ನಡೆಸಲಾಗುತ್ತಿದೆ. 2024ರಲ್ಲಿ 14,499 ಪದವಿ ಪ್ರಾಥಮಿಕ ಶಿಕ್ಷಕರ ನೇಮಕಾತಿ ಮಾಡಲಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ 5,267 ಮತ್ತು ಇತರೆ ಪ್ರದೇಶಗಳಲ್ಲಿ 5,000 ಶಿಕ್ಷಕರ ನೇಮಕಾತಿ ಮಾಡಲಾಗುತ್ತಿದೆ. 800 ಹೊಸ ಪಿಯು ಉಪನ್ಯಾಸಕರ ನೇಮಕಾತಿ ಮಾಡಲಾಗಿದೆ. ಹೊಸದಾಗಿ 18000 ಕ್ಕೂ ಹೆಚ್ಚು ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಮಹತ್ವದ ಮಾಹಿತಿ ನೀಡಿದರು.
ಈ ಸುದ್ದಿಯನ್ನೂ ಓದಿ: ಪೌರಕಾರ್ಮಿಕರ ವಿಶೇಷ ನೇರ ನೇಮಕಾತಿಗೆ ಅರ್ಜಿ ಆಹ್ವಾನ
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯೋಜಿಸಿದ್ದ 70ನೇ ಕನ್ನಡ ರಾಜ್ಯೋತ್ಸವದಲ್ಲಿ ನಾಡನ್ನು ಉದ್ದೇಶಿಸಿ ಮಾತನಾಡಿದ ಅವರು, ಅನುದಾನಿತ ಶಾಲೆಗಳಿಗೆ 5,000 ಶಿಕ್ಷಕರ ಹುದ್ದೆಗಳನ್ನು ನೇಮಕ ಮಾಡಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದರು.
ಇತ್ತೀಚೆಗೆ ತಾನೆ ಪ್ರೊ.ಸುಖ್‌ದೇವ್ ಥೋರಟ್ ಅವರ ಅಧ್ಯಕ್ಷತೆಯಲ್ಲಿ ರಚನೆಯಾಗಿದ್ದ ರಾಜ್ಯ ಶಿಕ್ಷಣ ನೀತಿ ಆಯೋಗವು ತನ್ನ ವರದಿಯನ್ನು ನೀಡಿದೆ. ರಾಜ್ಯದ್ದೆ ಆದ ಶಿಕ್ಷಣ ನೀತಿಯು ರಚನೆಯಾಗಿರುವುದು ಇದೇ ಮೊದಲು. ಸದರಿ ವರದಿಯನ್ನು ಗಂಭೀರವಾಗಿ ಪರಿಶೀಲಿಸಿ ಅದರ ಅನುಷ್ಠಾನಕ್ಕೆ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಮಾಹಿತಿ ನೀಡಿದರು.
ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದ ಯೋಜನೆಗಳ ಜೊತೆಗೆ ಮಕ್ಕಳ ಬದುಕು ರೂಪುಗೊಳ್ಳಲು ಪೋಷಕರ ಪಾತ್ರವೂ ಅಷ್ಟೇ ಮಹತ್ವದ್ದಾಗಿದೆ. ಹೊಸ ತಲೆಮಾರು ಹಿಂದೆಂದೂ ಇಲ್ಲದ ಪ್ರಮಾಣದಲ್ಲಿ ಸಂಕಷ್ಟಗಳನ್ನು ಎದುರಿಸುತ್ತಿದೆ. ಮೊಬೈಲ್ ಫೋನು, ಇಂಟರ್ನೆಟ್ಟು, ಆರ್ಟಿಫೀಷಿಯಲ್ ಇಂಟೆಲಿಜೆನ್ಸುಗಳು ಇಬ್ಬಾಯ ಖಡ್ಗದಂತೆ ಕೆಲಸ ಮಾಡುತ್ತಿವೆ. ಶೇ.25 ರಷ್ಟು ಅನುಕೂಲವಾಗಿದೆಯೆಂದು ಭಾವಿಸುವಾಗಲೆ ಶೇ.75 ರಷ್ಟು ಪ್ರಮಾಣದಲ್ಲಿ ಆತಂಕಗಳನ್ನು ಉಂಟು ಮಾಡುತ್ತಿದೆ. ಮಕ್ಕಳ ಕುತೂಹಲಗಳನ್ನು, ಮುಗ್ಧತೆಯನ್ನು ಇವು ಕಿತ್ತುಕೊಳ್ಳುತ್ತಿವೆ. ಇದರಿಂದಾಗಿ ಬೆಳೆಯಬೇಕಾದ ಮಕ್ಕಳ ಮನಸ್ಸು ಬಂಜರಾಗುವಂತಹ ಪರಿಸ್ಥಿತಿ ಬಂದೊದಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ನಮ್ಮ ರಾಜ್ಯವು ತಲಾದಾಯದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಶೇ.101 ರಷ್ಟು ಪ್ರಗತಿಯನ್ನು ಸಾಧಿಸಿದೆ. ಈ ಮೂಲಕ ಅತಿ ಹೆಚ್ಚು ತಲಾದಾಯ ಹೊಂದಿರುವ ರಾಜ್ಯವಾಗಿ ಹೊರಹೊಮ್ಮಿದೆ. ಜನರಲ್ಲಿ ಕೊಳ್ಳುವ ಸಾಮರ್ಥ್ಯ ವನ್ನು ಹೆಚ್ಚಿಸಿ, ಅವರಿಗೆ ಆರ್ಥಿಕ, ಸಾಮಾಜಿಕ ಶಕ್ತಿಯನ್ನು ತುಂಬುವ ಮೂಲಕ ಅಭಿವೃದ್ಧಿ ಸಾಧ್ಯ ಎಂಬುದನ್ನು ನಾವು ಸಾಧಿಸಿ ತೋರಿಸಿದ್ದೇವೆ ಎಂದು ತಿಳಿಸಿದರು.






