ಗ್ರೇಟರ್ ನೋಯ್ಡಾ: ಗ್ರೇಟರ್ ನೋಯ್ಡಾದ ನಗ್ಲಾ ಶ್ರೀ ಪದಮ್ ಗ್ರಾಮದಲ್ಲಿ ಒಂದೇ ಕುಟುಂಬದ ಐವರು ಶಂಕಾಸ್ಪದವಾಗಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆಘಾತಕಾರಿ ತಿರುವು ಸಿಕ್ಕಿದೆ. ಆರಂಭದಲ್ಲಿ ಆಹಾರ ವಿಷಪೂರಿತಗೊಂಡು (ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿತ್ತು. ಆದರೆ, ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಕುಟುಂಬದ ಮುಖ್ಯಸ್ಥ ಮಹೇಶ್ (37) ತಾನೇ ನೂಡಲ್ಸ್ನಲ್ಲಿ ವಿಷ ಬೆರೆಸಿ ಪತ್ನಿ ಮತ್ತು ಮೂವರು ಮಕ್ಕಳಿಗೆ ಉಣಿಸಿ, ತಾನೂ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.
ಶುಕ್ರವಾರ ಸಂಜೆ ಸ್ಥಳೀಯ ಮೇಳಕ್ಕೆ ತೆರಳಿ ವಾಪಸಾಗಿದ್ದ ಕುಟುಂಬವು ರಾತ್ರಿ ನೂಡಲ್ಸ್ ಸೇವಿಸಿತ್ತು. ಶನಿವಾರ ಬೆಳಿಗ್ಗೆ ಮಹೇಶ್, ಅವರ ಪತ್ನಿ ಲಲಿತಾ (35), ಮಕ್ಕಳಾದ ಲಡ್ಡು (11), ಮಿಷ್ಟಿ (7) ಹಾಗೂ ಸಾಕ್ಷಾತ್ (3) ಶವವಾಗಿ ಪತ್ತೆಯಾಗಿದ್ದರು. ಘಟನಾ ಸ್ಥಳವನ್ನು ಪರಿಶೀಲಿಸಿದ ಆಹಾರ ಸುರಕ್ಷತಾ ಅಧಿಕಾರಿಗಳು ಹಾಗೂ ಪೊಲೀಸರು ಇದು ಆಹಾರ ವಿಷಪೂರಿತ ಪ್ರಕರಣವಲ್ಲ, ಬದಲಿಗೆ ಮಾರಕ ವಿಷವನ್ನು ಉದ್ದೇಶಪೂರ್ವಕವಾಗಿ ಬೆರೆಸಲಾದ ಪ್ರಕರಣ ಎಂದು ಸ್ಪಷ್ಟಪಡಿಸಿದ್ದಾರೆ.
ಡೆತ್ ನೋಟ್ ಪತ್ತೆ: ಮೃತನ ಮೊಬೈಲ್ ಫೋನ್ನಲ್ಲಿ ಆಡಿಯೋ ನೋಟ್ ಪತ್ತೆಯಾಗಿದ್ದು, ಆಸ್ತಿ ಹಂಚಿಕೆ ವಿಚಾರದಲ್ಲಿ ಕಿರುಕುಳ ನೀಡುತ್ತಿದ್ದ ತನ್ನ ಇಬ್ಬರು ಸಹೋದರಿಯರು ಹಾಗೂ ಭಾವನನ್ನು ಸಾವುಗಳಿಗೆ ಹೊಣೆಗಾರರನ್ನಾಗಿ ಮಾಡಿದ್ದಾನೆ.
ಆರೋಪಿಗಳ ಬಂಧನ: ಆಡಿಯೋ ಆಧರಿಸಿ ಪೊಲೀಸರು ಮಹೇಶ್ನ ಇಬ್ಬರು ಸಹೋದರಿಯರು ಮತ್ತು ಭಾವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಆಹಾರ ಅಧಿಕಾರಿಗಳ ಸ್ಪಷ್ಟನೆ: ಘಟನಾ ಸ್ಥಳದಲ್ಲಿ ಯಾವುದೇ ಅವಧಿ ಮೀರಿದ (Expired) ಆಹಾರ ಪದಾರ್ಥಗಳು ಪತ್ತೆಯಾಗಿಲ್ಲ. ಅಲ್ಲದೆ, ಸಂತ್ರಸ್ತರಲ್ಲಿ ವಾಂತಿ ಅಥವಾ ಭೇದಿಯಂತಹ ಆಹಾರ ವಿಷಪೂರಿತ ಲಕ್ಷಣಗಳು ಕಂಡುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ನೋಯ್ಡಾ ಪೊಲೀಸರು, ಆಸ್ತಿ ವಿವಾದ ಮತ್ತು ಆಡಿಯೋ ಸಂದೇಶದ ಸತ್ಯಾಸತ್ಯತೆಯನ್ನು ಆಧರಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.





Leave a comment