ಕಾಬೂಲ್ / ನ್ಯೂಯಾರ್ಕ್: ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಅಧಿಕಾರಕ್ಕೆ ಬಂದ ನಂತರ ಕಳೆದ ಐದು ವರ್ಷಗಳಲ್ಲಿ 2.6 ಮಿಲಿಯನ್ಗಿಂತಲೂ ಹೆಚ್ಚು (26 ಲಕ್ಷಕ್ಕೂ ಹೆಚ್ಚು) ಹೆಣ್ಣುಮಕ್ಕಳು ಪ್ರೌಢಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂದು ವಿಶ್ವಸಂಸ್ಥೆಯ ಮಕ್ಕಳ ನಿಧಿ (UNICEF) ಕಳವಳ ವ್ಯಕ್ತಪಡಿಸಿದೆ.
ವಿಶ್ವದಲ್ಲೇ ಹೆಣ್ಣುಮಕ್ಕಳಿಗೆ ಹಾಗೂ ಮಹಿಳೆಯರಿಗೆ ಪ್ರೌಢ ಮತ್ತು ಉನ್ನತ ಶಿಕ್ಷಣವನ್ನು ಸಂಪೂರ್ಣವಾಗಿ ನಿಷೇಧಿಸಿರುವ ಏಕೈಕ ದೇಶ ಅಫ್ಗಾನಿಸ್ತಾನವಾಗಿದೆ ಎಂದು ಯೂನಿಸೆಫ್ ತನ್ನ ವರದಿಯಲ್ಲಿ ತಿಳಿಸಿದೆ.
2021ರ ಸೆಪ್ಟೆಂಬರ್ನಿಂದ 6ನೇ ತರಗತಿಗಿಂತ ಮೇಲ್ಪಟ್ಟ ಹೆಣ್ಣುಮಕ್ಕಳಿಗೆ ಶಿಕ್ಷಣವನ್ನು ನಿರ್ಬಂಧಿಸಲಾಗಿದ್ದು, 2022ರ ಡಿಸೆಂಬರ್ನಿಂದ ಮಹಿಳೆಯರಿಗೆ ವಿಶ್ವವಿದ್ಯಾಲಯ ಪ್ರವೇಶವನ್ನು ಸಂಪೂರ್ಣವಾಗಿ ತಡೆಯಲಾಗಿದೆ. ಈ ದೀರ್ಘಾವಧಿಯ ಶಿಕ್ಷಣ ವಂಚನೆಯು ಯುವತಿಯರ ಜೀವನದ ಪ್ರಮುಖ ಕಲಿಕಾ ಹಂತವನ್ನೇ ಕಸಿದುಕೊಂಡಿದ್ದು, ಅವರ ಭವಿಷ್ಯಕ್ಕೆ ಭಾರಿ ಧಕ್ಕೆ ತಂದೊಡ್ಡಿದೆ ಎಂದು ಸಂಸ್ಥೆ ಹೇಳಿದೆ.
ಸಾಮಾಜಿಕ ಅಪಾಯಗಳು: ಶಾಲೆಗಳಿಂದ ಹೊರಗುಳಿದ ಹೆಣ್ಣುಮಕ್ಕಳಿಗೆ ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ, ಶೋಷಣೆ ಮತ್ತು ಲಿಂಗಾಧಾರಿತ ದೌರ್ಜನ್ಯಗಳ ಅಪಾಯ ತೀವ್ರವಾಗಿ ಹೆಚ್ಚಾಗಿದೆ.
ಆರ್ಥಿಕ ನಷ್ಟ: ಶಿಕ್ಷಣ ಮತ್ತು ಉದ್ಯೋಗದ ಮೇಲಿನ ಈ ನಿರ್ಬಂಧಗಳಿಂದಾಗಿ ಅಫ್ಗಾನಿಸ್ತಾನವು ವಾರ್ಷಿಕವಾಗಿ ಸುಮಾರು 84 ಮಿಲಿಯನ್ ಅಮೆರಿಕನ್ ಡಾಲರ್ ಆರ್ಥಿಕ ನಷ್ಟವನ್ನು ಅನುಭವಿಸುತ್ತಿದೆ.
ಆರೋಗ್ಯ ಮತ್ತು ಶಿಕ್ಷಕರ ಕೊರತೆ: 2030ರ ವೇಳೆಗೆ ದೇಶವು 20,000 ಮಹಿಳಾ ಶಿಕ್ಷಕರು ಮತ್ತು 5,400 ಮಹಿಳಾ ಆರೋಗ್ಯ ಕಾರ್ಯಕರ್ತರನ್ನು ಕಳೆದುಕೊಳ್ಳುವ ಭೀತಿಯಲ್ಲಿದೆ.
ಮುಂದಿನ ಪೀಳಿಗೆಯ ಮೇಲೆ ಪರಿಣಾಮ: ಅನಕ್ಷರಸ್ಥ ತಾಯಂದಿರ ಸಂಖ್ಯೆ ಹೆಚ್ಚಾಗುವುದರಿಂದ ಮಕ್ಕಳಲ್ಲಿ ಅಪೌಷ್ಟಿಕತೆ, ಲಸಿಕೆ ಅಭಾವ ಹಾಗೂ ದೈಹಿಕ ಬೆಳವಣಿಗೆ ಕುಂಠಿತಗೊಳ್ಳುವ ಅಪಾಯಗಳು ಎದುರಾಗಲಿವೆ.
ಅಫ್ಗಾನಿಸ್ತಾನದಲ್ಲಿ ಹೆಚ್ಚುತ್ತಿರುವ ಬಡತನ ಮತ್ತು ಸ್ಥಳಾಂತರದ ನಡುವೆ ಈ ಅಪಾಯಗಳು ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿರುವುದು ಸಮುದಾಯದ ಅಭಿವೃದ್ಧಿಗೆ ಮಾರಕವಾಗಿದ್ದು, ಕೂಡಲೇ ಹೆಣ್ಣುಮಕ್ಕಳಿಗೆ ಶಾಲಾ ಬಾಗಿಲುಗಳನ್ನು ತೆರೆಯಬೇಕೆಂದು ಯುಎನ್ಒ ಆಗ್ರಹಿಸಿದೆ.





Leave a comment