
ನವದೆಹಲಿ: ಪ್ರಮುಖ ಪ್ಯಾಕೇಜ್ಡ್ ಕುಡಿಯುವ ನೀರಿನ ಬ್ರ್ಯಾಂಡ್ ಆದ ಬಿಸ್ಲೆರಿ ಇಂಟರ್ನ್ಯಾಶನಲ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಕಾನೂನು ಕ್ರಮ ಜರುಗಿಸಲು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಭಾನುವಾರ ಅನುಮತಿ ನೀಡಿದೆ. ಕಂಪನಿಯ ಆವರಣದಿಂದ ಸಂಗ್ರಹಿಸಲಾದ ಪ್ಯಾಕೇಜ್ಡ್ ಕುಡಿಯುವ ನೀರಿನ ಮಾದರಿಯು ಪ್ರಯೋಗಾಲಯದ ಪರೀಕ್ಷೆಯಲ್ಲಿ ಅಸುರಕ್ಷಿತ ಎಂದು ದೃಢಪಟ್ಟ ಹಿನ್ನೆಲೆಯಲ್ಲಿ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.
ಬಿಸ್ಲೆರಿ ಸಂಸ್ಥೆಯ ಆವರಣದಿಂದ ಸಂಗ್ರಹಿಸಲಾದ ‘ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್’ (ಮಿನರಲ್ ವಾಟರ್ ಹೊರತುಪಡಿಸಿ) ಮಾದರಿಯಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಪ್ರಮಾಣದ ಬ್ರೋಮೇಟ್ ಅಂಶ ಕಂಡುಬಂದಿದೆ. ಕಂಪನಿಯ ಮೇಲ್ಮನವಿಯ ಮೇರೆಗೆ ಮಾದರಿಯನ್ನು ರೆಫರಲ್ ಆಹಾರ ಪ್ರಯೋಗಾಲಯಕ್ಕೆ ಕಳುಹಿಸಿದಾಗ, ಅದರಲ್ಲಿ ಪಾಲಿನ್ಯೂಕ್ಲಿಯರ್ ಆರೋಮ್ಯಾಟಿಕ್ ಹೈಡ್ರೋಕಾರ್ಬನ್ಗಳು ಇರುವುದೂ ಪತ್ತೆಯಾಗಿದೆ. ಅಂತಾರಾಷ್ಟ್ರೀಯ ಕ್ಯಾನ್ಸರ್ ಸಂಶೋಧನಾ ಸಂಸ್ಥೆ ಮತ್ತು ಅಮೆರಿಕದ ಇಪಿಎ ಬ್ರೋಮೇಟ್ ಅನ್ನು ಸಂಭವನೀಯ ಕ್ಯಾನ್ಸರ್ ಕಾರಕ ಎಂದು ವರ್ಗೀಕರಿಸಿವೆ.
ಈ ಕ್ರಮವು ಕೇವಲ ಪ್ಯಾಕೇಜ್ಡ್ ಕುಡಿಯುವ ನೀರಿನ ಮಾದರಿಗೆ ಮಾತ್ರ ಸಂಬಂಧಿಸಿದ್ದು, ಮಿನರಲ್ ವಾಟರ್ ಉತ್ಪನ್ನಗಳಿಗೆ ಅನ್ವಯಿಸುವುದಿಲ್ಲ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.
ಕ್ಯಾನ್ಸರ್ ಕಾರಕ ಅಂಶಗಳು ಪತ್ತೆ: ಪ್ರಯೋಗಾಲಯದ ಪರೀಕ್ಷೆಯಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಬ್ರೋಮೇಟ್ ಮತ್ತು ಪಿಎಹೆಚ್ (PAHs) ಅಂಶಗಳು ಪತ್ತೆಯಾಗಿದ್ದು, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ಅಡಿಯಲ್ಲಿ ನೀರನ್ನು ಅಸುರಕ್ಷಿತ ಎಂದು ಘೋಷಿಸಲಾಗಿದೆ.
ಬಿಸ್ಲೆರಿ ಕಂಪನಿಯ ಸ್ಪಷ್ಟನೆ: ಗ್ರಾಹಕರಿಗೆ ಸುರಕ್ಷಿತ ಕುಡಿಯುವ ನೀರು ಒದಗಿಸುವುದು ತಮ್ಮ ಮೊದಲ ಆದ್ಯತೆಯಾಗಿದ್ದು, ಕಟ್ಟುನಿಟ್ಟಿನ ಗುಣಮಟ್ಟ ನಿಯಂತ್ರಣಗಳನ್ನು ಪಾಲಿಸಲಾಗುತ್ತಿದೆ. ಕಾನೂನು ಪ್ರಕ್ರಿಯೆಯಲ್ಲಿ ಎಫ್ಎಸ್ಎಸ್ಎಐಗೆ ಸಂಪೂರ್ಣ ಸಹಕಾರ ನೀಡುವುದಾಗಿ ಕಂಪನಿ ತಿಳಿಸಿದೆ.
ಇತರ ಕಂಪನಿಗಳ ಮೇಲೂ ಕ್ರಮ: ಬಿಸ್ಲೆರಿ ಮಾತ್ರವಲ್ಲದೆ ವಸಂತ್ ಮಸಾಲಾ, ಟಿಟ್-ಬಿಟ್ ಫುಡ್ಸ್, ಮೀಮಾಂಸ ಇಂಡಸ್ಟ್ರೀಸ್ ಮತ್ತು ಆಶಾ ಕನ್ಫೆಕ್ಷನರಿ ವಿರುದ್ಧವೂ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಲಾಗಿದೆ. ಅಲ್ಲದೆ, ಆಶಾ ಕನ್ಫೆಕ್ಷನರಿಯ ಚಾಕೊಲೇಟ್ ಬಿಸ್ಕತ್ತುಗಳನ್ನು ಹಿಂಪಡೆಯಲು ಆದೇಶಿಸಲಾಗಿದ್ದು, ಊರ್ಮಿ ಲೈಫ್ಸೈನ್ಸಸ್ ಹಾಗೂ ಗೌರ್ ಆಯುರ್ವೇದಿಕ್ ಸ್ಟೋರ್ ಪರವಾನಗಿಗಳನ್ನು ಅಮಾನತುಗೊಳಿಸಲಾಗಿದೆ.
ಪ್ರಸಕ್ತ ಕ್ಯಾಲೆಂಡರ್ ವರ್ಷದಲ್ಲಿ ಆಹಾರ ವ್ಯಾಪಾರ ನಿರ್ವಾಹಕರು, ಇ-ಕಾಮರ್ಸ್ ಕಂಪನಿಗಳು, ಎನರ್ಜಿ ಡ್ರಿಂಕ್ಸ್ ಮತ್ತು ಮದ್ಯ ತಯಾರಿಕಾ ಸಂಸ್ಥೆಗಳ ವಿರುದ್ಧ ಎಫ್ಎಸ್ಎಸ್ಎಐ ತನ್ನ ತಪಾಸಣೆ ಹಾಗೂ ಜಾರಿ ಕ್ರಮಗಳನ್ನು ತೀವ್ರಗೊಳಿಸಿದೆ.




