
ಹೊಸದೆಹಲಿ: ಮದುವೆಯ ಸುಳ್ಳು ಭರವಸೆ ನೀಡಿ ಅನೇಕ ಮಹಿಳೆಯರನ್ನು ಲೈಂಗಿಕ ಹಾಗೂ ಆರ್ಥಿಕ ಶೋಷಣೆಗೆ ಒಳಪಡಿಸಿ ತಲೆಮರೆಸಿಕೊಂಡಿದ್ದ ಮೊಹಮ್ಮದ್ ಮಜಿನ್ ಎಂಬಾತನನ್ನು ಕೇಂದ್ರೀಯ ತನಿಖಾ ದಳದ ಸಮನ್ವಯದ ಕಾರ್ಯಾಚರಣೆಯಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ಅಧಿಕಾರಿಗಳು ಬಂಧಿಸಿ ಭಾರತಕ್ಕೆ ಗಡೀಪಾರು ಮಾಡಿದ್ದಾರೆ.
ಮಹಾರಾಷ್ಟ್ರ ಪೊಲೀಸರ ತನಿಖೆಯ ಪ್ರಕಾರ, ಈ ಆರೋಪಿಯು ಬಡ ಹಾಗೂ ಯುವತಿಯರನ್ನು ವಂಚಿಸಿ ಅವರ ಖಾಸಗಿ ವಿಡಿಯೋಗಳನ್ನು ರೆಕಾರ್ಡ್ ಮಾಡಿ ಹಣ ವಸೂಲಿ ಮಾಡಿದ್ದನು.
ಮಜಿನ್ ವಿರುದ್ಧ ಇಂಟರ್ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಲಾಗಿದ್ದು, ಯುಎಇಯಲ್ಲಿ ಆತನನ್ನು ಪತ್ತೆ ಹಚ್ಚಿ ಬಂಧಿಸಲಾಯಿತು. ಸಿಬಿಐ, ವಿದೇಶಾಂಗ ಸಚಿವಾಲಯ, ಗೃಹ ಸಚಿವಾಲಯ, ಮಹಾರಾಷ್ಟ್ರ ಪೊಲೀಸ್ ಮತ್ತು ಯುಎಇ ಅಧಿಕಾರಿಗಳ ಜಂಟಿ ಕಾರ್ಯಾಚರಣೆಯ ಫಲವಾಗಿ ಆತನನ್ನು ನವೆಂಬರ್ 20ರಂದು ಕೊಚ್ಚಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆತರಲಾಗಿದ್ದು, ಮಹಾರಾಷ್ಟ್ರ ಪೊಲೀಸರ ವಿಶೇಷ ತಂಡ ವಶಕ್ಕೆ ಪಡೆದಿದೆ.
14 ಮಹಿಳೆಯರಿಗೆ ವಂಚನೆ: ಮಜಿನ್ ಎಂಬ ವಂಚಕನು ಕೇವಲ ಒಬ್ಬಳಲ್ಲದೆ, ಬರೋಬ್ಬರಿ 14 ಮಹಿಳೆಯರಿಗೆ ಮದುವೆಯ ಸುಳ್ಳು ಭರವಸೆ ನೀಡಿ ದೈಹಿಕ, ಮಾನಸಿಕ ಹಾಗೂ ಆರ್ಥಿಕವಾಗಿ ಶೋಷಣೆ ಮಾಡಿದ್ದಾನೆ ಎಂದು ಸಿಬಿಐ ಬಹಿರಂಗಪಡಿಸಿದೆ.
ಆರ್ಥಿಕ ವಂಚನೆ ಮತ್ತು ವಿಡಿಯೋ ಬ್ಲಾಕ್ಮೇಲ್: ಸಂತ್ರತೆಯೊಬ್ಬರಿಂದ 18 ಲಕ್ಷ ರೂ.ಗಳನ್ನು ಪಡೆದು ಮೋಸ ಮಾಡಿದ್ದಲ್ಲದೆ, ಮಹಿಳೆಯರ ಅಂತರಂಗದ ದೃಶ್ಯಗಳ ವಡಿಯೋಗಳನ್ನು ಮಾಡಿ ಬೆದರಿಕೆ ಹಾಕುತ್ತಿದ್ದ ಎಂದು ಆರೋಪಿಸಲಾಗಿದೆ.
ಇಂಟರ್ಪೋಲ್ ರೆಡ್ ನೋಟಿಸ್ ಯಶಸ್ಸು: ವಿದೇಶಕ್ಕೆ ಪರಾರಿಯಾಗಿದ್ದ ಆರೋಪಿಯ ವಿರುದ್ಧ ಮಹಾರಾಷ್ಟ್ರ ಪೊಲೀಸರ ಮನವಿ ಮೇರೆಗೆ ಸಿಬಿಐ ರೆಡ್ ನೋಟಿಸ್ ಜಾರಿಗೊಳಿಸಿ, ಯುಎಇ ಅಧಿಕಾರಿಗಳ ಸಹಕಾರದೊಂದಿಗೆ ಬಂಧಿಸುವಲ್ಲಿ ಯಶಸ್ವಿಯಾಗಿದೆ.
2019ರಿಂದ 300ಕ್ಕೂ ಹೆಚ್ಚು ಅಪರಾಧಿಗಳ ಸೆರೆ: ಸಿಬಿಐ ಹಾಗೂ ಭರತ್ಪೋಲ್ (BHARATPOL) ಸಹಯೋಗದಲ್ಲಿ 2019ರಿಂದ ಇಲ್ಲಿವರೆಗೆ 300ಕ್ಕೂ ಅಧಿಕ ತಲೆತಪ್ಪಿಸಿಕೊಂಡ ಅಪರಾಧಿಗಳನ್ನು ಭಾರತಕ್ಕೆ ಕರೆತರಲಾಗಿದ್ದು, 2026ರಲ್ಲೇ ಈವರೆಗೆ 74 ಮಂದಿಯನ್ನು ವಾಪಸ್ ಕರೆತರಲಾಗಿದೆ.




